ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕತೆ: ಸಮತೋಲಿತ ಆಹಾರ ಸೇವಿಸಿ

ಪೋಷಣ ಅಭಿಯಾನದಲ್ಲಿ ಶಾಸಕ ಶ್ರೀನಿವಾಸಗೌಡ ಸಲಹೆ
Last Updated 17 ಸೆಪ್ಟೆಂಬರ್ 2020, 15:30 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಆಹಾರ ಪದ್ಧತಿಯಲ್ಲಿ ಸಮತೋಲನ ಆಹಾರವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಏಕದಳ ಧಾನ್ಯಗಳು, ಬೆಳೆ ಕಾಳುಗಳು ಹಾಗೂ ಹಣ್ಣು ತರಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಲಾಗುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಸಹಯೋಗದಲ್ಲಿ ಇಲ್ಲಿ ಗುರುವಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ರೈತ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ರೈತರು ನೀರನ್ನು ಮಿತವಾಗಿ ಬಳಸಬೇಕು. ರೈತರು ಒಂದಿಂಚು ಭೂಮಿ, ಒಂದು ಹನಿ ನೀರಿನಿಂದ ಒಂದು ಡಾಲರ್‌ ಗಳಿಸುವಂತೆ ಆಗಬೇಕು. ಕೃಷಿಗೆ ರಾಸಾಯನಿಕ ಗೊಬ್ಬರಗಳು ಹಾಗೂ ಕೀಟನಾಶಕಗಳ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

‘ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಟಿಕತೆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಪೌಷ್ಟಿಕತೆಯಿಂದ ಮಕ್ಕಳು ಅಂಗವಿಕಲರಾಗುತ್ತಿದ್ದಾರೆ. ಹೆರಿಗೆ ವೇಳೆ ಗರ್ಭಿಣಿಯರ ಸಾವು ಸಂಭವಿಸುತ್ತಿವೆ. ಅಪೌಷ್ಟಿಕತೆ ಸಮಸ್ಯೆ ನಿವಾರಣೆಗೆ ಸಮತೋಲಿತ ಆಹಾರ ಸೇವಿಸಬೇಕು’ ಎಂದು ಸಲಹೆ ನೀಡಿದರು.

ಜಾಗೃತಿ ಮೂಡಿಸಿ: ‘ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕ ಆಹಾರ ಒದಗಿಸುವುದು ಹಾಗೂ ಆರೋಗ್ಯವಂತರಾಗಿ ಇರಿಸುವುದು ಈ ಅಭಿಯಾನದ ಉದ್ದೇಶ. ಅಂಗನವಾಡಿ ಕಾರ್ಯಕರ್ತೆಯರು ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥಗೌಡ ತಿಳಿಸಿದರು.

‘ದೇಶದಲ್ಲಿ ಆಹಾರ ಧಾನ್ಯಗಳು, ಹಣ್ಣು ಮತ್ತು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿವೆ. ಆದರೂ ಜನರಲ್ಲಿ ಅಪೌಷ್ಟಿಕತೆ ಕಾಣಿಸಿಕೊಳ್ಳುತ್ತಿದೆ. ಅಪೌಷ್ಟಿಕತೆ ನಿವಾರಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ನಿರ್ಣಾಯಕ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಅಭಿಪ್ರಾಯಪಟ್ಟರು.

ಸಮತೋಲಿತ ಆಹಾರ: ‘ಊಟದಲ್ಲಿ ತರಕಾರಿ, ಹಣ್ಣು, ದ್ವಿದಳ ಧಾನ್ಯ, ಸಿರಿಧಾನ್ಯಗಳಂತಹ ಸಮತೋಲಿತ ಆಹಾರ ಬಳಸಬೇಕು. ವಿವಿಧ ಬಗೆಯ ಆಹಾರ ಧಾನ್ಯಗಳನ್ನು ಸೇವಿಸಿದರೆ ವಿಟಮಿನ್, ಮಿನಿರಲ್ ಸಿಗುತ್ತವೆ. ಮೊಳಕೆ ಕಾಳುಗಳನ್ನು ಹಾಗೂ ಬೇಯಿಸಿದ ತರಕಾರಿಗಳನ್ನು ಹೆಚ್ಚಾಗಿ ಬಳಸಿದರೆ ಪೌಷ್ಟಿಕಾಂಶ ದೊರಕುತ್ತದೆ’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರು ಟಿ.ಬಿ.ಬಸವರಾಜು ವಿವರಿಸಿದರು.

ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್‌, ಇಫ್ಕೋ ಟೋಕಿಯೊ ಸಂಸ್ಥೆ ಉಪ ವ್ಯವಸ್ಥಾಪಕ ಸತೀಶ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಿ.ಎಸ್.ಅಂಬಿಕಾ, ಕೆ.ಆರ್‌.ಶಶಿಧರ್‌, ಜಿ.ಎಸ್‌.ಚಿಕ್ಕಣ್ಣ, ಜ್ಯೋತಿ, ತೋಟಗಾರಿಕೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT