ಬುಧವಾರ, ಅಕ್ಟೋಬರ್ 21, 2020
21 °C
ಆರಂಭವಾಗದ ಕೆಜಿಎಫ್‌ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ

ಅಧಿಕಾರಿಗಳ ವಿರುದ್ಧ ಶಾಸಕಿ ರೂಪಕಲಾ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹೊಸ ತಾಲ್ಲೂಕು ಕೆಜಿಎಫ್ ರಚನೆಯಾಗಿ 2 ವರ್ಷ ಉರುಳಿವೆ. ಮಿನಿ ವಿಧಾನಸೌಧ ಕಟ್ಟಡಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ ಈವರೆಗೂ ಕಾಮಗಾರಿ ಆರಂಭಿಸಿಲ್ಲ’ ಎಂದು ಶಾಸಕಿ ಎಂ.ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ಇಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿ, ‘ಮಿನಿ ವಿಧಾನಸೌಧ ಕಾಮಗಾರಿ ಆರಂಭಿಸಲು ಸಮಸ್ಯೆ ಏನು? ಜನಪ್ರತಿನಿಧಿಯಾಗಿ ಹೊಸ ತಾಲ್ಲೂಕಿಗೆ ಏನೂ ಕೆಲಸವಾಗಿಲ್ಲ ಎಂಬ ನೋವು ಕಾಡುತ್ತಿದೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ ಮಿನಿ ವಿಧಾನಸೌಧಕ್ಕೆ ಮಂಜೂರಾತಿ ಪಡೆಯಲಾಗಿತ್ತು. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ತಡೆಹಿಡಿದಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಮನವಿಗೆ ಸ್ಪಂದಿಸಿ ಆರ್ಥಿಕ ಸಂಕಷ್ಟದ ನಡುವೆಯೂ ಮಿನಿ ವಿಧಾನಸೌಧಕ್ಕೆ ₹ 10 ಕೋಟಿ ಬಿಡುಗಡೆ ಮಾಡಿ ಹೃದಯವಂತಿಕೆ ಮೆರೆದಿದ್ದಾರೆ’ ಎಂದು ಧನ್ಯವಾದ ಹೇಳಿದರು.

‘ದೇವರು ಕೊಟ್ಟರೂ ಪೂಜಾರಿ ಕೊಡಲ್ಲಿಲ್ಲ ಎಂಬಂತೆ ಅಧಿಕಾರಿಗಳು ಮಿನಿ ವಿಧಾನಸೌಧದ ಕಾಮಗಾರಿ ಆರಂಭಿಸದೆ ಕಾಲಹರಣ ಮಾಡುತ್ತಿದ್ದಾರೆ. ಮಿನಿ ವಿಧಾನಸೌಧಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ, ಅನುದಾನವೂ ಸಿದ್ಧವಿದೆ. ಆದರೂ ಟೆಂಡರ್ ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ಕೆಲಸಗಳು ಆರಂಭವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನೋವು ಕಾಡುತ್ತಿದೆ: ‘ಹೊಸ ತಾಲ್ಲೂಕಿಗೆ ನಿರೀಕ್ಷಿತ ಮಟ್ಟದಲ್ಲಿ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ ಎಂಬ ನೋವು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಅನುದಾನದಲ್ಲೂ ಅಧಿಕಾರಿಗಳು ಕೆಲಸ ಆರಂಭಿಸದೆ ತೊಂದರೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಜನ ನನಗೆ ಶಾಪ ಹಾಕುತ್ತಿದ್ದಾರೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಶೀಘ್ರ ಕಾಮಗಾರಿ ಮುಗಿಸಿ ಜನ ನೆಮ್ಮದಿಯಿಂದಿರಲು ಸಹಕರಿಸಿ’ ಎಂದು ಆಗ್ರಹಿಸಿದರು.

ಪ್ರವಾಸಿ ಮಂದಿರ: ‘ಕೆಜಿಎಫ್‍ ಹೊಸ ತಾಲ್ಲೂಕಾಗಿ ಘೋಷಣೆಯಾದ ನಂತರ ತಾಲ್ಲೂಕಿಗೆ ಅಗತ್ಯವಾದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಾನು ಹಗಲಿರುಳು ಶ್ರಮಿಸುತ್ತಿದ್ದೇನೆ. ಸರ್ಕಾರದ ಮೇಲೆ ಒತ್ತಡ ಸಹ ಹಾಕುತ್ತಿದ್ದೇನೆ. ಕೆಜಿಎಫ್‌ನಲ್ಲಿ ಪ್ರವಾಸಿ ಮಂದಿರ ನಿರ್ಮಾಣ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ತಂದು ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕು’ ಎಂದರು.

‘ಲೋಕೋಪಯೋಗಿ ಇಲಾಖೆಯು ಕೆಜಿಎಫ್‌ ತಾಲ್ಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಬೇಕು’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಪಿಡಬ್ಲ್ಯೂಡಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌, ‘ಸದ್ಯದಲ್ಲೇ ಮಿನಿ ವಿಧಾನಸೌಧ ಕಾಮಗಾರಿ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.