ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೃತ ಮನಸ್ಸು ದೇವರೇ ಬದಲಿಸಲಿ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾರ್ಮಿಕ ನುಡಿ
Last Updated 7 ಫೆಬ್ರುವರಿ 2020, 14:20 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ವಿಕೃತ ಮನಸ್ಸು ಹೊಂದಿರುವವರನ್ನು ದೇವರೇ ಬದಲಿಸಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು.

ತಾಲ್ಲೂಕಿನ ಕಲ್ಲಂಡೂರು ಗ್ರಾಮದಲ್ಲಿ ಶುಕ್ರವಾರ ನಡೆದ ಚಂದ್ರಮೌಳೇಶ್ವರ ದೇವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ದೇಶದಲ್ಲಿ ಸಮಾಜವನ್ನು ಹೊಡೆದು ಆಳುವವರ ಸಂಖ್ಯೆ ಹೆಚ್ಚುತ್ತಿದೆ. ಸಮಾಜವನ್ನು ಛಿದ್ರಗೊಳಿಸಿ ರಾಜಕೀಯ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ’ ಎಂದು ಪರೋಕ್ಷವಾಗಿ ಬಿಜೆಪಿ ಮುಖಂಡರ ವಿರುದ್ಧ ವಗ್ದಾಳಿ ನಡೆಸಿದರು.

‘ದೇಶದಲ್ಲಿ ರೈತರು, ಯುವಕರು ಸಂಕಷ್ಟದಲ್ಲಿದ್ದಾರೆ. ದೇಶ ಯಾವ ಪರಿಸ್ಥಿತಿಯತ್ತ ಸಾಗುತ್ತಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಆಳುತ್ತಿರುವವರು ದೇಶವನ್ನು ವಿನಾಶದ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ದೇಶದಲ್ಲಿ ಮುಂದೆ ಇನ್ನೇನು ಕಾಣಬೇಕು ನೋಡೋಣ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆ.ಸಿ ವ್ಯಾಲಿ ಯೋಜನೆಯ 2ನೇ ಹಂತದಿಂದ ಜಿಲ್ಲೆಯ ಮತ್ತಷ್ಟು ಕೆರೆಗಳಿಗೆ ನೀರು ಹರಿಸಲು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಣ ಮಂಜೂರು ಮಾಡಲಾಗಿತ್ತು. ನಂತರ ಅಧಿಕಾರಕ್ಕೆ ಬಂದವರು ವಿನಾಕಾರಣ ಅನುದಾನ ತಡೆ ಹಿಡಿದರು. ಆ ಕೆಲಸ ಪೂರ್ಣಗೊಳಿಸಲು ನಾವೇ ಅಧಿಕಾರಕ್ಕೆ ಬರಬೇಕು’ ಎಂದರು.

‘ಗ್ರಾನೈಟ್, ಮಾರ್ಬಲ್‌ಗೆ ಬೆಲೆ ಕಟ್ಟಲು ಆಗುತ್ತದೆಯೇ ಹೊರತು ಪುರಾತನ ಪದ್ಧತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಚಂದ್ರಮೌಳೇಶ್ವರ ದೇವಾಲಯವನ್ನು ಪುರಾತನ ಶೈಲಿಯಲ್ಲೇ ನಿರ್ಮಾಣ ಮಾಡಲಾಗಿದೆ. ಆಧುನಿಕತೆಗೆ ಒತ್ತು ನೀಡುವ ಪ್ರಯತ್ನದಲ್ಲಿ ಪುರಾತನ ಪದ್ಧತಿ ಮರೆಯಬಾರದು’ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದರು.

‘ಜಿಲ್ಲೆಗೂ ಈ ಹಿಂದೆ ಕೋಲಾರವನ್ನು ಆಳಿದ ವಂಶಸ್ಥರಿಗೂ ಅವಿನಾಭಾವ ಸಂಬಂಧವಿದೆ ಎಂಬುದಕ್ಕೆ ದೇವಾಲಯಗಳೇ ಸಾಕ್ಷಿ. ಗಂಗರು, ಚೋಳರ ಶೈಲಿಯ ದೇವಾಲಯಗಳು ಜಿಲ್ಲೆಯಲ್ಲಿವೆ. ಈ ದೇವಾಲಯಗಳು ನಾಶವಾದರೆ ಪುನಃ ನಿರ್ಮಿಸಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕೃಷಿಯತ್ತ ಮುಖ: ‘ರೈತರು ಇತ್ತೀಚಿನ ದಿನಗಳಲ್ಲಿ ಆಶಾಭಾವನೆಯಿಂದ ನೀಲಗಿರಿ ಬೆಳೆ ತೆಗೆದು ಕೃಷಿಯತ್ತ ಮುಖ ಮಾಡಿದ್ದಾರೆ. ಕೆ.ಸಿ ವ್ಯಾಲಿ ಯೋಜನೆಯ 2ನೇ ಹಂತದಲ್ಲಿ ಹೆಚ್ಚು ಕೆರೆಗಳಿಗೆ ನೀರು ಹರಿಸಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ₹ 450 ಕೋಟಿ ಮಂಜೂರು ಮಾಡಲಾಗಿತ್ತು. ಅಲ್ಲದೇ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾರ್ಯಾದೇಶ ಪತ್ರ ನೀಡಲಾಗಿದೆ. ಮುಂದಿನ ವರ್ಷದೊಳಗೆ ಜಿಲ್ಲೆಯ ಎಲ್ಲಾ ಕೆರೆಗಳು ತುಂಬುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಗ್ರಾಮಗಳಲ್ಲಿ ಶೋಕಿಗೆ, ಪೈಪೋಟಿಗೆ ದೇವಾಲಯ ನಿರ್ಮಾಣ ಮಾಡಬಾರದು. ಭಕ್ತಿಯಿಂದ ದೇವಾಲಯ ನಿರ್ಮಿಸಿ ನಿರ್ವಹಣೆ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಆರ್.ಚೌಡರೆಡ್ಡಿ, ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಯಲವಳ್ಳಿ ರಮೇಶ್, ಮಾಜಿ ನಿರ್ದೇಶಕ ನಂಜುಂಡೇಗೌಡ, ಜಿ.ಪಂ ಸದಸ್ಯ ನಂಜುಂಡಪ್ಪ, ಮಾಜಿ ಸದಸ್ಯರಾದ ಮಂಗಮ್ಮ ಮುನಿಸ್ವಾಮಿ, ಚೌಡೇಶ್ವರಿ, ಮುಖಂಡರಾದ ಸಮೃದ್ಧಿ ಮಂಜುನಾಥ್, ಮಲ್ಲೇಶ್, ವಕೀಲ ಲೋಕೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT