ಶನಿವಾರ, ನವೆಂಬರ್ 26, 2022
19 °C
ಮಳೆಗೆ ಶಿಥಿಲಗೊಂಡ ಮಾಲೂರು ಶಾಲೆ l ಅಧಿಕಾರಿಗಳಿಗೆ ಪೋಷಕರ ತರಾಟೆ

ನಮ್ಮ ಜೀವಕ್ಕೆ ಬೆಲೆ ಇಲ್ಲವೆ: ಚಿಣ್ಣರ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಲೂರು: ‘ನಮ್ಮ ಜೀವಕ್ಕೆ ಬೆಲೆ ಇಲ್ಲವೇ.. ಸರ್ಕಾರಿ ಶಾಲೆ ಮಕ್ಕಳೆಂದರೆ ನಿಮಗೆ ನಿರ್ಲಕ್ಷ್ಯ ಏಕೆ ?...’

ಹೀಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಪಟ್ಟಣದ 9ನೇ ವಾರ್ಡ್‌ನ ಧರ್ಮರಾಯ ದೇವಸ್ಥಾನ ಬಳಿ ಇರುವ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲಾ ಮಕ್ಕಳು ಮತ್ತು ಅವರ ಪೋಷಕರು.

ಮೂರು ದಿನದಿಂದ ಸತತವಾಗಿ ಸುರಿಯುತ್ತಿರುವ ಜಡಿ ಮಳೆಯಿಂದ ಪಟ್ಟಣದ 9ನೇ ವಾರ್ಡ್‌ನ ಧರ್ಮರಾಯ ದೇವಸ್ಥಾನ ಬಳಿ ಇರುವ ಸರ್ಕಾರಿ ಕಿರಿಯ ಪ್ರಾಥಾಮಿಕ ಶಾಲೆ ಕಟ್ಟಡ ಶಿಥಿಲಗೊಂಡಿದ್ದು, ಶಿಕ್ಷಕರು ಮತ್ತು ಮಕ್ಕಳು ಜೀವಭಯದಲ್ಲಿ ತರಗತಿಯಲ್ಲಿ ಕೂರುವಂತಾಗಿದೆ.

ಮಳೆಯಿಂದ ಕಟ್ಟಡ ಸಂಪೂರ್ಣ ಶಿಥಿಲಗೊಂಡು ನೀರು ಸುರಿಯುತ್ತಿರುವುದರಿಂದ ಗುರುವಾರ ಶಿಕ್ಷಕರೊಂದಿಗೆ ಮಕ್ಕಳು ಹೊರ ಬಂದು ನಿಲ್ಲುವಂತಾಯಿತು.

ಸ್ಥಳಕ್ಕೆ ಆಗಮಿಸಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪೋಷಕರು ತರಾಟೆಗೆ ತೆಗದುಕೊಂಡರು. ತರಗತಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಿ, ಹೊಸ ಕಟ್ಟಡ ಕಟ್ಟಿಸಿಕೊಡಿ ಎಂದು ಆಗ್ರಹಿಸಿದರು.

ಶಾಲೆಯಲ್ಲಿ 1–5ನೇ ತರಗತಿ ವರೆಗೆ 55 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆಯ ನಡುವೆ ಶಿಥಿಲಗೊಂಡಿರುವ ಶಾಲೆಯಲ್ಲಿ ಪಾಠ ಕೇಳಬೇಕಿದೆ. ಒಂದೇ ಕೊಠಡಿಯಲ್ಲಿ ಎರಡು ತರಗತಿ ಮಕ್ಕಳನ್ನು ಕೂರಿಸಿ ಪಾಠ ಹೇಳಬೇಕಿದೆ ಎನ್ನುತ್ತಾರೆ ಇಲ್ಲಿ ಶಿಕ್ಷಕರು.

ಶಾಲೆಯ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಗೊಂಡಿದೆ. ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಶಾಲೆಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ತುಂಬಿದರೇ ಕೊಠಡಿ ಒಳಗೆ ನುಗ್ಗುತ್ತದೆ. ಇದರಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ ಎನ್ನುವುದು ಇಲ್ಲಿನ ಶಿಕ್ಷಕರ
ಅಳಲು.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ‍ಸರಿಯಾಗಿ ಪಾಠ ನಡೆಯುತ್ತಿಲ್ಲ. ಕಟ್ಟಡ ಯಾವಾಗ ಕುಸಿಯುತ್ತದೆ ಎಂದು ಮಕ್ಕಳು ಭಯ ಪಡುತ್ತಿದ್ದಾರೆ. ಕಟ್ಟಡ ದುರಸ್ತಿಗೊಳಿಸಿ ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದೇವೆ. ಯಾವ ಪ್ರಯೋಜನವು ಆಗಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.

ರಜೆ ಘೋಷಣೆ

ಇಲ್ಲಿನ ಶಾಲಾ ಕಟ್ಟಡ ಖಾಸಗಿ ಜಮೀನಲ್ಲಿದೆ. ನೂತನಕಟ್ಟಡ ನಿರ್ಮಾಣ ಮಾಡಲು ಜಮೀನಿನ ಮಾಲೀಕರು ಒಪ್ಪದ ಕಾರಣ ಬಾಡಿಗೆ ಕಟ್ಟಡಕ್ಕೆ ವರ್ಗಾವಣೆ ಮಾಡಲಾಗುವುದು. ಮೇಲಾಧಿಕಾರಿಗಳ ಬಳಿ ಚರ್ಚೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧಿಕಾರಿ(ಸಿಆರ್‌ಪಿ) ನಂಜಂಡೇಗೌಡ ಹೇಳಿ ಪೋಷಕರನ್ನು ಸಮಾದಾನಪಡಿಸಿದರು. ಮಳೆ ನಿಲ್ಲುವ ವರೆಗೂ ಶಾಲೆಗೆ ರಜೆ ಘೋಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.