ಶುಕ್ರವಾರ, ಆಗಸ್ಟ್ 6, 2021
21 °C
ಫೋನ್‌–ಇನ್ ಕಾರ್ಯಕ್ರಮದಲ್ಲಿ ಡಿಡಿಪಿಐ ರತ್ನಯ್ಯ ಹೇಳಿಕೆ

ಕೋಲಾರ: ನಿಗದಿತ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಿಗದಿತ ವೇಳಾಪಟ್ಟಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಖಂಡಿತ ನಡೆಯುತ್ತದೆ. ಈಗಾಗಲೇ ಪ್ರವೇಶಪತ್ರಗಳು ಸಿದ್ಧವಾಗಿದ್ದು, ಶಾಲೆಗೆ ಹೋಗಿ ಪಡೆದುಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಣ ಇಲಾಖೆಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಫೋನ್‌–ಇನ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪರೀಕ್ಷೆ ನಡೆಯುವ ಬಗ್ಗೆ ಅನುಮಾನ ಬೇಡ. ಈಗಾಗಲೇ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಹೊಸ ವೇಳಾಪಟ್ಟಿಯಂತೆ ಪರಿಷ್ಕೃತ ಪ್ರವೇಶಪತ್ರಗಳನ್ನು ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಿದೆ. ಶಾಲಾ ಮುಖ್ಯ ಶಿಕ್ಷಕರು ಪ್ರವೇಶಪತ್ರ ಡೌನ್‌ಲೋಡ್‌ ಮಾಡಿ ಮಕ್ಕಳಿಗೆ ವಿತರಿಸುತ್ತಾರೆ’ ಎಂದರು.

90ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮಕ್ಕೆ ಕರೆ ಮಾಡಿ ಸಮಸ್ಯೆ ಕೇಳಿ ಪರಿಹಾರ ಕಂಡುಕೊಂಡರು. ಆಯ್ಧ 430 ಮಕ್ಕಳಿಗೆ ಶಿಕ್ಷಣ ಇಲಾಖೆ ಸಂಪನ್ಮೂಲ ವ್ಯಕ್ತಿಗಳೇ ಕರೆ ಮಾಡಿ ಪರೀಕ್ಷೆ ಮತ್ತು ಪಠ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿಲ್ಲೆಯ ಮಕ್ಕಳು ಮಾತ್ರವಲ್ಲದೇ ಶಿವಮೊಗ್ಗ ಹಾಗೂ ಬೆಂಗಳೂರಿನ ವಿವಿಧ ಶಾಲೆಗಳ ಮಕ್ಕಳು ಕರೆ ಮಾಡಿ ಪ್ರಶ್ನೆ ಕೇಳಿದ್ದು ವಿಶೇಷವಾಗಿತ್ತು. ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಮಕ್ಕಳು ಹೆಚ್ಚು ಪ್ರಶ್ನೆ ಕೇಳಿದರು.

ಪುನರ್ಮನನ ತರಗತಿಯಿಲ್ಲ: ‘ಕೆಲ ಮಕ್ಕಳು ಪರೀಕ್ಷೆಗೂ ಮುನ್ನ ಪುನರ್ಮನನ ತರಗತಿ ನಡೆಯುತ್ತದೆಯೇ?’ ಎಂದು ಪ್ರಶ್ನೆ ಕೇಳಿದರು.
ಇದಕ್ಕೆ ಉತ್ತರಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲಾ ನೋಡಲ್‌ ಅಧಿಕಾರಿ ಎ.ಎನ್‌. ನಾಗೇಂದ್ರಪ್ರಸಾದ್, ‘ಕೊರೊನಾ ಸೋಂಕಿನ ಆತಂಕದ ಕಾರಣಕ್ಕೆ ಶಾಲೆಯಲ್ಲಿ ಪುನರ್ಮನನ ತರಗತಿ ನಡೆಸುವುದಿಲ್ಲ. ಸದ್ಯ ಚಂದನ ವಾಹಿನಿ ಹಾಗೂ ಯೂಟ್ಯೂಬ್‌ನಲ್ಲಿ ಪುನರ್ಮನನ ತರಗತಿ ನಡೆಯುತ್ತಿದ್ದು, ಈ ತರಗತಿ ವೀಕ್ಷಿಸಿ’ ಎಂದು ಸಲಹೆ ನೀಡಿದರು.

‘ಪರೀಕ್ಷೆಗೆ ಬರುವ ಪ್ರತಿ ವಿದ್ಯಾರ್ಥಿಗೆ ಇಲಾಖೆಯಿಂದಲೇ ಮಾಸ್ಕ್‌ ಕೊಡುತ್ತೇವೆ. ಜತೆಗೆ ಥರ್ಮಲ್‌ ಸ್ಕ್ರೀನಿಂಗ್ ನಡೆಸುತ್ತೇವೆ. ಕೈ ಸ್ವಚ್ಛಗೊಳಿಸಿಕೊಳ್ಳಲು ಪರೀಕ್ಷಾ ಕೇಂದ್ರದ ಪ್ರವೇಶ ಭಾಗದಲ್ಲೇ ಸ್ಯಾನಿಟೈಸರ್‌ ಕೊಡುತ್ತೇವೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೊಠಡಿಯಲ್ಲಿ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಬೇಕು’ ಎಂದು ಸೂಚಿಸಿದರು.

‘ಗಣಿತದಲ್ಲಿ ತ್ರಿಕೋನ ಮಿತಿ, ಸಮನಾಂತರ ಶ್ರೇಣಿಗಳು, ಪೈಥಾಗೋರಸ್ ಪ್ರಮೇಯಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಹೆಚ್ಚು ಅಭ್ಯಾಸ ಮಾಡಿ. ವಿಜ್ಞಾನದಲ್ಲಿ ಅನುವಂಶಿಕತೆ, ಬೆಳಕು, ಆವರ್ತಕ ಕೋಷ್ಠಕಕ್ಕೆ ಸಂಬಂಧಿಸಿದ ಪ್ರಶ್ನೆಗಳು, ಹಳಗನ್ನಡ ಪದ್ಯ ಭಾಗದ ಭಾವಾರ್ಥದ ಅಭ್ಯಾಸಕ್ಕೆ ಒತ್ತು ಕೊಡಿ’ ಎಂದು ಕಿವಿಮಾತು ಹೇಳಿದರು.

ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಗಾಯತ್ರಿ, ಶಶಿವಧನ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು