ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಕೊತ್ತೂರು, ಅನಿಲ್‌ ತಂತ್ರಗಾರಿಕೆ ಏನು?

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಯೋಜನೆ!
Published 10 ಫೆಬ್ರುವರಿ 2024, 6:02 IST
Last Updated 10 ಫೆಬ್ರುವರಿ 2024, 6:02 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಗೆ ದಿನಗಳು ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹೂಡಿರುವ ತಂತ್ರಗಾರಿಕೆ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮುಂಬರುವ ಚುನಾವಣೆಗೆ ತಾವು ಕೂಡ ಒಬ್ಬ ಅಭ್ಯರ್ಥಿಯನ್ನು ಸಿದ್ಧಮಾಡಿಕೊಂಡಿದ್ದೇವೆ ಎಂದು ಬಹಳ ದಿನಗಳಿಂದ ಹೇಳಿಕೊಳ್ಳುತ್ತಿರುವ ಇವರಿಬ್ಬರು ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ದಾಳ ಉರುಳಿಸಿದಂತಿದೆ.

ಜೆಡಿಎಸ್‌ ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ಜಿ.ಕೆ.ವೆಂಕಟಶಿವಾರೆಡ್ಡಿ ಅವರನ್ನು ಜಿಲ್ಲೆಯ ಹಿರಿಯ ನಾಯಕರೊಬ್ಬರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಭೇಟಿ ಮಾಡಿಸಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುತ್ತಿದ್ದಾರೆ ಎಂಬ ಘಟಬಂಧನ್‌ ನಾಯಕರ ‘ಸ್ಫೋಟಕ’ ಹೇಳಿಕೆ ಹಿಂದೆ ರಾಜಕೀಯ ತಂತ್ರಗಾರಿಕೆಯನ್ನು ತೋರುತ್ತಿದೆ.

ಇಬ್ಬರೂ ಶಾಸಕರನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಳಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದು ಜಿಲ್ಲೆಯ ಹಿರಿಯ ನಾಯಕ ಕೆ.ಎಚ್‌.ಮುನಿಯಪ್ಪ. ಸಮೃದ್ಧಿ ಹಾಗೂ ವೆಂಕಟಶಿವಾರೆಡ್ಡಿ ಜೊತೆ ಮುನಿಯಪ್ಪ ರಾಜಕೀಯವಾಗಿಯೂ ಉತ್ತಮ ಸಂಬಂಧ ಹೊಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆಗಿದ್ದಾಗ ಮುನಿಯಪ್ಪ ಅವರ ಪರ ಸ್ವಪಕ್ಷೀಯ ಕಾಂಗ್ರೆಸ್‌ ಮುಖಂಡರಿಗಿಂತ ಹೆಚ್ಚು ಕೆಲಸ ಮಾಡಿದ್ದು ಜೆಡಿಎಸ್‌ನವರು.

‘ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊಡಿಸುವುದಾಗಿ ನನ್ನನ್ನು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿದ್ದೇ ಕೆ.ಎಚ್‌.ಮುನಿಯಪ್ಪ’ ಎಂದು ಸಮೃದ್ಧಿ ಮಂಜುನಾಥ್‌ ಹೇಳಿರುವುದು ಇವರಿಬ್ಬರ ಸಂಬಂಧಕ್ಕೊಂದು ಉದಾಹರಣೆ.

ಈ ಬಾರಿಯೂ ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಟಿಕೆಟ್‌ ಆಕಾಂಕ್ಷಿ. ಜೊತೆಗೆ ಅವರ ಅಳಿಯ ಹಾಗೂ ಪುತ್ರ ಕೂಡ ಪ್ರಯತ್ನ ನಡೆಸಿದ್ದಾರೆ.

ಈ ನಡುವೆ, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ಗೆ ಕ್ಷೇತ್ರದ ಟಿಕೆಟ್ ಸಿಕ್ಕರೆ ಸಮೃದ್ಧಿ ಮಂಜುನಾಥ್‌ ಅವರನ್ನೇ ಕಣಕ್ಕಿಳಿಸಲು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಆದರೆ, ಸಮೃದ್ಧಿ ಅವರನ್ನು ಕಾಂಗ್ರೆಸ್‌ಗೆ ಕರೆ ತಂದು ಟಿಕೆಟ್‌ ಕೊಡಿಸಲು ‘ಕೈ’ ಗುಂಪಿನ ಒಂದು ಬಣ ಬಹಳ ತಿಂಗಳಿನಿಂದ ಪ್ರಯತ್ನ ನಡೆಸಿದೆ. ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ವದಂತಿಗಳು ಐದಾರು ತಿಂಗಳಿಂದ ಚಾಲ್ತಿಯಲ್ಲಿದೆ. ಇತ್ತ ರಮೇಶ್ ಕುಮಾರ್‌ ಹಾಗೂ ವೆಂಕಟಶಿವಾರೆಡ್ಡಿ ಅವರನ್ನು ಒಂದುಗೂಡಿಸಿದರೆ ತಮ್ಮ ಬಣ ಬಲವಾಗಲಿದೆ ಎಂಬ ಲೆಕ್ಕಾಚಾರವೂ ಘಟಬಂಧನ್‌ಗೆ ಇದೆ.

‘ಸಮೃದ್ಧಿ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಟಿಕೆಟ್‌ ನೀಡಿದರೆ ಮುನಿಯಪ್ಪ ಹಾಗೂ ಅವರ ಬೆಂಬಲಿಗರನ್ನು ಬದಿಗೆ ಸರಿಸಬಹುದು, ಟಿಕೆಟ್‌ ತಪ್ಪಿಸಬಹುದು ಎಂಬ ಆಲೋಚನೆ ಘಟಬಂಧನ್‌ಗೆ ಇದ್ದಂತಿದೆ. ಆದರೆ, ಆ ತಂತ್ರಗಾರಿಕೆ ಮುನಿಯಪ್ಪ ಮುಂದೆ ನಡೆಯಲ್ಲ’ ಎಂದು ಮುನಿಯಪ್ಪ ಬೆಂಬಲಿಗರೊಬ್ಬರು ಪತ್ರಿಕೆಗೆ ತಿಳಿಸಿದರು.

ಸಮೃದ್ಧಿ ಮಂಜುನಾಥ್‌ ಹಾಗೂ ವೆಂಕಟಶಿವಾರೆಡ್ಡಿ ಕಾಂಗ್ರೆಸ್‌ಗೆ ಬಂದರೂ, ಬಾರದಿದ್ದರೂ ಈಗ ಉದ್ಭವಿಸಿರುವ ವಿಚಾರ ಮತ್ತೆ ಜಿಲ್ಲೆಯ ಕಾಂಗ್ರೆಸ್‌ನಲ್ಲಿರುವ ಘಟಬಂಧನ್‌ ಹಾಗೂ ಮುನಿಯಪ್ಪ ಬೆಂಬಲಿಗರ ನಡುವಿನ ಮನಸ್ತಾಪವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT