ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಸಾಂಪ್ರದಾಯಿಕ ಸಂಕ್ರಾಂತಿ

Published 15 ಜನವರಿ 2024, 14:22 IST
Last Updated 15 ಜನವರಿ 2024, 14:22 IST
ಅಕ್ಷರ ಗಾತ್ರ

ಮುಳಬಾಗಿಲು: ನಗರದಲ್ಲಿ ಸೋಮವಾರ ಸಂಕ್ರಾಂತಿ ಹಬ್ಬ ಸಾಂಪ್ರದಾಯಿಕವಾಗಿ ನಡೆಯಿತು.

ಶಿವಕೇಶವ ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ ಸಂಪ್ರದಾಯದಂತೆ ಉದ್ಭವ ಶಿವಲಿಂಗೇಶ್ವರ ದೇವಾಲಯದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶಾಸಕ ಸಮೃದ್ಧಿ ಮಂಜುನಾಥ್ ಮತ್ತು ತಹಶೀಲ್ದಾರ್ ಬಿ.ಆರ್. ಮುನಿವೆಂಕಟಪ್ಪ ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಹಾಗೂ ಹಸುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಮುತ್ಯಾಲಪೇಟೆ, ಬಜಾರು ರಸ್ತೆ, ಹೊಸಪಾಳ್ಯ, ಸೋಮೇಶ್ವರ ಪಾಳ್ಯ, ಪಳ್ಳಿಗರ ಪಾಳ್ಯ, ಅಗ್ರಹಾರ, ವಿಠಲೇಶ್ವರ ವೃತ್ತ, ಕುರುಬರ ಪೇಟೆ, ಡಿವಿಜಿ ಶಾಲೆ ವೃತ್ತದ ಮೂಲಕ ನೇತಾಜಿ ಕ್ರೀಡಾಂಗಣದಲ್ಲಿ ಮೆರವಣಿಗೆ ಕೊನೆಯಾಯಿತು.

ಎತ್ತುಗಳಿಗೆ ಅದ್ದೂರಿ ಅಲಂಕಾರ: ಅದ್ಧೂರಿಯಾಗಿ ಅಲಂಕಾರ ಮಾಡಿದ ಎತ್ತುಗಳು ಮೆರವಣಿಗೆ ಆಕರ್ಷಣೆಯ ಕೇಂದ್ರವಾಗಿದ್ದವು.

ಹಸುಗಳಿಗೆ ಬಹುಮಾನ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಶು ಸಂಗೋಪನಾ ಇಲಾಖೆ ತಾಲ್ಲೂಕಿನಲ್ಲಿ ಅತಿಹೆಚ್ಚು ಹಾಲು ನೀಡುವ ಹಸುಗಳಿಗೆ ಬಹುಮಾನಗಳ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಒಟ್ಟು 26 ಹಸುಗಳು ಭಾಗವಹಿಸಿದ್ದವು. ಇದರಲ್ಲಿ 36 ಲೀಟರ್ ಹಾಲು ನೀಡುವ ತಾಲ್ಲೂಕಿನ ನಂಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎನ್.ಕುರುಬರಹಳ್ಳಿ ವಿಶ್ವನಾಥ್ ಎಂಬುವರಿಗೆ ಸೇರಿದ ಹಸುಗೆ ಪ್ರಥಮ ಬಹುಮಾನವಾಗಿ ₹ 15 ಸಾವಿರ, ಅದೇ ಗ್ರಾಮದ 34 ಲೀಟರ್ ಹಾಲು ನೀಡಿದ ಶ್ರೀನಾಥ್ ಎಂಬುವವರಿಗೆ ಸೇರಿದ ಹಸುವಿಗೆ ದ್ವಿತೀಯ ಸ್ಥಾನವಾಗಿ ₹ 10 ಸಾವಿರ ನಗದು, ಬೇವನತ್ತ ಗ್ರಾಮದ 32 ಲೀಟರ್ ಹಾಲು ಕೊಟ್ಟ ಕೋದಂಡಪ್ಪ ಎಂಬುವವರಿಗೆ ಸೇರಿದ ಹಸುವಿಗೆ ಮೂರನೆಯ ಬಹುಮಾನ, ತೊಂಡಹಳ್ಳಿ ಸುರೇಶ್ ಹಸು
( 30.6) ನಾಲ್ಕನೇ ಹಾಗೂ ತೊಂಡಹಳ್ಳಿ ಗ್ರಾಮದ ಸುಬ್ರಮಣಿ( 30.4) ಲೀಟರ್ ಹಾಲು ಹಿಂಡಿದ ಹಸುವಿಗೆ ಐದನೇ ಹಾಗೂ ಉಳಿದ ಎಲ್ಲಾ ಹಸುಗಳಿಗೆ ಒಂದೊಂದು ಹಾಲಿನ ಕ್ಯಾನುಗಳನ್ನು ನೀಡುವ ಮೂಲಕ ಸಮಾಧಾನಕರ ಬಹುಮಾನಗಳನ್ನು ವಿತರಿಸಿದರು.

ಹಸುಗಳಿಗೆ ಬಹುಮಾನ: ಸಂಜೆ ನೇತಾಜಿ ಕ್ರೀಡಾಂಗಣದಲ್ಲಿ ನಗರದ ಎಲ್ಲಾ ಅಲಂಕೃತ ಹಸುಗಳ ಹಾಗೂ ಎತ್ತುಗಳ ಪ್ರದರ್ಶನ ನಡೆದು, ಪ್ರದರ್ಶನದಲ್ಲಿ ಅತ್ಯುತ್ತಮ ಅಲಂಕಾರ ಹಾಗೂ ಆಕರ್ಷಕ ಎತ್ತುಗಳು ಹಾಗೂ ಹಸುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಈ ಹಿಂದೆ ಹಲವಾರು ಬಾರಿ ನಗರದಲ್ಲಿ ಸಂಕ್ರಾಂತಿ ಸಂಧರ್ಭದಲ್ಲಿ ಗಲಾಟೆಗಳು ನಡೆದಿರುವ ಕಾರಣದಿಂದ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಇಡೀ ತಿಂಗಳು ಪ್ರತ್ಯೇಕವಾಗಿ ಹಬ್ಬ ಆಚರರಣೆ ನಡೆಯಲಿದೆ. ಹೀಗೆ ಬಹುತೇಕ ಗ್ರಾಮೀಣ ಭಾಗದಲ್ಲಿ ಸೋಮವಾರ ಹಬ್ಬ ನಡೆಯಲಿಲ್ಲ. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್, ಪಶುಸಂಗೋಪನೆ ಇಲಾಖೆ ನಿರ್ದೇಶಕಿ ಅನುರಾಧ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಶಂಕರ್ ಕೇಸರಿ ಸೇರಿದಂತೆ ಅನೇಕ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT