ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಹೆಸರಿಗೆ ಆಸ್ತಿ ಖಾತೆ ಮಾಡಿಸಿ

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಸರ್ಕಾರಿ ವಕೀಲ ನಾರಾಯಣಸ್ವಾಮಿ ಸೂಚನೆ
Last Updated 6 ಸೆಪ್ಟೆಂಬರ್ 2021, 14:07 IST
ಅಕ್ಷರ ಗಾತ್ರ

ಕೋಲಾರ: ‘ಗ್ರಾಮದ ಶಾರದಾ ದೇವಾಲಯಗಳಾದ ಸರ್ಕಾರಿ ಶಾಲೆಗಳ ಆಸ್ತಿಗೆ ಸಂಬಂಧಿಸಿದ ವಿವಾದವಿದ್ದರೆ ಪರಿಹರಿಸಿಕೊಳ್ಳಿ ಮತ್ತು ಶಾಲೆ ಹೆಸರಿಗೆ ಖಾತೆ ಮಾಡಿಸಿ’ ಎಂದು ಜಿಲ್ಲಾ ಸರ್ಕಾರಿ ವಕೀಲ ಎಂ.ಪಿ.ನಾರಾಯಣಸ್ವಾಮಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆಯ ಡಿಡಿಪಿಐ, ಬಿಇಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ಇಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಶಾಲೆ, ಅಂಗನವಾಡಿ ಆಸ್ತಿ ಸಂಬಂಧಿತ ವಿವಾದಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿ’ ಎಂದು ತಿಳಿಸಿದರು.

‘ಹತ್ತಾರು ವರ್ಷಗಳ ಹಿಂದೆ ಶಾಲೆಗೆ ಯಾರೋ ದಾನಪತ್ರ ಮಾಡಿಕೊಟ್ಟಿರುತ್ತಾರೆ. ಆದರೆ, ನೀವು ಶಾಲೆ ಹೆಸರಿಗೆ ಆ ಜಾಗವನ್ನು ನೋಂದಣಿ ಮಾಡಿಸಿಕೊಳ್ಳದೆ ಅಲ್ಲೇ ಕಟ್ಟಡ ಕಟ್ಟಿರುತ್ತೀರಿ. ದಾನ ನೀಡಿದವರ ಮಕ್ಕಳು, ಮೊಮ್ಮಕ್ಕಳು ಈಗ ಆ ಜಾಗ ತಮ್ಮದೆಂದು ಕ್ಯಾತೆ ತೆಗೆದು ನ್ಯಾಯಾಲಯದ ಮೆಟ್ಟಿಲೇರಿರುವ ಪ್ರಕರಣಗಳು ಕಣ್ಣ ಮುಂದಿವೆ’ ಎಂದು ವಿವರಿಸಿದರು.

‘ಹಲವೆಡೆ ಜಾಗ ನೋಂದಾಯಿಸಿಕೊಳ್ಳದೆ ಶಾಲಾ ಕಟ್ಟಡ ಕಟ್ಟಲಾಗಿದೆ. ಈಗ ಆ ಜಾಗ ತೆರವಿಗೆ ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದನ್ನು ತಪ್ಪಿಸಲು ಎಲ್ಲಾ ಸರ್ಕಾರಿ ಶಾಲೆಗಳು ತಮ್ಮ ಆಸ್ತಿಯನ್ನು ನೋಂದಾಯಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳನ್ನು ಭೇಟಿಯಾಗಿ, ಸರ್ವೆ ನಂಬರ್‌ ಆಗಿದ್ದರೆ ತಹಶೀಲ್ದಾರ್‌ಗಳನ್ನು ಭೇಟಿಯಾಗಿ ಆಸ್ತಿಯ ದಾಖಲೆಪತ್ರ ಪಡೆಯಿರಿ’ ಎಂದು ಸಹಾಯಕ ಅಭಿಯೋಜಕ ಎಸ್.ಎಸ್.ಹೂಗಾರ್ ಸಲಹೆ ನೀಡಿದರು.

15 ಪ್ರಕರಣ: ‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಶಾಲಾ ಜಾಗಕ್ಕೆ ಸಂಬಂಧಿಸಿದಂತೆ 15 ಪ್ರಕರಣ ನ್ಯಾಯಾಲಯದಲ್ಲವೆ ಅಂಗನವಾಡಿಗಳಿಗೆ ಶಾಲಾ ಕೊಠಡಿಗಳನ್ನು ಒದಗಿಸಲಾಗಿದ್ದು, ದುರಸ್ತಿ ಇದ್ದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರೇ ಸರಿಪಡಿಸಿಕೊಳ್ಳಬೇಕು’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಮಾಹಿತಿ ನೀಡಿದರು.

‘ಬಂಗಾರಪೇಟೆ ತಾಲ್ಲೂಕಿನಲ್ಲಿ 25, ಕೋಲಾರದಲ್ಲಿ 58, ಕೆಜಿಎಫ್‌ನಲ್ಲಿ 20, ಮುಳಬಾಗಿಲು ತಾಲ್ಲೂಕಿನಲ್ಲಿ 74, ಮಾಲೂರಿನಲ್ಲಿ 50, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 90 ಅಂಗನವಾಡಿ ಕೇಂದ್ರಗಳು ಸರ್ಕಾರಿ ಶಾಲಾ ಕೊಠಡಿಯಲ್ಲಿ ನಡೆಯುತ್ತಿವೆ. ಇನ್ನು ಹಲವೆಡೆ ಶಾಲಾ ಕೊಠಡಿಗಳ ಅಗತ್ಯವಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ ವಿವರಿಸಿದರು.

‘ಭೌತಿಕವಾಗಿ ಶಾಲಾ ಕಟ್ಟಡವಿದ್ದರೂ ಹಲವೆಡೆ ಜಾಗ ಯಾರದೋ ಹೆಸರಿನಲ್ಲಿದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಲಿದ್ದು, ಆಸ್ತಿ ನೋಂದಾಯಿಸಿ ದಾಖಲೆಪತ್ರ ಪಡೆಯಿರಿ’ ಎಂದು ಕೋಲಾರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಬಾಬು ಹೇಳಿದರು.

ಬಿಇಒಗಳಾದ ಕೆಂಪಯ್ಯ, ಚಂದ್ರಶೇಖರ್, ಕೃಷ್ಣಮೂರ್ತಿ, ಗಿರಿಜೇಶ್ವರಿದೇವಿ, ರಾಮಕೃಷ್ಣಪ್ಪ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಬಂಗಾರಪೇಟೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ವೆಂಕಟೇಶಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT