ಮಂಗಳವಾರ, ಜನವರಿ 21, 2020
19 °C

ಪೋಲಿಯೊ ಅಭಿಯಾನ ಯಶಸ್ವಿಗೊಳಿಸಿ: ಆರ್‌ಸಿಎಚ್‌ ಚಂದನ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಷ್ಟ್ರೀಯ ಕಾರ್ಯಕ್ರಮಗಳಾದ ಪೋಲಿಯೊ ಲಸಿಕೆ ಅಭಿಯಾನ ಹಾಗೂ ಜಂತು ಹುಳು ನಿವಾರಣಾ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ವಿವಿಧ ಇಲಾಖೆ ಅಧಿಕಾರಿಗಾಳಿಗೆ ಸೂಚಿಸಿದರು.

ಇಲ್ಲಿ ಶುಕ್ರವಾರ ನಡೆದ ಪೋಲಿಯೊ ಲಸಿಕೆ ಅಭಿಯಾನ ಹಾಗೂ ಜಂತು ಹುಳು ನಿವಾರಣಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜ.19ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯೊ ಲಸಿಕೆ ಹಾಕಲಾಗುತ್ತದೆ’ ಎಂದು ಹೇಳಿದರು.

‘ಆರೋಗ್ಯ ಇಲಾಖೆ ಒಳಗೊಂಡಂತೆ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದಿಂದ ಪೋಲಿಯೊ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕು. ಲಸಿಕೆ ತಪ್ಪಿಸಿಕೊಂಡ ಮಕ್ಕಳಿಗೆ ನಂತರದ 2 ದಿನ ಇಲಾಖೆ ಶುಶ್ರೂಷಕಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೆರವಿನಿಂದ ಲಸಿಕೆ ಹಾಕಬೇಕು. ಶೇ 100ರಷ್ಟು ಲಸಿಕೆ ಗುರಿ ಸಾಧಿಸಬೇಕು’ ಎಂದರು.

‘ಪ್ರತಿ ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಜಂತು ಹುಳು ನಿವಾರಕ ಮಾತ್ರೆ ನೀಡಬೇಕು. ಜಂತು ಹುಳು ಕಾಯಿಲೆಯಿಂದ ಮಕ್ಕಳ ದೈಹಿಕ ಬೆಳವಣಿಗೆ ಮೇಲಾಗುವ ಪರಿಣಾಮದ ಬಗ್ಗೆ ಪೋಷಕರಿಗೆ ಜಾಗೃತಿ ಮೂಡಿಸಬೇಕು. ಶಾಲೆಗಳಿಂದ ಪ್ರತಿ ಆಯಾ ಗ್ರಾಮಗಳಲ್ಲಿ ಜಾಥಾ ನಡೆಸಿ ಅಭಿಯಾನ ಕುರಿತು ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಶಾಲಾ ಸೂಚನಾ ಫಲಕದಲ್ಲಿ ಪೋಲಿಯೊ ಮತ್ತು ಜಂತು ಹುಳು ನಿರ್ಮೂಲನೆ ಮಹತ್ವದ ಕುರಿತು ಭಿತ್ತಿಪತ್ರ ಪ್ರದರ್ಶಿಸಬೇಕು. ಫೆ.10ರಂದು 1ರಿಂದ 10 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಜಂತು ಹುಳು ನಿವಾರಣೆ ಮಾತ್ರೆ ನೀಡಬೇಕು. ನಂತರ ಫೆ.17ರಂದು ಶಾಲೆಗಳಿಗೆ ತೆರಳಿ ಮೊದಲ ಹಂತದಲ್ಲಿ ಕೈಬಿಟ್ಟು ಹೋದ ಮಕ್ಕಳು ಮತ್ತು ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಮಾತ್ರೆ ಕೊಡಬೇಕು’ ಎಂದರು.

ಜಾಗೃತಿ ಮೂಡಿಸಿ

‘ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆಯ ಅರಿವು ಮೂಡಿಸಬೇಕು. ಕೈತೊಳೆಯುವುದರ ಮಹತ್ವ, ರೋಗ ನಿಯಂತ್ರಣದ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಬೇಕು’ ಎಂದು ಮನವಿ ಮಾಡಿದರು.

‘ಮನೆ ಹಾಗೂ ಶಾಲೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು. ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಮಲೇರಿಯಾ ನಿರ್ಮೂಲನಾಧಿಕಾರಿ ಡಾ.ಕಮಲಮ್ಮ ಸಲಹೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ರಮ್ಯ ದೀಪಿಕಾ, ಜಿಲ್ಲಾ ಕ್ಷಯ ರೋಗ ನಿಯಂತ್ರನಾಧಿಕಾರಿ ಡಾ.ಜಗದೀಶ್, ಇಸಿಒ ಆರ್.ಶ್ರೀನಿವಾಸನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು