ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಕ್ಷೇತ್ರ: ಡಿ.ಸಿ ಕಚೇರಿ ಆವರಣದಲ್ಲಿ ನಿಷೇಧಾಜ್ಞೆ

ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ: ಅಕ್ರಂ ಪಾಷಾ
Published 28 ಮಾರ್ಚ್ 2024, 14:00 IST
Last Updated 28 ಮಾರ್ಚ್ 2024, 14:00 IST
ಅಕ್ಷರ ಗಾತ್ರ

ಕೋಲಾರ: ‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೋಲಾರ ಮೀಸಲು ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಗುರುವಾರ ಆರಂಭವಾಗಿದ್ದು, ಜಿಲ್ಲಾಧಿಕಾರಿ ಕಾರ್ಯಾಲಯ ಆವರಣದ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಂ 144ರನ್ವಯ ಮಾರ್ಚ್ 28ರ ಬೆಳಿಗ್ಗೆ 6 ಗಂಟೆಯಿಂದ ಏಪ್ರಿಲ್ 9ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ’ ಎಂದರು.

‘ಈ ಹಿನ್ನೆಲೆಯಲ್ಲಿ ಆವರಣದಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಅಪಾಯ ಉಂಟು ಮಾಡುವ ಯಾವುದೇ ಮಾರಕಾಸ್ತ್ರ ತರುವುದನ್ನು ನಿಷೇಧಿಸಲಾಗಿದೆ. ನಾಮಪತ್ರ ಸಲ್ಲಿಸುವಾಗ ಮೂರು ವಾಹನಗಳನ್ನು 100 ಮೀಟರ್‌ ಪರಿಮಿತಿಯೊಳಗೆ ತರಲು ಅವಕಾಶವಿರುತ್ತದೆ’ ಎಂದು ಹೇಳಿದರು.

‘ಚುನಾವಣಾ ಪ್ರಕ್ರಿಯೆಗೆ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರವನ್ನು ಏಪ್ರಿಲ್‌ 4ರವರೆಗೆ (ಸಾರ್ವಜನಿಕ ರಜೆ ದಿನ ಹೊರತು) ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯೂ ಆಗಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಅವರಿಗೆ ಸಲ್ಲಿಸಬಹುದು. ಅಭ್ಯರ್ಥಿ ಸೇರಿದಂತೆ ಐವರು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ ಕೊಠಡಿಯಲ್ಲಿ ಸ್ಥಾಪಿಸಿರುವ ಚುನಾವಣಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಬಹುದು. ಆನ್‌ಲೈನ್‌ನಲ್ಲೂ ನಾಮಪತ್ರ ಸಲ್ಲಿಸಲು ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘‌ಮಾನ್ಯತೆ ಪಡೆದ ‌ರಾಜಕೀಯ ಪಕ್ಷದ ಅಭ್ಯರ್ಥಿಗೆ ಕ್ಷೇತ್ರದ ಒಬ್ಬ ಮತದಾರ ಸೂಚಕರಾಗಿರಬೇಕು. ಮಾನ್ಯತೆ ಇಲ್ಲದ ಪಕ್ಷದ ಅಭ್ಯರ್ಥಿಗೆ ಕ್ಷೇತ್ರದ 10 ಮತರಾರರು ಸೂಚಕರಾಗಿರಬೇಕು. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಕೆ ಮಾಡಬಹುದು’ ಎಂದರು.

‘ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಏ.8ರ ಮಧ್ಯಾಹ್ನ 3 ಗಂಟೆಯೊಳಗೆ ಹಿಂಪಡೆಯಲು ಅವಕಾಶವಿದೆ. ಏ.26ರ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಜೂನ್‌ 4ರಂದು ಮತ ಎಣಿಕೆ ಇರಲಿದೆ’ ಎಂದು ತಿಳಿಸಿದರು.

ಈಗಾಗಲೇ ಚುನಾವಣಾ ಖರ್ಚು ವೆಚ್ಚದ ವೀಕ್ಷಕರಾಗಿ ವಡೋದರದ ಆದಾಯ ತೆರಿಗೆ ಇಲಾಖೆ ಅಧಿಕಾರಿ ಬಾಲು ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಜನರಲ್‌ ವೀಕ್ಷಕರು, ಪೊಲೀಸ್ ವೀಕ್ಷಕರು ಬರಲಿದ್ದಾರೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ‘ಯಾವುದೇ ಮೆರವಣಿಗೆ, ಸಭೆ, ಸಮಾವೇಶ ಆಯೋಜನೆಗೆ, ಬಂಟಿಂಗ್ಸ್‌, ಬ್ಯಾನರ್‌ ಅಳವಡಿಸಲು ಜಿಲ್ಲಾ ಚುನಾವಣಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಗೂಡ್ಸ್ ವಾಹನದಲ್ಲಿ ಜನರನ್ನು ಕರೆ ತಂದರೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಪ್ರತಿಭಟನೆಗೆ ಅವಕಾಶ ಇಲ್ಲ’ ಎಂದರು.

‘ಪೊಲೀಸ್‌ ಇಲಾಖೆಯಿಂದ 1,800 ಸಿಬ್ಬಂದಿ ಹೊರಗಡೆಯಿಂದ ಜಿಲ್ಲೆಗೆ ಬರಲಿದ್ದಾರೆ. 5 ಪ್ಯಾರಾ‌‌ ಮಿಲಿಟರಿ ಪಡೆ ಬರಲಿವೆ. 78 ಮೊಬೈಲ್‌ ಸ್ಕ್ವಾಡ್‌ಗಳಿವೆ. 25 ಕಡೆ ಪ್ಯಾರಾ ‌ಮಿಲಿಟರಿಯಿಂದ ರೂಟ್ ಮಾರ್ಚ್ ‌ಮಾಡಲಾಗಿದೆ. ಚುನಾವಣಾ ಅಕ್ರಮದ ಮೇಲೆ ನಿಗಾ ಇಡಲಾಗಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ್‌ ವಣಿಕ್ಯಾಳ್‌, ಚುನಾವಣಾ ಖರ್ಚು ವೆಚ್ಚದ ವೀಕ್ಷಕ ಬಾಲು, ಅಧಿಕಾರಿ ನಾಗವೇಣಿ ಇದ್ದರು.

ಹೆಚ್ಚು ಜನ ಸೇರುವ ರಾಜಕೀಯ ವ್ಯಕ್ತಿಗಳು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು. ರಾಜಕೀಯ ಪಕ್ಷದವರು ದೇಗುಲಗಳಲ್ಲಿ ತಟ್ಟೆಗೆ ದುಡ್ಡು ಹಾಕಿದರೂ ಚುನಾ ಉಲ್ಲಂಘನೆ ಆದಂತೆ
ಎಂ.ನಾರಾಯಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಚುನಾವಣಾ ಕಾರ್ಯಕ್ಕೆ 10 ಸಾವಿರ ಸಿಬ್ಬಂದಿ

‘ಚುನಾವಣಾ ಕಾರ್ಯದಲ್ಲಿ ಸುಮಾರು 10 ಸಾವಿರ ಸಿಬ್ಬಂದಿ ತೊಡಗಿದ್ದಾರೆ. ಅವರಿಗೆ ಹಂತಹಂತವಾಗಿ ತರಬೇತಿ ನೀಡಲಾಗುತ್ತಿದ್ದು ಪ್ರತಿಯೊಬ್ಬರು ಕಡ್ಡಾಯವಾಗಿ ಹಾಜರಾಗಬೇಕು. ಗೈರಾದರೆ ಕ್ರಮ ವಹಿಸಲಾಗುತ್ತದೆ’ ಎಂದು ಅಕ್ರಂ ಪಾಷಾ ತಿಳಿಸಿದರು. ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಶೇ 77.15ರಷ್ಟು ಮತದಾನ ನಡೆದಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್‌ ಸಮಿಯಿಂದ ಚಟುವಟಿಕೆಗಳು ನಡೆಯುತ್ತಿವೆ’ ಎಂದರು. ‘ಎರಡು ಕಡೆ ಮತದಾನ ಬಹಿಷ್ಕರಿಸುವ ಕುರಿತು ಹೇಳಿಕೊಂಡಿರುವುದು ಗಮನಕ್ಕೆ ಬಂದಿದೆ. ಸ್ವೀಪ್‌ ತಂಡ ತೆರಳಿ ‌ಮನವೊಲಿಸುವ ಕೆಲಸ ಮಾಡುತ್ತಿದೆ. ಚುನಾವಣೆ ಬಳಿಕ ಅವರ ಸಮಸ್ಯೆ ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT