ಬುಧವಾರ, ಮಾರ್ಚ್ 29, 2023
28 °C

ಕನ್ನಡ ಕಲಿಕೆ ಕಡ್ಡಾಯವಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನೆಲ, ಜಲ, ಭಾಷೆ ಎಲ್ಲರಿಗೂ ಮುಖ್ಯ. ಮಾತೃ ಭಾಷೆ ಹೆತ್ತ ತಾಯಿಗೆ ಸಮಾನ. ನಮಗೆ ಉಸಿರಿನಷ್ಟೇ ಮಾತೃ ಭಾಷೆಯೂ ಮುಖ್ಯ. ಯಾವುದೇ ಕಾರಣಕ್ಕೂ ಅದನ್ನು ಬಿಟ್ಟು ಕೊಡಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ 66ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ‘ರಾಜ್ಯದ ಗಡಿಯಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಅನ್ಯ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಜಿಲ್ಲೆಯು ತ್ರಿಭಾಷಾ ಸಂಗಮವಾಗಿದೆ. ಆದರೂ ಎಲ್ಲಾ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದ ಇತರೆ ಭಾಷೆಗಳಂತೆ ಕನ್ನಡ ಭಾಷೆಯು ಭವ್ಯ ಇತಿಹಾಸ ಹೊಂದಿದೆ. ಜನರ ಆಡು ಭಾಷೆ ಯಾವುದೇ ಆಗಿರಲಿ, ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಕನ್ನಡವೇ ಉಸಿರು, ಕನ್ನಡವೇ ಹಸಿರು. ಕನ್ನಡ ಭಾಷೆ ಬಗ್ಗೆ ಕೀಳರಿಮೆ ಬೇಡ. ನಮ್ಮ ಜೀವನ ನಡೆಯುತ್ತಿರುವುದು ಮತ್ತು ಅಂತ್ಯಗೊಳ್ಳುವುದು ಕನ್ನಡ ನಾಡಿನಲ್ಲೇ. ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಹೊರಗೆ ಮಾತ್ರ ಕನ್ನಡದಲ್ಲೇ ವ್ಯವಹರಿಸಬೇಕು’ ಎಂದರು.

‘ಕನ್ನಡ ಅನ್ನ ನೀಡುವ ಭಾಷೆ. ಕನ್ನಡಿಗರು ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳಬೇಕು. ಶಾಂತಿ, ಸಹನೆ, ತಾಳ್ಮೆ, ಸಹೋದರತೆಯ ಜತೆಗೆ ಬದುಕಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಲ್ಲಿ ಕನ್ನಡ ವಿಷಯ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಪೋಷಕರು ತಿಳಿದುಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳಬಾರದು’ ಎಂದು ಸಲಹೆ ನೀಡಿದರು.

ಭಾಷಾ ಸಾಮರಸ್ಯವಿದೆ: ‘ಜಿಲ್ಲೆಯಲ್ಲಿ ಭಾಷಾ ಸಾಮರಸ್ಯವಿದೆ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಕೋಲಾರವನ್ನು ಆಂಧ್ರಪ್ರದೇಶ, ತಮಿಳುನಾಡಿಗೆ ಸೇರಿಸುವ ಪ್ರಸ್ತಾವ ಬಂದಾಗ ಇಲ್ಲಿನ ಜನ ಕರ್ನಾಟಕದಲ್ಲೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಜಿಲ್ಲೆಯ ಜನ ಕನ್ನಡವನ್ನು ಅಭಿಮಾನದಿಂದ ಉಳಿಸಿ ಬೆಳೆಸುತ್ತಿದ್ದಾರೆ’ ಎಂದು ಸಂಸದ ಎಸ್‌್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

‘2 ವರ್ಷದಿಂದ ಯೋಚನೆ ಮಾಡುತ್ತಿದ್ದೇನೆ. ಕೋಲಾರ ಜಿಲ್ಲೆ ಎಲ್ಲದರಲ್ಲೂ ಹೆಸರುವಾಸಿ. ಆದರೆ, ಜಿಲ್ಲಾ ಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವವನ್ನು ಗಾಂಧಿವನದಲ್ಲಿ ಆಚರಿಸಲಾಗುತ್ತಿದೆ. ಕಲಾವಿದರು, ಪ್ರತಿಭೆಗಳಿಗೆ ಅವಕಾಶ ನೀಡಿ ರಾಜ್ಯೋತ್ಸವ ಆಚರಿಸೋಣ. ಮುಂದಿನ ವರ್ಷ ಕಾರ್ಯಕ್ರಮವನ್ನು ಒಂದು ರಸ್ತೆಗೆ ಸೀಮಿತಗೊಳಿಸದೆ ಜಿಲ್ಲಾ ಕ್ರೀಡಾಂಗಣದಲ್ಲಿ ಹಬ್ಬದಂತೆ ವಿಜೃಂಭಣೆಯಿಂದ ಆಚರಿಸೋಣ’ ಎಂದು ತಿಳಿಸಿದರು.

‘ಜಿಲ್ಲೆಗೆ ಹೊಂದಿಕೊಂಡಂತೆ ಅಕ್ಕಪಕ್ಕ ಆಂಧ್ರಪ್ರದೇಶ, ತಮಿಳುನಾಡು ರಾಜ್ಯವಿದ್ದು, ಕನ್ನಡ ಭಾಷೆಯ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಡಬೇಕು. ದೈನಂದಿನ ವ್ಯವಹಾರದಲ್ಲಿ ಕನ್ನಡ ಮಾತನಾಡೋಣ, ಬಳಸಿ, ಬೆಳೆಸೋಣ. ಆಂಗ್ಲ ಭಾಷೆ ದೂರ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗೋಣ. ನವೆಂಬರ್ ತಿಂಗಳಿನಲ್ಲಿ ಕನ್ನಡ ಭಾಷೆಯನ್ನು ನೆನೆಯದೆ ವರ್ಷವಿಡೀ ಕಾರ್ಯಕ್ರಮ ಮಾಡೋಣ’ ಎಂದರು.

ಉದ್ಯೋಗಾವಕಾಶ: ‘ನಾನು ವಿದ್ಯಾರ್ಥಿ ಆಗಿದ್ದಾಗ ಜಿಲ್ಲೆಯಲ್ಲಿ ತಮಿಳು, ತೆಲುಗು ಭಾಷೆ ಬಳಕೆ ಹೆಚ್ಚಿತ್ತು. ಆದರೆ, ಈಗ ಆ ಪರಿಸ್ಥಿತಿಯಿಲ್ಲ. ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಸಾಕಷ್ಟು ಮಂದಿ ಉನ್ನತ ಹುದ್ದೆಯಲ್ಲಿದ್ದಾರೆ. ಕನ್ನಡದಲ್ಲಿ ಓದಿದವರಿಗೆ ಹೆಚ್ಚು ಉದ್ಯೋಗಾವಕಾಶ ಸಹ ಸಿಗುತ್ತಿವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಟ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳ 14 ಮಂದಿ ಸಾಧಕರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ ಶಬರೀಶ್, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್‌ಬಾಬು, ಜಿ.ಪಂ ಸಿಇಪ ಉಕೇಶ್‌ಕುಮಾರ್‌, ಉಪ ವಿಭಾಗಾಧಿಕಾರಿ ಆನಂದ್‌ಪ್ರಕಾಶ್ ಮೀನಾ, ತಹಶೀಲ್ದಾರ್ ವಿಲಿಯಂ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು