ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷರತೆಯು ಮಾನವನ ಅಭಿವೃದ್ಧಿ ಸಾಧನ

Last Updated 29 ನವೆಂಬರ್ 2021, 15:36 IST
ಅಕ್ಷರ ಗಾತ್ರ

ಕೋಲಾರ: ‘ಸಾಕ್ಷರತೆಯು ಮಾನವನ ಹಕ್ಕು. ವೈಯಕ್ತಿಕ ಸಬಲೀಕರಣ ಮತ್ತು ಸಾಮಾಜಿಕವಾಗಿ ಮಾನವನ ಅಭಿವೃದ್ಧಿಗೆ ಇದು ಸಾಧನವಾಗಿದೆ’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನರಸಿಂಹಯ್ಯ ಅಭಿಪ್ರಾಯಪಟ್ಟರು.

ಇಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಸಾಕ್ಷರತಾ ಪೂರ್ವ ಸಿದ್ಧತಾ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಾಕ್ಷರತೆಯು ಸಾಂಪ್ರದಾಯಿಕವಾಗಿ ಓದುವ ಮತ್ತು ಬರೆಯುವ ಸಾಮರ್ಥ್ಯ. ಸೈದ್ಧಾಂತಿಕ ಕ್ಷೇತ್ರಗಳ ವ್ಯಾಪ್ತಿಯ ಮೂಲಕ ಈ ಪರಿಕಲ್ಪನೆ ಹೇಳಲಾಗಿದೆ’ ಎಂದು ತಿಳಿಸಿದರು.

‘ಶಿಕ್ಷಣದ ಅವಕಾಶಗಳು ಸಾಕ್ಷರತೆಯನ್ನು ಅವಲಂಬಿಸಿವೆ. ಸಾಕ್ಷರತೆಯು ಬಡತನ ನಿರ್ಮೂಲನೆ ಮಾಡುವ ಒಂದು ಅಸ್ತ್ರ. ಸಾಮಾನ್ಯವಾಗಿ 15 ವರ್ಷ ಮೇಲ್ಪಟ್ಟ ಎಲ್ಲಾ ಗಂಡು-ಹೆಣ್ಣು ಮಕ್ಕಳು ಮತ್ತು ಹಿರಿಯರಿಗೆ ಅಕ್ಷರ ಕಲಿಸುವುದು ಎಲ್ಲರ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ 1994ರಲ್ಲಿ ಸಾಕ್ಷರತಾ ಕಾರ್ಯಕ್ರಮ ಆರಂಭವಾಯಿತು. ಕೋಟಿಗಾನಹಳ್ಳಿ ರಾಮಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ಗಂಗಾಧರ್, ಸೋಮಶೇಖರ್ ಅವರಂತಹ ಸಾಹಿತಿಗಳು ಸಾಮಾನ್ಯ ಜನರಿಗೆ, ಅನಕ್ಷರಸ್ಥ ಮಹಿಳೆಯರು ಮತ್ತು ಪುರುಷರಿಗೆ, ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಅನೇಕ ಕವಿತೆ ರಚಿಸಿದರು’ ಎಂದು ಸಂಪನ್ಮೂಲ ವ್ಯಕ್ತಿ ಹಾ.ಮಾ.ರಾಮಚಂದ್ರ ವಿವರಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಸಾಕ್ಷರತಾ ಪ್ರಮಾಣ ಉನ್ನತ ಮಟ್ಟದಲ್ಲಿದೆ. ಆದರೂ ಅನೇಕ ನಗರ, ವಾರ್ಡ್‌ ಹಾಗೂ ಗ್ರಾಮಗಳಲ್ಲಿ ಸಾಕ್ಷರತೆಯ ಕೊರತೆ ಇದೆ. ಬೇರೆ ರಾಜ್ಯಗಳಿಂದ ವಲಸೆ ಬಂದ ಜನರು ಇಟ್ಟಿಗೆ ಕಾರ್ಖಾನೆ, ಕೋಳಿ ಫಾರಂ, ಗಣಿಗಾರಿಕೆ ಪ್ರದೇಶಗಳಲ್ಲಿ ಸಹಿ ಮಾತ್ರ ಮಾಡುವವರಾಗಿದ್ದಾರೆ. ಭಾಷಾ ತೊಡಕಿನಿಂದ ಅವರು ಅನಕ್ಷರಸ್ಥರಾಗಿಯೇ ಇದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಅನಕ್ಷರಸ್ಥರನ್ನು ಗುರುತಿಸುವುದು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿ. ಆಶಾ ಕಾರ್ಯಕರ್ತೆಯರು, ಪ್ರೇರಕರು, ಸ್ವಯಂ ಸೇವಾ ಸಂಸ್ಥೆಗಳು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ವಿದ್ಯಾವಂತರು ಅನಕ್ಷರಸ್ಥರನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು’ ಎಂದು ಹೇಳಿದರು.

ಕಾರ್ಯಕ್ರಮ ಸಹಾಯಕ ಡಿ.ಆರ್‌.ರಾಜಪ್ಪ, ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT