ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ವಿಪಕ್ಷ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಲಿ

ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಚೌಡರೆಡ್ಡಿ ಸವಾಲು
Last Updated 4 ಅಕ್ಟೋಬರ್ 2020, 12:25 IST
ಅಕ್ಷರ ಗಾತ್ರ

ಕೋಲಾರ: ‘ವಿಧಾನ ಪರಿಷತ್‌ ಸದಸ್ಯನಾಗಿ ನನ್ನ ಸಾಧನೆ ಶೂನ್ಯವೆಂದು ಟೀಕಿಸಿರುವ ವಿಪಕ್ಷ ಮುಖಂಡರು ಮೊದಲು ತಮ್ಮ ಸಾಧನೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲಿ’ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಆರ್‌.ಚೌಡರೆಡ್ಡಿ ವಿಧಾನ ಪರಿಷತ್‌ ಸದಸ್ಯ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರಿಗೆ ಸವಾಲು ಹಾಕಿದರು.

ರಾಜ್ಯ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಇಲ್ಲಿ ಭಾನುವಾರ ನಡೆದ ಬೆಂಬಲಿಗರು ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಶ್ರೀನಿವಾಸಪುರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಆ ಪಕ್ಷದ ಮುಖಂಡರೊಬ್ಬರು ಬಾಯಿ ಚಪಲಕ್ಕೆ ನನ್ನ ವಿರುದ್ಧ ಟೀಕೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.

‘ನಾನು ವಿಧಾನ ಪರಿಷತ್‌ ಸದಸ್ಯನಾದ ನಂತರ ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಮತದಾರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳ ವಿಚಾರವಾಗಿ ಸದನದಲ್ಲಿ ಸಾಕಷ್ಟು ಬಾರಿ ಧ್ವನಿ ಎತ್ತಿದ್ದೇನೆ. 6 ವರ್ಷದಲ್ಲಿ ಜನಪರವಾಗಿ ಕೆಲಸ ಮಾಡಿದ ತೃಪ್ತಿಯಿದೆ’ ಎಂದು ಹೇಳಿದರು.

‘ಚುನಾವಣೆ ಸಂದರ್ಭವಾಗಿರುವ ಕಾರಣ ಬಿಜೆಪಿ ಮುಖಂಡರು ರಾಜಕೀಯ ದುರುದ್ದೇಶಕ್ಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಯಲುಸೀಮೆ ಜಿಲ್ಲೆಗಳಿಗೆ ನೀರು ಕೊಡುವ ಉದ್ದೇಶಕ್ಕೆ ರೂಪಿಸಿರುವ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ಜನಪ್ರತಿನಿಧಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆ ಜಾರಿಗೆ ಒತ್ತಡ ಹಾಕಿದ್ದೇನೆ’ ಎಂದರು.

‘ಸಕಲೇಶಪುರದಲ್ಲಿನ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಹಲವು ಬಾರಿ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಯೋಜನೆ ಸಂಬಂಧ ಅಧಿಕಾರಿಗಳ ಜತೆ ಸಾಕಷ್ಟು ಬಾರಿ ಸಭೆ ನಡೆಸಿದ್ದೇನೆ. ಜಿಲ್ಲೆಯ ಶಾಶ್ವತ ನೀರಾವರಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೇನೆ’ ಎಂದು ತಿಳಿಸಿದರು.

ಕೆಲಸಗಳೇ ಶ್ರೀರಕ್ಷೆ: ‘ಬೇರೆ ಪಕ್ಷಗಳ ಮುಖಂಡರಂತೆ ಮತದಾರರ ಓಲೈಕೆಗಾಗಿ ನಾನು ಪೊಳ್ಳು ಭರವಸೆ ಕೊಡುವುದಿಲ್ಲ. ನಾನು ವಿಧಾನ ಪರಿಷತ್‌ ಸದಸ್ಯನಾಗಿ ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆ. ಚುನಾವಣೆಯಲ್ಲಿ ನಾನು ಖಂಡಿತ ಗೆಲುವು ಸಾಧಿಸುವ ನಂಬಿಕೆಯಿದೆ. ಕ್ಷೇತ್ರದ ಮತದಾರರು ಖಂಡಿತ ನನ್ನ ಕೈ ಹಿಡಿಯುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕುಮಾರ್‌, ನಿವೃತ್ತ ಪ್ರಾಂಶುಪಾಲ ಎ.ವಿ.ರೆಡ್ಡಿ, ಜೆಡಿಎಸ್‌ ಮುಖಂಡ ನಟರಾಜ್‌, ವಿವಿಧ ಕಾಲೇಜು ಉಪನ್ಯಾಸಕರು, ಶಾಲಾ ಶಿಕ್ಷಕರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT