ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ದ್ವಿತೀಯು ಪಿಯು ಪರೀಕ್ಷೆ ಇಂದಿನಿಂದ

ಕಟ್ಟುನಿಟ್ಟಿನ ಕ್ರಮ, ಸಕಲ ಸಿದ್ಧತೆ: ಧೈರ್ಯದಿಂದ ಪರೀಕ್ಷೆ ಬರೆಯಿರಿ–ಡಿಡಿಪಿಯು
Last Updated 9 ಮಾರ್ಚ್ 2023, 4:22 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ 28 ಕೇಂದ್ರಗಳಲ್ಲಿ ಗುರುವಾರ (ಮಾರ್ಚ್‌ 9) ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಪ್ರಾರಂಭವಾಗುತ್ತಿದ್ದು, ಮೊದಲ ದಿನ ಕನ್ನಡ ಪರೀಕ್ಷೆ ನಡೆಯಲಿದೆ.

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗ ಸೇರಿ ಒಟ್ಟು 16,559 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. 8,060 ಬಾಲಕರು, 8,499 ಬಾಲಕಿಯರು ಇದ್ದಾರೆ. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷಾ ಸಮಯ ನಿಗದಿಪಡಿಸಲಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಸಂಚರಿಸಬಹುದು ಎಂದು ನಿಗಮ ಈಗಾಗಲೇ ತಿಳಿಸಿದೆ.

ಮಾರ್ಚ್‌ 29ರವರೆಗೆ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ರ‍್ಯಾಂಕಿಂಗ್‌ ಉತ್ತಮಪಡಿಸಲು ಎಲ್ಲರೂ ವಿವಿಧ ಹಂತಗಳಲ್ಲಿ ಕಸರತ್ತು ಹಾಕಿದ್ದಾರೆ.

‘ಜಿಲ್ಲೆಯಲ್ಲಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಂಡು ಸಿದ್ಧರಾಗಿದ್ದೇವೆ. ವಿದ್ಯಾರ್ಥಿಗಳು ಯಾವುದೇ ಭಯ, ಗೊಂದಲಕ್ಕೆ ಒಳಗಾಗಬಾರದು. ಧೈರ್ಯದಿಂದ ಪರೀಕ್ಷೆ ಎದುರಿಸಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಯು) ರಾಮಚಂದ್ರಪ್ಪ ಕಿವಿಮಾತು
ಹೇಳಿದರು.

13,735 ಹೊಸ ಅಭ್ಯರ್ಥಿಗಳು, 2,385 ಮಂದಿ ಪುನರಾವರ್ತಿತ ಅಭ್ಯರ್ಥಿಗಳು ಹಾಗೂ 439 ಮಂದಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೋಲಾರ–10, ಬಂಗಾರಪೇಟೆ-3, ಕೆಜಿಎಫ್-3, ಶ್ರೀನಿವಾಸಪುರ-3, ಮುಳಬಾಗಿಲು-5, ಮಾಲೂರು–4 ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯುತ್ತಿದೆ.

ಪ್ರತಿ ಕೇಂದ್ರಕ್ಕೂ ಒಬ್ಬ ಮುಖ್ಯ ಅಧೀಕ್ಷಕರಿದ್ದು, ಅವರೊಂದಿಗೆ ಜಂಟಿ ಮುಖ್ಯ ಅಧೀಕ್ಷಕರು ಕಾರ್ಯ ನಿರ್ವಹಿಸುವರು. ಮಾರ್ಗಾಧಿಕಾರಿಗಳಾಗಿ ತಹಶೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತಂಡ ಕಾರ್ಯನಿರ್ವಹಿಸಲಿದೆ. ಪ್ರಶ್ನೆಪತ್ರಿಕೆಗಳನ್ನು ಎಲ್ಲಾ 28 ಕೇಂದ್ರಗಳಿಗೆ ಪರೀಕ್ಷೆಗೆ ಮುನ್ನಾ ಖಜಾನೆಯಿಂದ ಪಡೆದು ಸರಬರಾಜು ಮಾಡಲು ಪೊಲೀಸ್ ಬಂದೋಬಸ್ತ್ ಇರುವ 9 ವಾಹನಗಳು 9 ಮಾರ್ಗಗಳಲ್ಲಿ ಸಾಗಲಿವೆ. ಈ ಎಲ್ಲಾ ವಾಹನಗಳಿಗೂ ಜಿಪಿಎಸ್
ಅಳವಡಿಸಲಾಗಿದೆ.

ಪರೀಕ್ಷಾ ನಕಲು, ಅವ್ಯವಹಾರ ತಡೆಯಲು ಕೇಂದ್ರ ಕಚೇರಿಯ 2 ಜಾಗೃತದಳ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 1, ಉಪನಿರ್ದೇಶಕರ ನೇತೃತ್ವದಲ್ಲಿ 1, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತದಳ ರಚಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದಲೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೊರ ಜಿಲ್ಲೆಗಳ ತಲಾ ಇಬ್ಬರು ಸ್ಥಾನಿಕ ಜಾಗೃತದಳ ಸಿಬ್ಬಂದಿ ನೇಮಿಸಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ‌ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರಗಳ ಸುತ್ತ ಪರೀಕ್ಷೆ ನಡೆಯುವ ದಿನ ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ 200ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಯು ನಿಷೇಧಾಜ್ಞೆ ಜಾರಿ ಮಾಡಿದ್ದು, ಈ ಭಾಗದಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.

ಎಲೆಕ್ಟ್ರಾನಿಕ್ಸ್‌ ಸಾಧನ ನಿಷೇಧ: ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್ ಫೋನ್, ಸ್ಮಾರ್ಟ್‌ವಾಚ್‌, ಹಿಯರ್‌ ಫೋನ್‌, ಇ–ಕ್ಯಾಮೆರಾ, ಲ್ಯಾಪ್‍ಟಾಪ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಎಲೆಕ್ಟ್ರಾನಿಕ್, ಮುಳ್ಳಿನ ಕೈಗಡಿಯಾರವನ್ನೂ ತರುವಂತಿಲ್ಲ. ಸೈಂಟಿಫಿಕ್ ಕ್ಯಾಲ್ಯುಕುಲೇಟರ್‌ಗೂ ಅವಕಾಶವಿಲ್ಲ. ಸಾಮಾನ್ಯ ಕ್ಯಾಲ್ಯುಕುಲೇಟರ್
ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT