ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಕುತೂಹಲ ಸೃಷ್ಟಿಸಿದ ಕೋಲಾರ ಟಿಕೆಟ್‌!

ಕ್ಷಣಕ್ಕೊಂದು ಬೆಳವಣಿಗೆ: ಮೈತ್ರಿಕೂಟದಲ್ಲಿ ಜೆಡಿಎಸ್‌ಗೆ ಟಿಕೆಟ್‌ ನಿಗದಿ‌–ಎಚ್‌ಡಿಕೆ ಮಾತೇ ಸುಳಿವು
Published 14 ಮಾರ್ಚ್ 2024, 7:09 IST
Last Updated 14 ಮಾರ್ಚ್ 2024, 7:09 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಕೋಲಾರ ಮೀಸಲು ಕ್ಷೇತ್ರದ ಟಿಕೆಟ್‌ ವಿಚಾರ ಭಾರಿ ಕುತೂಹಲ ಸೃಷ್ಟಿಸಿದೆ.

ಇತ್ತ ರಾಜ್ಯದ 20 ಕ್ಷೇತ್ರಗಳಿಗೆ ಬುಧವಾರ ಟಿಕೆಟ್‌ ಘೋಷಣೆ ಮಾಡಿರುವ ಬಿಜೆಪಿ ಹೈಕಮಾಂಡ್‌, ಕೋಲಾರದ ಬಗ್ಗೆ ಚಕಾರ ಎತ್ತಿಲ್ಲ. ಆ ಕಡೆ ಹಾಸನದಲ್ಲಿ ಮಂಗಳವಾರ ಸಭೆಯೊಂದರಲ್ಲಿ ಮಾತನಾಡಿರುವ ಜೆಡಿಎಸ್‌ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರದಲ್ಲಿ ತಮ್ಮ ಪಕ್ಷವೇ ಸ್ಪರ್ಧಿಸಲಿದೆ ಎಂದಿದ್ದಾರೆ.

ಈ ಮೂಲಕ ಮೈತ್ರಿಕೂಟದಲ್ಲಿ ಕೋಲಾರ ಕ್ಷೇತ್ರ ಬಹುತೇಕ ಜೆಡಿಎಸ್‌ಗೆ ನಿಗದಿ ಆಗಿರುವಂತಿದೆ. ಟಿಕೆಟ್‌ ತಪ್ಪಿಸಿಕೊಂಡ ಹಾಲಿ ಸಂಸದರ ಪಟ್ಟಿಗೆ ಎಸ್‌.ಮುನಿಸ್ವಾಮಿ ಕೂಡ ಸೇರುವ ಸಾಧ್ಯತೆ ದಟ್ಟವಾಗಿದೆ.

ಮೈತ್ರಿ ಲೆಕ್ಕಾಚಾರದಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ. ಹಾಸನ ಜೆಡಿಎಸ್‌ಗೆ ಖಚಿತ. ಆದರೆ, ಮಂಡ್ಯ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ಇನ್ನೂ ಘೋಷಣೆ ಆಗಿದಿರುವ ಕಾರಣ ಮತ್ಯಾವ ತಿರುವು ಲಭಿಸಬಹುದು ಎಂಬ ಕುತೂಹಲ ಉಳಿದುಕೊಂಡಿದೆ.‌

ಇದಲ್ಲದೇ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಸಿ.ಎನ್‌.ಮಂಜುನಾಥ್‌ ಕಣಕ್ಕಿಳಿದಿದ್ದರೂ ಅವರು ಎಚ್‌.ಡಿ.ದೇವೇಗೌಡರ ಅಳಿಯ. ಹೀಗಾಗಿ, ಚಿಹ್ನೆ ಮಾತ್ರ ಬದಲಾಗಿದ್ದು, ಆ ಕ್ಷೇತ್ರವೂ ಜೆಡಿಎಸ್‌ ಪಾಲಿನದ್ದು ಎಂಬ ಮಾತು ಕೇಳಿಬರುತ್ತಿದೆ. ಈ ಲೆಕ್ಕಾಚಾರದಲ್ಲಿ ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜೆಡಿಎಸ್‌ ಪಾಲಿನದ್ದಾಗುತ್ತದೆ. ಅಲ್ಲಿಗೆ ಮೈತ್ರಿಕೂಟದಲ್ಲಿ ಜೆಡಿಎಸ್‌ನ ಮೂರು ಸೀಟುಗಳ ಕೋಟಾ ಪೂರ್ಣಗೊಂಡಂ‌ತಾಗುತ್ತದೆ. ಆಗ ಕೋಲಾರ ಬಿಜೆಪಿ ಪಾಲಾಗುವ ಸಾಧ್ಯತೆ ಎಂದು ವಿಶ್ಲೇಷಣೆಗಳು ನಡೆಯುತ್ತಿವೆ. ಆಕಸ್ಮಾತ್‌ ಮಂಡ್ಯ ಕ್ಷೇತ್ರ ಪಡೆಯಲು ಬಿಜೆಪಿಯಿಂದ ಸುಮಲತಾ ಅಂಬರೀಷ್‌ ಪಟ್ಟು ಹಿಡಿದು ಯಶಸ್ವಿಯಾದರೆ ಜೆಡಿಎಸ್‌ಗೆ ಕೋಲಾರ ಖಚಿತವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದೂ ಸಾಧ್ಯವಾಗದಿದ್ದರೆ ಜೆಡಿಎಸ್‌ ಚಿಹ್ನೆಯಡಿ ಮುನಿಸ್ವಾಮಿ ಅವರೇ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ಬಗ್ಗೆಯ ಚರ್ಚೆ ಚಾಲ್ತಿಯಲ್ಲಿದೆ.

ಅಮಿತ್‌ ಶಾ ಸೇರಿದಂತೆ ಬಿಜೆಪಿ ವರಿಷ್ಠರ ಜೊತೆ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಜೆಡಿಎಸ್‌ನ ಮುಖಂಡರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈಗಾಗಲೇ ಕೋಲಾರ ಕ್ಷೇತ್ರ ತಮ್ಮ ಪಕ್ಷಕ್ಕೆ ಸಿಗುವುದು ಬಹುತೇಕ ಖಚಿತವೆಂಬ ಖುಷಿಯಲ್ಲಿ ಜೆಡಿಎಸ್‌ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದಾರೆ. ಹೋಬಳಿ ಮಟ್ಟದಲ್ಲಿ ಸಭೆ ನಡೆಸುತ್ತಾ ಸಂಘಟನೆಯಲ್ಲಿ ತೊಡಗಿದ್ದಾರೆ.

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿರುವ ಸಮೃದ್ಧಿ ಮಂಜುನಾಥ್‌, ಮಲ್ಲೇಶಬಾಬು ಹಾಗೂ ನಿಸರ್ಗ ನಾರಾಯಣಸ್ವಾಮಿ ಅವರು ಅಧಿಕೃತ ಘೋಷಣೆಗೆ ಕಾದಿದ್ದಾರೆ.

ಇತ್ತ ಟಿಕೆಟ್‌ ವಿಚಾರವಾಗಿ ತಲೆಕೆಡಿಸಿಕೊಳ್ಳದ ಸಂಸದ ಮುನಿಸ್ವಾಮಿ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಾ ‘ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡುವುದೇ ನಮ್ಮ ಗುರಿ. ಯಾರಿಗೆ ಟಿಕೆಟ್‌ ಕೊಟ್ಟರೂ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ಖಚಿತ’ ಎನ್ನುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿಸ್ವಾಮಿ ಅವರಲ್ಲದೇ, 2–3 ಮಂದಿ ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ.

ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ

ದಿನಕ್ಕೊಂದು ಅಚ್ಚರಿ ತಿರುವು; ಯಾರಿಗೆ ಟಿಕೆಟ್‌? ಟಿಕೆಟ್‌ ವಿಚಾರದಲ್ಲಿ ವಿಚಲಿತರಾಗದ ಸಂಸದ ಮುನಿಸ್ವಾಮಿ ಕುಮಾರಸ್ವಾಮಿ–ಅಮಿತ್‌ ಶಾ ನಡುವಿನ ಮತ್ತೊಂದು ಭೇಟಿ ಬಳಿಕ ಸ್ಪಷ್ಟ ತೀರ್ಮಾನ

ಎಚ್‌ಡಿಕೆ ಕೈ ಸೇರಿದ ಸಮೀಕ್ಷೆಯ ವರದಿ

ಕೋಲಾರ ಕ್ಷೇತ್ರದ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಜೆಡಿಎಸ್‌ ವರಿಷ್ಠರು ಮೂವರು ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧಪಡಿಸಿಕೊಂಡು ಯಾರನ್ನು ಕಣಕ್ಕಿಳಿಸಬೇಕೆಂದು ಸಮೀಕ್ಷೆ ಕೈಗೊಂಡಿದ್ದರು. ಸಮೀಕ್ಷೆ ಮುಗಿದಿದ್ದು ವರದಿ ಎಚ್‌.ಡಿ.ಕುಮಾರಸ್ವಾಮಿ ಅವರ ಕೈಸೇರಿದೆ. ಇದರಲ್ಲಿ ಮುಳಬಾಗಿಲು ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌ ಅವರ ಹೆಸರು ಮುಂಚೂಣಿಯಲ್ಲಿರುವುದು ಗೊತ್ತಾಗಿದೆ. ಬಂಗಾರಪೇಟೆಯ ಮಲ್ಲೇಶಬಾಬು ಹಾಗೂ ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಕೂಡ ಸಮೀಕ್ಷೆಯ ಪಟ್ಟಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT