ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಇವಿಎಂ ಉಗ್ರಾಣ, ಖಜಾನೆ ತಡಕಾಡಿದರೂ ಸಿಗದ ದಾಖಲೆ!

ಸಿಸಿಟಿವಿ ದೃಶ್ಯಾವಳಿ, ಹಾರ್ಡ್‌ ಡಿಸ್ಕ್‌ ಮಾಯ
Published 14 ಆಗಸ್ಟ್ 2024, 3:22 IST
Last Updated 14 ಆಗಸ್ಟ್ 2024, 3:22 IST
ಅಕ್ಷರ ಗಾತ್ರ

ಕೋಲಾರ: 2023ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶದ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕೇಳಿದ ನಿರ್ದಿಷ್ಟ ದಾಖಲೆಗಳು ವಿದ್ಯುನ್ಮಾನ ಮತಯಂತ್ರದ (ಇವಿಎಂ) ಉಗ್ರಾಣ ಹಾಗೂ ಮಾಲೂರು ಖಜಾನೆಯಲ್ಲಿ ಲಭ್ಯವಾಗಿಲ್ಲ.

ಮತ ಎಣಿಕೆ ಕೇಂದ್ರದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿ, ಹಾರ್ಡ್‌ ಡಿಸ್ಕ್‌ ಮತ್ತು 17(ಸಿ) ಫಾರಂ ಸೇರಿದಂತೆ ಹಲವು ದಾಖಲೆಗಳನ್ನು ನ್ಯಾಯಾಲಯ ಕೇಳಿತ್ತು. ಆದರೆ, ಇವಿಎಂ ಉಗ್ರಾಣದಲ್ಲಿ ಈ ಯಾವ ದಾಖಲೆಗಳೂ ಲಭ್ಯವಾಗಲಿಲ್ಲ. 

ಇದರಿಂದ ಆತಂಕಕ್ಕೆ ಒಳಗಾದ ಜಿಲ್ಲಾಡಳಿ ಮಾಲೂರಿನ ಖಜಾನೆಯಲ್ಲಿ ದಾಖಲೆಗಳಿಗೆ ಇರಬಹುದೇ ಎಂದು ಪರಿಶೀಲಿಸುವಂತೆ ಮಾಲೂರು ತಹಶೀಲ್ದಾರ್‌ಗೆ ಸೂಚಿಸಿತು. ಸಂಜೆವರೆಗೂ ತಡಕಾಡಿದರೂ ಖಜಾನೆಯಲ್ಲೂ ಸಿಸಿಟಿವಿ ದೃಶ್ಯಾವಳಿ, ಹಾರ್ಡ್‌ ಡಿಸ್ಕ್‌ ಸಿಗಲಿಲ್ಲ. ಆದರೆ, ಯಾವ ಅಭ್ಯರ್ಥಿಗೆ ಯಾವ ಸುತ್ತಿನಲ್ಲಿ ಎಷ್ಟು ಮತ ಬಂದಿದೆ ಎಂಬ ಸಮಗ್ರ ವಿವರವುಳ್ಳ 17(ಸಿ) ಫಾರಂ ಕಾರ್ಬನ್‌ ಕಾಪಿ ಮಾತ್ರ ಸಿಕ್ಕಿತು.

‘ಚುನಾವಣೆ ವೇಳೆ ಮತ ಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸುವ ಗುತ್ತಿಗೆ ಪಡೆದ ಕಂಪನಿ ಬಳಿ ದೃಶ್ಯಾವಳಿ ಮತ್ತು ಹಾರ್ಡ್‌ ಡಿಸ್ಕ್‌ ಇರಬಹುದು. ಕಂಪನಿಯಿಂದ ಈ ಎರಡನ್ನೂ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು’ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.

ನ್ಯಾಯಾಲಯದ ಸೂಚನೆಯಂತೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅನುಮತಿ ಪಡೆದು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಉಗ್ರಾಣದ ಬಾಗಿಲನ್ನು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತೆರೆದರು. ಪೊಲೀಸರ ಬಿಗಿ ಭದ್ರತೆ ಹಾಗೂ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಎಲ್ಲಾ ಪ್ರಕ್ರಿಯೆ ನಡೆಸಲಾಯಿತು.

ರಾಜಕೀಯ ಪಕ್ಷಗಳ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಗ್ರಾಣದ ಹೊರಗೆ ಕುತೂಹಲದಿಂದ ಕಾದು ನಿಂತಿದ್ದರು. ಸಂಸದ ಎಂ.ಮಲ್ಲೇಶ್‌ ಬಾಬು, ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್ ಗೌಡ ಸೇರಿದಂತೆ ಮಾಲೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಉಗ್ರಾಣದ ಒಳಗೆ ತೆರಳಿದರು. ಶಾಸಕ ನಂಜೇಗೌಡ ಪುತ್ರರು ಮಾತ್ರ ಹೊರಗಡೆ ಕಾಯುತ್ತಿದ್ದರು.

ಎಷ್ಟು ಹೊತ್ತು ತಡಕಾಡಿದರೂ ನ್ಯಾಯಾಲಯ ಕೇಳಿದ ದಾಖಲೆ, ಮಾಹಿತಿ ಉಗ್ರಾಣದಲ್ಲಿ ಸಿಗಲಿಲ್ಲ. ‘ನ್ಯಾಯಾಲಯ ಕೇಳಿದ ನಿರ್ದಿಷ್ಟ ದಾಖಲೆಗಳು ಉಗ್ರಾಣದ ಭದ್ರತಾ ಕೊಠಡಿಯಲ್ಲಿ ಲಭ್ಯವಾಗಿಲ್ಲ. ಉಗ್ರಾಣದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ನಂತರದ ಮಾಹಿತಿಗಳಿವೆ.  ಲಭ್ಯವಾದ ದಾಖಲೆ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ’ ಎಂದು ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ತಿಳಿಸಿದರು.

ಮಾಲೂರು ವಿಧಾನಸಭೆ ಕ್ಷೇತ್ರದದಿಂದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವೈ.ನಂಜೇಗೌಡ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್‌. ಮಂಜುನಾಥ ಗೌಡ ವಿರುದ್ಧ 248 ಮತಗಳಿಂದ ಗೆಲುವು ಸಾಧಿಸಿದ್ದರು. ಮರು ಎಣಿಕೆಗೆ ಅವಕಾಶ ನೀಡುವಂತೆ ಕೋರಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT