ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಚುನಾವಣೆಗೆ ಸಿಐಎಸ್‌ಎಫ್‌ ಪಡೆ ಕಾವಲು

ಲೋಕಸಭೆ ಚುನಾವಣೆ; ಭಾರಿ ಭದ್ರತೆಗೆ ಸಿದ್ಧತೆ–ಕೆಲವೇ ದಿನಗಳಲ್ಲಿ ಬಿಎಸ್‌ಎಫ್‌ ಯೋಧರ ಆಗಮನ
Published 14 ಮಾರ್ಚ್ 2024, 7:11 IST
Last Updated 14 ಮಾರ್ಚ್ 2024, 7:11 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಲು ಕ್ಷಣಗಣನೆ ಶುರುವಾಗಿದ್ದು, ಜಿಲ್ಲೆಯಲ್ಲಿ ಚುನಾವಣಾ ಭದ್ರತೆಗೆಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ(ಸಿಐಎಸ್‌ಎಫ್‌) 120 ಯೋಧರು ಜಿಲ್ಲೆಗೆ ಬಂದಿಳಿದಿದ್ದಾರೆ.

ಎರಡು ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಕೋಲಾರ ಜಿಲ್ಲೆ ಸೂಕ್ಷ್ಮ ಪ್ರದೇಶ ಕೂಡ. ಹೀಗಾಗಿ, ಸಿಐಎಸ್‌ಎಫ್‌ ಯೋಧರಲ್ಲದೇ, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಎರಡು ತುಕುಡಿಗಳು (240 ಸಿಬ್ಬಂದಿ) ಸದ್ಯದಲ್ಲೇ ಬರಲಿವೆ. 

ತ್ರಿಪುರದ ಅಗರ್ತಲಾದಿಂದ ಸಿಐಎಸ್‌ಎಫ್‌ನ ಒಂದು ತುಕಡಿ ಬಂದಿದೆ. ಈ ಯೋಧರು ಎರಡು ದಿನಗಳಿಂದ ಪರೇಡ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಬಂಗಾರಪೇಟೆ ವೃತ್ತ, ಡೂಂಲೈಟ್‌ ವೃತ್ತ, ಟೇಕಲ್‌ ವೃತ್ತ, ಕ್ಲಾಕ್‌ ಟವರ್‌, ಕೋಲಾರ–ಬೆಂಗಳೂರು ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಎಂ.ಬಿ ರಸ್ತೆ ಸೇರಿದಂತೆ ವಿವಿಧೆಡೆ ರೂಟ್‌ ಮಾರ್ಚ್‌ ನಡೆಯಿತು. ಸಮವಸ್ತ್ರ ಧರಿಸಿದ್ದ ಯೋಧರು ಬಂದೂಕು, ರೈಫಲ್‌ ಹಿಡಿದು ಸಾಗಿದರು. ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಕೂಡ ಅವರ ಜೊತೆ ಹೆಜ್ಜೆ ಹಾಕಿದರು. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಜನರಲ್ಲಿ ಭರವಸೆ ತುಂಬಿದರು. ವಿಜಯದ ಚಿಹ್ನೆ ತೋರಿಸಿದರು. ಜೊತೆಗೆ ಪೊಲೀಸ್‌ ವಾಹನಗಳು ಸೈರನ್‌ ಮೊಳಗಿಸುತ್ತಾ ಸಾಗಿದವು. ಇನ್ನುಳಿದ ತಾಲ್ಲೂಕುಗಳಲ್ಲೂ ರೂಟ್‌ ಮಾರ್ಚ್‌ ನಡೆಸಲಿದ್ದಾರೆ.

‘ಮುಂಬರುವ ಲೋಕಸಭೆ ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸಿಐಎಸ್‌ಎಫ್‌ನ ಒಂದು ಕಂಪನಿ ಹಾಗೂ ಬಿಎಸ್‌ಎಫ್‌ ಎರಡು ಕಂಪನಿಗಳು ಕಾರ್ಯನಿರ್ವಹಿಸಲಿವೆ. ಪ್ರತಿ ಕಂಪನಿಯಲ್ಲಿ 120 ಯೋಧರು ಇದ್ದಾರೆ. ಚುನಾವಣೆ ಮುಗಿಯುವವರೆಗೆ ನಮ್ಮ ಅತಿಥಿಗಳಾಗಿ ಇರುತ್ತಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಧರು ಹಾಗೂ ಪೊಲೀಸರು ಚುನಾವಣೆ ಪ್ರಕ್ರಿಯೆ ಮೇಲೆ ಗಮನ ಇಡಲಿದ್ದಾರೆ. ಎಲ್ಲಾ ಶಕ್ತಿಗಳಿಗೆ ಎಚ್ಚರಿಕೆ ನೀಡಲು ಪಥ ಸಂಚಲನ ನಡೆಸಿದ್ದೇವೆ. ಅಕ್ರಮ ತಡೆಯುವುದು ನಮ್ಮ ಉದ್ದೇಶ’ ಎಂದರು.

‘ಎಲ್ಲಾ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರ ಜೊತೆ ಸಭೆ ನಡೆಸಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

‘ಇನ್ನು ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಪ್ರಚಾರ, ಸಮಾವೇಶ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬರುತ್ತಿರುತ್ತಾರೆ. ಅದಕ್ಕೆ ನಾವು ಸಿದ್ಧರಾಗಿದ್ದೇವೆ. ಗಣ್ಯರು ಬಂದಾಗ ಇಳಿಯಲು ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇವೆ. ಮತಪೆಟ್ಟಿಗೆ ಇಡುವ ಸ್ಟ್ರಾಂಗ್ ರೂಮ್‌ಗಳನ್ನು ಪರಿಶೀಲಿಸಲಾಗಿದೆ. ನಗರದ ವಿವಿಧಡೆ ಅಳವಡಿಸಿರುವ ಬಂಟಿಂಗ್ಸ್‌ ತೆರವಿಗೆ ಸಮಿತಿ ರಚಿಸಲಾಗಿದೆ’ ಎಂದರು.

ರೂಟ್‌ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದ ಸಿಐಎಸ್‌ಎಫ್‌ ಯೋಧರು ಹಾಗೂ ಪೊಲೀಸರು
ರೂಟ್‌ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದ ಸಿಐಎಸ್‌ಎಫ್‌ ಯೋಧರು ಹಾಗೂ ಪೊಲೀಸರು
ಎಂ.ನಾರಾಯಣ
ಎಂ.ನಾರಾಯಣ

ಜಿಲ್ಲೆಗೆ ಒಟ್ಟು ಮೂರು ಕಂಪನಿ (360 ಸಿಬ್ಬಂದಿ) ಶಾಂತ, ನಿರ್ಭೀತ ಮತದಾನಕ್ಕೆ ಸಹಕಾರ ಅಗತ್ಯ–ಎಸ್ಪಿ ನಗರದ ವಿವಿಧೆಡೆ ರೂಟ್‌ ಮಾರ್ಚ್‌

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲಿದ್ದೇವೆ. ಭಯಪಡುವ ಅಗತ್ಯ ಇಲ್ಲ ಎಂಬುದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಲು ರೂಟ್‌ ಮಾರ್ಚ್‌ ನಡೆಸಲಾಗುತ್ತದೆ

-ಎಂ.ನಾರಾಯಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೋಲಾರ

12 ಅಂತರರಾಜ್ಯ ಚೆಕ್‌ ಪೋಸ್ಟ್‌

ಜಿಲ್ಲೆಯಲ್ಲಿ 12 ಅಂತರರಾಜ್ಯ ಚೆಕ್‌ಪೋಸ್ಟ್‌ ಗುರುತಿಸಲಾಗಿದೆ. ಈ ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಅಲ್ಲದೇ ಚೆಕ್‌ಪೋಸ್ಟ್‌ಗಳಲ್ಲಿ ನಡೆಯುವ ಚಟುವಟಿಕೆಗಳನ್ನು ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಕುಳಿತು ವೀಕ್ಷಿಸುವ ವ್ಯವಸ್ಥೆಯೂ ಇರಲಿದೆ. ಈ ನಿಟ್ಟಿನಲ್ಲಿ ವೆಬ್‌ಕ್ಯಾಸ್ಟಿಂಗ್‌ ಅಳವಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಮೂರು ಪಾಳಿಗಳ ಕೆಲಸ ಮಾಡಲಿದ್ದಾರೆ. ಕಂಟ್ರೋಲ್ ರೂಂಗಳಲ್ಲಿ ದಿನದ 24 ಗಂಟೆಯೂ ಕಣ್ಗಾವಲು ಪಡೆ ನಿಗಾ ವಹಿಸುತ್ತದೆ ಎಂದು ಎಂ.ನಾರಾಯಣ ತಿಳಿಸಿದರು. ‘ಈಗಾಗಲೇ ಅಂತರರಾಜ್ಯ ಪೊಲೀಸರ ಸಭೆ ನಡೆಸಿದ್ದೇವೆ. ನಾಲ್ಕು ಬಾರಿ ಪೊಲೀಸರಿಗೆ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷದ ಜೊತೆಗೆ ಸಭೆ ನಡೆಸಲಾಗಿದೆ. ಮಾರ್ಚ್‌ 15ರಂದು ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಸಭೆ ಇರಲಿದೆ’ ಎಂದರು.

40 ಜನರ ಗಡಿಪಾರಿಗೆ ಪತ್ರ

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸುಮಾರು 40 ಜನರನ್ನು ಚುನಾವಣೆ ಹಿನ್ನೆಲೆಯಲ್ಲಿ ಗಡಿಪಾರು ಮಾಡಲು ಮುಖ್ಯ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಎಂ.ನಾರಾಯಣ ಹೇಳಿದರು. ‘ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವುದು ನಮ್ಮ ಉದ್ದೇಶ. ಸಾಮಾಜಿಕ ಜಾಲತಾಣಗಳ ಮೇಲೆಯೂ ಹದ್ದಿನ ಕಣ್ಣು ಇಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 612 ರೌಡಿಶೀಟರ್‌ಗಳ ಮನೆ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದೇವೆ. ‌ಪೊಲೀಸ್‌ ಠಾಣೆಗೆ ಆಯುಧಗಳನ್ನು ಒಪ್ಪಿಸಲು ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT