ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಜಿಲ್ಲೆಯಲ್ಲಿ 24ರಿಂದ 26ರವರೆಗೆ ನಿಷೇಧಾಜ್ಞೆ- ಜಿಲ್ಲಾಧಿಕಾರಿ

ಕೋಲಾರ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಆದೇಶ
Published 15 ಏಪ್ರಿಲ್ 2024, 15:12 IST
Last Updated 15 ಏಪ್ರಿಲ್ 2024, 15:12 IST
ಅಕ್ಷರ ಗಾತ್ರ

ಕೋಲಾರ: ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಏ.26 ರಂದು ಮತದಾನ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಏ.24ರ ಬುಧವಾರ ಸಂಜೆ 6ರಿಂದ 26ರ ಶುಕ್ರವಾರ ಸಂಜೆ 6ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶಿಸಿದ್ದಾರೆ.

ಬಹಿರಂಗ ಪ್ರಚಾರ ಏ.24ರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಮತದಾನ ಏ.26ರ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ. ಮತದಾನವು ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಮತದಾನವನ್ನು ಸುಗಮವಾಗಿ ನಡೆಸುವ ದೃಷ್ಟಿಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮತದಾರರ ಮೇಲೆ ಪ್ರಭಾವ ಬೀರಲು ರಾಜಕೀಯ ಲಾಭಕ್ಕಾಗಿ ನಗದು, ಉಡುಗೊರೆ ಹಾಗೂ ಮದ್ಯ ವಿತರಿಸುವುದನ್ನು ನಿಷೇಧಿಸಲಾಗಿದೆ. ಇಂತಹ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿಷೇಧಾಜ್ಞೆಯ ಸಮಯದಲ್ಲಿ ಅಕ್ರಮಕೂಟ ಹಾಗೂ ಸಾರ್ವಜನಿಕ ಸಭೆ ನಡೆಸುವುದನ್ನು ನಿರ್ಬಂಧಿಸಲಾಗಿದೆ. ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಯಾವುದೇ ಆಯುಧ ಕೊಂಡೊಯ್ಯುವುದನ್ನು ನಿರ್ಬಂಧಿಸಲಾಗಿದೆ. ಮನೆಮನೆಗೆ ಭೇಟಿ ನೀಡಿ ಮತಯಾಚಿಸಲು ಅವಕಾಶವಿದೆ. ಆದರೆ, 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ.

ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪ್ರಚಾರ ಮಾಡುವ ಕಾರ್ಯಕರ್ತರು ಕ್ಷೇತ್ರದ ಮತದಾರರು ಅಲ್ಲದಿದ್ದ ಪಕ್ಷದಲ್ಲಿ ಈ ಅವಧಿಯಲ್ಲಿ ಕ್ಷೇತ್ರದಿಂದ ಹೊರಗೆ ಹೋಗುವಂತೆ ಸೂಚಿಸಲಾಗಿದೆ. ನಿಷೇದಾಜ್ಞೆಯ ಸಮಯದಲ್ಲಿ ಸಂತೆ, ಜಾತ್ರೆಗಳನ್ನು ನಡೆಸುವಂತಿಲ್ಲ. ಯಾವುದೇ ರೀತಿಯ ಬಂದ್, ಪ್ರತಿಭಟನೆ, ಮುಷ್ಕರ ನಿರ್ಬಂಧಿಸಲಾಗಿದೆ.

ನಿಷೇಧಾಜ್ಞೆಯು ಮದುವೆ, ಶುಭ ಸಮಾರಂಭಗಳು, ಧಾರ್ಮಿಕ ಕಾರ್ಯಕ್ರಮಗಳು, ಶವ ಸಂಸ್ಕಾರ ಹಾಗೂ ಚುನಾವಣಾ ಕಾರ್ಯಗಳಿಗೆ ಅನ್ವಯಿಸುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮವನ್ನು ಜರುಗಿಸಲಾಗುವುದು ಎಂದು ಅಕ್ರಂ ಪಾಷಾ ತಿಳಿಸಿದ್ದಾರೆ.

ಏ.24ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ ಐದಕ್ಕಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ ಸಂತೆ, ಜಾತ್ರೆಗಳನ್ನು ನಡೆಸುವಂತಿಲ್ಲ

ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ದೃಷ್ಟಿಯಿಂದ ಏ.24ರ ಸಂಜೆ 6ರಿಂದ ಮತದಾನ ಅಂತ್ಯಗೊಳ್ಳುವ ಏ.26ರ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದೆ

-ಅಕ್ರಂ ಪಾಷಾ ಜಿಲ್ಲಾ ಚುನಾವಣಾಧಿಕಾರಿ ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT