ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸಾಹಿತ್ಯದ ಧೃವತಾರೆ -ಮುನಿರತ್ನಪ್ಪ

Last Updated 7 ಮಾರ್ಚ್ 2021, 17:06 IST
ಅಕ್ಷರ ಗಾತ್ರ

ಕೋಲಾರ: ‘ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಸಾಹಿತ್ಯ ಲೋಕದ ಧೃವತಾರೆ ಆಗಿದ್ದರು’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮುನಿರತ್ನಪ್ಪ ಬಣ್ಣಿಸಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ಲಕ್ಷ್ಮೀನಾರಾಯಣ ಭಟ್ಟರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಲಕ್ಷ್ಮೀನಾರಾಯಣ ಭಟ್ಟರು ಕನ್ನಡದಲ್ಲಿ ಸುಮಾರು 450 ಸುಗಮ ಸಂಗೀತ ಮತ್ತು ಭಾವಗೀತೆ ರಚಿಸಿ ಹಾಡಿ ಅಪಾರ ಜನಮನ್ನಣೆ ಗಳಿಸಿದ್ದರು’ ಎಂದರು.

‘ಲಕ್ಷ್ಮೀನಾರಾಯಣ ಭಟ್ಟರು ವಿನಯದ ಪ್ರತೀಕವಾಗಿದ್ದರು. ಅವರು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ರಚಿಸಿರುವ ಗೀತೆಗಳು ಮತ್ತು ಸಂಗೀತ ದೇಶದೆಲ್ಲೆಡೆ ಸಂಗೀತ ಮತ್ತು ಸಾಹಿತ್ಯಪ್ರಿಯರ ಮನದಲ್ಲಿ ನೆಲೆಯೂರಿವೆ. ಅವರ ರಚನೆಯ ಎಂತಹ ಮರುಳಯ್ಯ ಎಂತಾ ಮರುಳಯ್ಯ ಹಾಡು ಸುಪ್ರಸಿದ್ಧವಾಗಿತ್ತು’ ಎಂದು ಹೇಳಿದರು.

‘ಲಕ್ಷ್ಮೀನಾರಾಯಣ ಭಟ್ಟರು ಭಾಷೆಯ ಸುಲಲಿತ ಮತ್ತು ಹಿಡಿತ ಛಂದಸ್ಸು ಸೇರಿದಂತೆ ನೀಡುತ್ತಿದ್ದ ಉಪನ್ಯಾಸಗಳು ಎಂದೆಂದಿಗೂ ಅಮರ. ಅವರಂತಹ ಗುರುಗಳನ್ನು ಪಡೆದ ನಾವು ಧನ್ಯರು’ ಎಂದು ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್‌ ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಲೋಕದಲ್ಲಿ ಎನ್‌ಎಸ್‌ಎಲ್‌ ಎಂದೇ ಮನೆ ಮಾತಾಗಿದ್ದಭಟ್ಟರು ಕಲೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯಕವಿತೆ, ಮಕ್ಕಳ ಗೀತೆ ರಚನೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಅಲ್ಲದೇ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯಲ್ಲೂ ಕೃತಿ ರಚನೆ ಮಾಡಿದ್ದಾರೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಹೇಳಿದರು.

‘ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ. ಅವರ ಸಾಹಿತ್ಯ ಮತ್ತು ಸಾಮಾಜಿಕ ಸೇವೆ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದೆ’ ಎಂದು ಸಾಹಿತಿ ಶರಣಪ್ಪ ಗಬ್ಬೂರ್ ಅಭಿಪ್ರಾಯಪಟ್ಟರು.

ಕನ್ನಡಪರ ಹೋರಾಟಗಾರ ಪ್ರಕಾಶ್, ವಿಜ್ಞಾನ ಲೇಖಕ ಎಚ್.ಎ.ಪುರುಷೋತ್ತಮರಾವ್‌, ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಹಾ.ಮ.ರಾಮಚಂದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT