ಕೃಷ್ಣಮೂರ್ತಿ
ಕೆಜಿಎಫ್: ಮಳೆ ಬಂದರೆ ಯಾವಾಗ ಕುಸಿಯುತ್ತದೆಯೋ ಎಂಬ ಭಯದಿಂದ ತಾಲ್ಲೂಕಿನ ದಿಗುವರಾಗಡಹಳ್ಳಿಯ ನಮ್ಮೂರ ಶಾಲೆಗೆ ಈ ವರ್ಷ ಒಂದು ವಿದ್ಯಾರ್ಥಿಯನ್ನು ಸಹ ಪೋಷಕರು ದಾಖಲು ಮಾಡಿಲ್ಲ.
ಇಬ್ಬರು ಶಿಕ್ಷಕರು ಹಾಗೂ 1 ರಿಂದ 5ನೇ ತರಗತಿ ವರೆಗೆ ಇರುವ ಶಾಲೆಯಲ್ಲಿ ಈಗ ಕೇವಲ 11 ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾ ತರಗತಿಗಳು ಒಂದೇ ಕೋಣೆಯಲ್ಲಿ ನಡೆಯುತ್ತದೆ. ಶಾಲೆ ನಡೆಯುತ್ತಿರುವ ಕೊಠಡಿಯ ಚಾವಣಿ ಶಿಥಿಲಗೊಂಡಿದ್ದು, ಯಾವ ಕ್ಷಣದಲ್ಲಾದರೂ ಕುಸಿಯುವ ಸಾಧ್ಯತೆ ಇರುವುದರಿಂದ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿರುವ ಪೋಷಕರು ಆತಂಕದಲ್ಲಿದ್ದಾರೆ.
ದಿಗುವರಾಗಡಹಳ್ಳಿಗೆ ಶಾಲೆ ಬೇಕೆಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಸರ್ಕಾರ 2010ರಲ್ಲಿ ಶಾಲೆ ಮಂಜೂರು ಮಾಡಿತು. ಗ್ರಾಮದ ಮುಖಂಡರೊಬ್ಬರು ಶಾಲೆಗೆಂದು ಸ್ವಲ್ಪ ಜಾಗ ಕೊಟ್ಟರು. ಶಾಲೆಗೆ ಜಾಗ ಕೊಟ್ಟಿದ್ದರಿಂದ ಅವರಿಗೇ ಕಟ್ಟಡ ನಿರ್ಮಾಣದ ಕಾಮಗಾರಿ ಕೂಡ ಸಿಕ್ಕಿತು. ₹3.65 ಲಕ್ಷ ವೆಚ್ಚದಲ್ಲಿ ಶಾಲೆಗಾಗಿ ಒಂದು ಕೊಠಡಿಯನ್ನು ನಿರ್ಮಾಣ ಮಾಡಿಕೊಟ್ಟರು.
ಆದರೆ ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದರಿಂದ ಕೆಲವೇ ವರ್ಷಗಳಲ್ಲಿ ಕಟ್ಟಡದ ನಿಜ ಬಣ್ಣ ಬಯಲಾಯಿತು. ಚಾವಣಿಗೆ ಪ್ಲಾಸ್ಟಿಂಗ್ ಮಾಡದೆ ಕೇವಲ ಬಣ್ಣ ಬಳಿದು ಕೊಡಲಾಗಿತ್ತು. ಇಂದು ಕೊಠಡಿ ಚಾವಣಿಯಲ್ಲಿ ಕಂಬಿಗಳು ಅಸ್ತಿಪಂಜರದಂತೆ ಕಾಣುತ್ತಿದೆ. ಈಚೆಗೆ ಬಿದ್ದ ಮಳೆಯಿಂದಾಗಿ ಚಾವಣಿ ಕುಸಿದು ಶಾಲೆಯಲ್ಲಿ ಕುಳಿತಿದ್ದ ಇಬ್ಬರು ಮಕ್ಕಳಿಗೆ ಗಾಯ ಕೂಡ ಆಯಿತು. ಆದರೂ ಶಿಕ್ಷಣ ಇಲಾಖೆ ಇದೇ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಮುಂದುವರೆಸಿದೆ.
ಮೂರು ವರ್ಷದ ಹಿಂದೆ ಅಡುಗೆ ಕೋಣೆಯನ್ನು ಶಾಲೆ ಕಟ್ಟಿದ ಮುಖಂಡರೇ ಕಟ್ಟಿದರು. ಅದಕ್ಕೆ ಸಿಮೆಂಟ್ ಸರಿಯಾಗಿ ಬೆರೆಸದೆ ಮಣ್ಣಿನಲ್ಲಿಯೇ ಕಟ್ಟಿದ ಪರಿಣಾಮವಾಗಿ ಚಾವಣಿ ಒಂದು ಭಾಗ ಈಗಲೇ ಕುಸಿದಿದೆ. ಯಾವ ಕ್ಷಣದಲ್ಲಾದರೂ ನೆಲಕಚ್ಚಬಹುದು ಎಂದು ಶಾಲೆ ಮೇಲುಸ್ತುವಾರಿ ಸಮಿತಿ ಸದಸ್ಯ ಸತೀಶ್ ಹೇಳುತ್ತಾರೆ.
ಶಾಲೆಗೆ ಕಾಂಪೌಂಡ್ ಇಲ್ಲ. ವ್ಯವಸಾಯ ಮಾಡುತ್ತಿರುವ ಜಮೀನಿನ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಆಗಾಗ್ಗೆ ಹಾವುಗಳು ಶಾಲೆಗೆ ಬಂದು ಭೇಟಿ ನೀಡುತ್ತಿರುತ್ತವೆ. ಹೆಣ್ಣು ಮಕ್ಕಳಿಗೆ ಒಂದು ಶೌಚಾಲಯ ಇದೆ. ಗಂಡು ಮಕ್ಕಳಿಗೆ ಬಯಲು ಶೌಚಾಲಯವೇ ಗತಿ. ಶಿಕ್ಷಕರು ಅವರಿವರ ಮನೆಗೆ ಹೋಗುತ್ತಾರೆ. ದಾನಿಯೊಬ್ಬರು ಶಾಲೆಯ ಅಭಿವೃದ್ಧಿಗಾಗಿ ಶಾಲೆಯ ಪಕ್ಕದಲ್ಲಿಯೇ ಜಾಗಕೊಟ್ಟು ಅದನ್ನು ಶಿಕ್ಷಣ ಇಲಾಖೆಗೆ ನೋಂದಣಿ ಮಾಡಿಕೊಟ್ಟಿದ್ದರು. ಆದರೆ ಈಗ ನೋಂದಣಿ ಮಾಡಿಕೊಟ್ಟಿದ್ದ ಜಾಗವನ್ನು ಶಾಲೆಗೆ ಬಿಡದೆ, ಅದರಲ್ಲಿ ಬೆಳೆ ಬೆಳೆದಿದ್ದಾರೆ. ಇದರಿಂದಾಗಿ ಶಾಲೆಯ ಅಭಿವೃದ್ಧಿಗೆ ಜಾಗವೇ ಇಲ್ಲವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಗ್ರಾಮದಲ್ಲಿ ಶಾಲೆ ಸರಿ ಇಲ್ಲದೆ ಇರುವುದರಿಂದ ಸ್ಥಿತಿವಂತರು ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಬಡವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಸರಿಯಾದ ವ್ಯವಸ್ಥೆಯೇ ಇಲ್ಲದಾಗಿದೆ ಸತೀಶ್ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ
ಶಾಲೆ ವರ್ಗಾಯಿಸುವ ಇರಾದೆ ಶಾಲೆ ಶಿಥಿಲಾವಸ್ಥೆಯಲ್ಲಿದೆ ಎಂದು ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳಿಸಿಕೊಡಲಾಗಿದೆ. ಅದನ್ನು ಶೀಘ್ರವಾಗಿ ಕೆಡವಿ ಹೊಸ ಕಟ್ಟಡ ಕಟ್ಟಬೇಕಾಗಿದೆ. ಶಾಲೆ ಮೇಲುಸ್ತುವಾರಿ ಸಭೆಯನ್ನು ಮಂಗಳವಾರ ಕರೆಯಲಾಗಿದ್ದು ಗ್ರಾಮದಲ್ಲಿಯೇ ಬಾಡಿಗೆ ಕಟ್ಟಡಕ್ಕೆ ಶಾಲೆಯನ್ನು ವರ್ಗಾಯಿಸುವ ಇರಾದೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಚಂದ್ರಶೇಖರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.