ಬುಧವಾರ, ಫೆಬ್ರವರಿ 24, 2021
23 °C

ಲಾಕ್‌ಡೌನ್‌: ಕಾರ್ಮಿಕರ ಬದುಕು ಅತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿರುವ ಉತ್ತರಪ್ರದೇಶ ಮೂಲದ 57 ಮಂದಿ ವಲಸೆ ಕಾರ್ಮಿಕರಿಗೆ ಅವರ ರಾಜ್ಯಕ್ಕೆ ತೆರಳಲು ಜಿಲ್ಲಾಡಳಿತದಿಂದ ಅನುಮತಿ ಕೊಡಿಸುವುದಾಗಿ ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಭರವಸೆ ನೀಡಿದರು.

ಕ್ಯಾನ್ ನೆಟ್‌ವರ್ಕ್‌ ಸ್ವಯಂ ಸೇವಾ ಸಂಸ್ಥೆ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಆರಂಭವಾದ ವಲಸೆ ಕಾರ್ಮಿಕರ ಸ್ಥಿತಿಗತಿ ಕುರಿತ ಸಮೀಕ್ಷೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನ ಕಾರಣಕ್ಕೆ ಜಾರಿಯಾಗಿರುವ ಲಾಕ್‌ಡೌನ್‌ನಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ಉತ್ಪಾದನಾ ಚಟುವಟಿಕೆ ಸ್ಥಗಿತಗೊಂಡ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಇದರಿಂದ ಸಂಪಾದನೆ ಇಲ್ಲದೆ ಕಾರ್ಮಿಕರ ಜೀವನ ನಿರ್ವಹಣೆಗೆ ಸಮಸ್ಯೆಯಾಗಿದೆ. ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಲಾಗದೆ ಮತ್ತು ಇಲ್ಲಿಯೂ ಬದುಕು ಸಾಗಿಸಲಾಗಿದೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ’ ಎಂದು ಹೇಳಿದರು.

‘ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂದಿರುಗಲು ಕೊರೊನಾ ಸೋಂಕು ಅಡ್ಡವಾಗಿ ನಿಂತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಜಾಗೃತಿ ಸೇವಾ ಸಂಸ್ಥೆ ಹಾಗೂ ಕ್ಯಾನ್‌ ನೆಟ್‌ವರ್ಕ್‌ ಸಂಸ್ಥೆ ಸರ್ವ ಪ್ರಯತ್ನ ನಡೆಸಲಿವೆ’ ಎಂದು ತಿಳಿಸಿದರು.

‘ಕಾರ್ಮಿಕರ ದಾಖಲೆಪತ್ರಗಳನ್ನು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಸಿ ಸರ್ಕಾರದ ಅನುಮತಿಗೆ ಕಳುಹಿಸಿ ಕೊಡಲಾಗಿದೆ. ಜಿಲ್ಲಾಡಳಿತದೊಂದಿಗೆ ಸೋಮವಾರ ಮಾತನಾಡಿ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದು ವಿವರಿಸಿದರು.

ಬದುಕು ಬರ್ಬರ: ‘ಉದ್ಯೋಗಕ್ಕಾಗಿ ಜಿಲ್ಲೆಗೆ ಬಂದಿರುವ ಸಾವಿರಾರು ಕಾರ್ಮಿಕರ ಬದುಕು ಇಂದು ಲಾಕ್‌ಡೌನ್‌ನಿಂದ ಬರ್ಬರವಾಗಿದೆ. ಕಾರ್ಮಿಕರಿಗೆ ಮನೆ ಬಾಡಿಗೆ ಸಹ ಕಟ್ಟಲು ಸಾಧ್ಯವಾಗುತ್ತಿಲ್ಲ. ಸರ್ಕಾರ, ಕಾರ್ಮಿಕ ಇಲಾಖೆ ಹಾಗೂ ಹಲವು ದಾನಿಗಳು ಕಾರ್ಮಿಕರಿಗೆ ಆಹಾರ ಪದಾರ್ಥ ನೀಡಿದ್ದಾರೆ. ಆದರೆ, ಕಾರ್ಮಿಕರಿಗೆ ಉದ್ಯೋಗವಿಲ್ಲದ ಕಾರಣ ಬದುಕು ನಡೆಸುವುದು ದುಸ್ತರವಾಗಿದೆ’ ಎಂದು ಕ್ಯಾನ್‌ ನೆಟ್‌ವರ್ಕ್‌ ಸಂಸ್ಥೆ ಸದಸ್ಯ ಮಹೇಶ್‌ರಾವ್‌ ಕದಂ ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು