ಮಂಗಳವಾರ, ಸೆಪ್ಟೆಂಬರ್ 28, 2021
24 °C
₹ 500 ಕೋಟಿ ಬಿಡುಗಡೆ ಮಾಡಲು ಕೇಂದ್ರ ಜಲಶಕ್ತಿ ಸಚಿವರಿಗೆ ಕೋರಿಕೆ

ಕೆ.ಸಿ ವ್ಯಾಲಿ ಕಾಮಗಾರಿ: ಅನುದಾನಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆ.ಸಿ ವ್ಯಾಲಿ ಯೋಜನೆ 2ನೇ ಹಂತದ ಕಾಮಗಾರಿಗೆ ₹ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರಿಗೆ ಮನವಿ ಮಾಡಿದರು.

ದೆಹಲಿಯಲ್ಲಿ ಮಂಗಳವಾರ ಶೇಖಾವತ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಮಾಧುಸ್ವಾಮಿ ಮತ್ತು ನಾರಾಯಣಸ್ವಾಮಿ, ‘ಬಯಲುಸೀಮೆಯ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. 1,200 ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ. ಜತೆಗೆ ಜಿಲ್ಲೆಯಲ್ಲಿ ನದಿ, ನಾಲೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ’ ಎಂದು ಮನವರಿಕೆ ಮಾಡಿಕೊಟ್ಟರು.

‘ಅವಿಭಜಿತ ಕೋಲಾರ ಜಿಲ್ಲೆಯ 257 ಕೆರೆ ತುಂಬಿಸುವ ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈಗಾಗಲೇ ₹ 1,323 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮೊದಲ ಹಂತದಲ್ಲಿ 126 ಕೆರೆ ತುಂಬಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ನಾರಾಯಣಸ್ವಾಮಿ ವಿವರಿಸಿದರು.

‘ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೆರೆಗಳಿಗೆ ಭರ್ತಿಯಾಗಿರುವ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಅಲ್ಲದೇ, ಸುತ್ತಮುತ್ತಲಿನ ಕೃಷಿ ಜಮೀನುಗಳಲ್ಲಿನ ರೈತರ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಜಿಲ್ಲೆಯ ಎಲ್ಲಾ ಕೆರೆಗಳು ಭರ್ತಿಯಾದರೆ ರೈತರ ಬದುಕು ಹಸನಾಗುತ್ತದೆ’ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಬಳಕೆಗೆ ಯೋಗ್ಯವಲ್ಲ: ‘ಕೋಲಾರ ಜಿಲ್ಲೆಯ ಕೊಳವೆ ಬಾವಿಗಳಲ್ಲಿ ಸಿಗುವ ನೀರು ಫ್ಲೋರೈಡ್‌ ಮಿಶ್ರಿತವಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ಜನರು ಅನಿವಾರ್ಯವಾಗಿ ಈ ನೀರನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯ ಹಾಳಾಗುತ್ತಿದೆ’ ಎಂದು ಮಾಧುಸ್ವಾಮಿ ಸಚಿವರಿಗೆ ತಿಳಿಸಿದರು.

‘ಕೆ.ಸಿ ವ್ಯಾಲಿ 2ನೇ ಹಂತದ ಯೋಜನೆ ಅನುಷ್ಠಾನಗೊಂಡರೆ ಮತ್ತಷ್ಟು ಕೆರೆಗಳಿಗೆ ನೀರು ಹರಿಯುವುದರಿಂದ ಜಿಲ್ಲೆ ಹಸಿರಾಗಲಿದೆ. 2ನೇ ಹಂತದ ಕಾಮಗಾರಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದ್ದು, ಅನುದಾನಕ್ಕೆ ಕಾಯುತ್ತಿದ್ದೇವೆ. ಅನುದಾನ ಬಿಡುಗಡೆ ಮಾಡಿದರೆ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುತ್ತೇವೆ’ ಎಂದು ವಿವರಿಸಿದರು.

‘ಯೋಜನೆ ವ್ಯಾಪ್ತಿಯ ಕಾಲುವೆ ಉದ್ದಕ್ಕೂ ಚೆಕ್‌ಡ್ಯಾಂಗಳ ಸಾಮರ್ಥ್ಯ ಹೆಚ್ಚಿರುವುದರಿಂದ ನೀರು ಬೇಗನೆ ಮುಂದಿನ ಕೆರೆಗಳಿಗೆ ಹರಿಯುತ್ತಿಲ್ಲ. ಶೇ 70ರಷ್ಟು ನೀರನ್ನು ಗುರುತ್ವಾಕರ್ಷಣೆ ಮೂಲಕವೇ ಹರಿಸಲಾಗುತ್ತಿದ್ದು, ಈ ಮಾರ್ಗದಲ್ಲಿ ಮರಳುಗಾರಿಕೆಯಿಂದ ಕೆರೆಗಳ ನೀರಿನ ಹಿಡಿತದ ಸಾಮರ್ಥ್ಯ ಕಡಿಮೆಯಾಗಿದೆ’ ಎಂದು ಸ್ಪಷ್ಟಪಡಿಸಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಶೇಖಾವತ್ ಅನುದಾನ ಒದಗಿಸುವ ಭರವಸೆ ನೀಡಿದರು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ್ ಖೂಬಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು