ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಕೊರತೆಯಿಂದ ರೈತರಿಗೆ ನಷ್ಟ

ಕೃಷಿ ಅಭಿಯಾನದಲ್ಲಿ ಜಿ.ಪಂ ಸದಸ್ಯ ಅರುಣ್‌ಪ್ರಸಾದ್ ಅಭಿಪ್ರಾಯ
Last Updated 3 ಆಗಸ್ಟ್ 2019, 13:51 IST
ಅಕ್ಷರ ಗಾತ್ರ

ಕೋಲಾರ: ‘ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್ ಹೇಳಿದರು.

ಕೃಷಿ ಇಲಾಖೆಯು ತಾಲ್ಲೂಕಿನ ವಕ್ಕಲೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕೃಷಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ‘ಅರಿವಿನ ಕೊರತೆ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯದ ಕಾರಣದಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರೈತರಿಗೆ ಸುಧಾರಿತ ಕೃಷಿ ತಂತ್ರಜ್ಞಾನ ಅನುಸರಿಸಿ ಬೆಳೆ ಬೆಳೆಯುವ ಬಗ್ಗೆ ಅರಿವು ಮೂಡಿಸಿದರೆ ಆರ್ಥಿಕವಾಗಿ ಸಬಲರಾಗುತ್ತಾರೆ. ಸರ್ಕಾರದ ಸೌಕರ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದೆ. ಬೆಳೆ ವಿಮೆ ಮಾಡಿಸಿದರೆ ಬೆಳೆ ನಷ್ಟವಾದ ಸಂದರ್ಭದಲ್ಲಿ ಪರಿಹಾರ ಸಿಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಬೆಳೆ ವಿಮೆ ಯೋಜನೆ ಬಗ್ಗೆ ರೈತರಲ್ಲಿ ಗೊಂದಲಗಳಿವೆ. ಆದ ಕಾರಣ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ ನೀಡಿ ಗೊಂದಲ ನಿವಾರಿಸಬೇಕು. ಜತೆಗೆ ಬೆಳೆ ವಿಮೆ ಯೋಜನೆಗೆ ಹೆಸರು ನೋಂದಾಯಿಸುವಂತೆ ರೈತರನ್ನು ಪ್ರೇರೇಪಿಸಬೇಕು’ ಎಂದು ಸೂಚಿಸಿದರು.

‘ಸರ್ಕಾರಗಳು ರೈತರ ಹಿತ ಕಾಪಾಡಲು ಸಾಕಷ್ಟು ಯೋಜನೆ ಜಾರಿಗೊಳಿಸಿವೆ. ಮಾಹಿತಿ ಕೊರತೆಯಿಂದಾಗಿ ಯೋಜನೆಗಳ ಪ್ರಯೋಜನ ರೈತರಿಗೆ ತಲುಪುತ್ತಿಲ್ಲ. ಆದ್ದರಿಂದ ಅಧಿಕಾರಿಗಳು ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಪ್ರತಿ ರೈತರಿಗೂ ಸೌಲಭ್ಯ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ದೇಶದ ಬೆನ್ನೆಲುಬು: ‘ರೈತರು ದೇಶದ ಬೆನ್ನೆಲುಬು. ದೇಶ ಕಾಯುವ ಸೈನಿಕರಿಗೆ ಮತ್ತು ಅನ್ನ ನೀಡುವ ರೈತರಿಗೆ ಮೋಸ ಮಾಡಿದವರು ಜೀವನದಲ್ಲಿ ಉದ್ಧಾರ ಆಗುವುದಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಅಭಿಪ್ರಾಯಪಟ್ಟರು.

‘ಆರ್ಥಿಕ ಸಂಕಷ್ಟದ ನಡುವೆಯೂ ರೈತರು ದೇಶಕ್ಕೆ ಆಹಾರ ಭದ್ರತೆ ನೀಡಿದ್ದಾರೆ. ಸೈನಿಕರು ಗಾಳಿ, ಮಳೆ, ಬಿಸಿಲು, ಚಳಿ ಲೆಕ್ಕಿಸದೆ ದೇಶಕ್ಕೆ ರಕ್ಷಣೆ ನೀಡುತ್ತಾರೆ. ಸೈನಿಕರು ಹಾಗೂ ರೈತರನ್ನು ಪ್ರತಿಯೊಬ್ಬರು ಗೌರವಿಸಬೇಕು. ಪೋಷಕರು ಮಕ್ಕಳನ್ನು ಓದಿಸಿ ವಿದೇಶಕ್ಕೆ ಕಳುಹಿಸದೆ ಸೇನೆಗೆ ಸೇರಿಸಬೇಕು’ ಎಂದು ಮನವಿ ಮಾಡಿದರು.

‘ನರೇಗಾ ಯೋಜನೆಯಲ್ಲಿ ಸಾಕಷ್ಟು ಅನುದಾನವಿದ್ದು, ಅಧಿಕಾರಿಗಳು ಯೋಜನೆಯ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ರೈತರು ಬೆಳೆ ಬೆಳೆಯುವುದಕ್ಕೂ ಮುನ್ನ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಈ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಬೇಕು. ಬಹುಪಾಲು ರೈತರು ಮಣ್ಣು ಪರೀಕ್ಷೆಯ ಅರಿವಿಲ್ಲದೆ ಬೆಳೆ ಬೆಳೆದು ಹೆಚ್ಚಿನ ಇಳುವರಿ ಪಡೆಯಲಾಗದೆ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾವಯವ ಪದ್ಧತಿ: ‘ರೈತರು ಮನೆಯಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸೌಕರ್ಯ ಪಡೆಯಬೇಕು. ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆದರೆ ಹೆಚ್ಚು ಇಳುವರಿ ಪಡೆಯಬಹುದು. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಳೆಗೆ ಕೊಟ್ಟಿಗೆ ಗೊಬ್ಬರ ಹೆಚ್ಚಾಗಿ ಉಪಯೋಗಿಸಬೇಕು. ಕಾಲವರಿಗೆ ತಕ್ಕಂತೆ ಬೆಳೆ ಬೆಳೆಯಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್ ಸಲಹೆ ನೀಡಿದರು.

ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷಮ್ಮ, ಸದಸ್ಯ ಮಂಜು, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಕೃಷಿ ವಿಜ್ಞಾನಿ ಶಶಿಧರ್, ಕೃಷಿ ಇಲಾಖೆ ಅಧಿಕಾರಿಗಳಾದ ರಾಘವೇಂದ್ರ, ಸುನಿಲ್, ಮಧುಸೂದನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT