ಮುಳಬಾಗಿಲು: ತಾಲ್ಲೂಕಿನ ಪದ್ಮಘಟ್ಟ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಸಾರಿಗೆ ಇಲಾಖೆಯ ಮುಂಭಾಗದಲ್ಲಿರುವ ನೂರಾರು ವರ್ಷಗಳ ಐತಿಹಾಸಿಕ ಕಲ್ಯಾಣಿಯು ಗಿಡಗಂಟಿಗಳು ಮತ್ತು ಹೂವಿನಿಂದ ಮುಚ್ಚಿಹೋಗಿದೆ. ಕೆಲವು ದಿನಗಳಲ್ಲಿ ಇಲ್ಲೊಂದು ಕಲ್ಯಾಣಿ ಇತ್ತು ಎಂಬುದರ ಕುರುಹುಗಳು ಇಲ್ಲದಂತೆ ಆಗುವ ಸಾಧ್ಯತೆಯೇ ದಟ್ಟವಾಗಿದೆ.
ಇಲ್ಲಿ ಅಕ್ಕನೋರು ದೇವಾಲಯಕ್ಕೆ ಬರುವ ಭಕ್ತರಿಗೆ ಈ ಕಲ್ಯಾಣಿಯು ಸ್ನಾನ ಮತ್ತು ಕುಡಿಯಲು ನೀರು ಒದಗಿಸುತ್ತಿತ್ತು. ಹಿಂದಿನ ಕಾಲದಲ್ಲಿ ಬೆಂಗಳೂರಿನ ಕೆ.ಆರ್. ಪುರದಿಂದ ಆಂಧ್ರಪ್ರದೇಶದ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೋಗುವವರಿಗೆ ಈ ಕಲ್ಯಾಣಿಯು ಪ್ರಮುಖ ಜೀವಜಲವಾಗಿತ್ತು. ಆದರೆ, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಕಲ್ಯಾಣಿಯು ಅವನತಿಯತ್ತ ಸಾಗುತ್ತಿದೆ. ಅಲ್ಲದೆ, ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದ ಕಾರಣ ಹಳೆಯ ಮದ್ರಾಸ್ ರಸ್ತೆಯಲ್ಲಿ ನಾನಾ ಬಗೆಯ ಗಿಡಗಂಟಿಗಳು ಬೆಳೆದು ರಸ್ತೆಯೇ ಇಲ್ಲದಂತಾಗಿದೆ. ಕಲ್ಯಾಣಿಯ ಸುತ್ತಲೂ ನಾನಾ ಬಗೆಯ ಗಿಡಗಳು ಬೆಳೆದು, ಮಳೆಯ ನೀರಿನಲ್ಲಿ ಮಣ್ಣು ಕಲ್ಲುಗಳು ಮಿಶ್ರಣಗೊಂಡು ಕಲ್ಯಾಣಿಯನ್ನು ಆವರಿಸಿಕೊಂಡಿದೆ. ಇದರಿಂದಾಗಿ ಕಲ್ಯಾಣಿ ಸಂಪೂರ್ಣವಾಗಿ ಹೂಳಿನಿಂದ ಮುಚ್ಚಿ ಹೋಗಿದೆ.
‘ಕಲ್ಯಾಣಿಯು ಹಳೆಯ ಹಾಗೂ ಹೊಸ ಹೆದ್ದಾರಿಯ ಮಧ್ಯೆ ಇರುವ ಖಾಲಿ ಸ್ಥಳದಲ್ಲಿ ಉಳಿದುಕೊಂಡಿದೆ. ಇತ್ತೀಚೆಗೆ ನಂಗಲಿ, ಎನ್.ವಡ್ಡಹಳ್ಳಿ ಹಾಗೂ ನರಸಿಂಹ ತೀರ್ಥ ವ್ಯಾಪ್ತಿಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಹಾಗೂ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸ್ಥಳಗಳಲ್ಲಿನ ಕಲ್ಲುಗಳನ್ನು ತಂದು ಕಲ್ಯಾಣಿ ಸಮೀಪವೇ ಸುರಿಯಲಾಗುತ್ತಿದೆ. ಇದೂ ಸಹ ಕಲ್ಯಾಣಿ ನಶಿಸಲು ಕಾರಣ’ ಎಂದು ಸ್ಥಳೀಯರು ದೂರುತ್ತಾರೆ.
ಕಲ್ಯಾಣಿ ಪಕ್ಕದ ಶಿಥಿಲಾವಸ್ಥೆಯಲ್ಲಿದ್ದ ಅಕ್ಕ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಕಲ್ಯಾಣಿ ರಕ್ಷಣೆ ನಿಟ್ಟಿನಲ್ಲಿ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಇನ್ನಾದರೂ ಸಂಬಂಧಿಸಿದ ಎಚ್ಚೆತ್ತು ಕಲ್ಯಾಣಿ ಉಳಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಕಲ್ಯಾಣಿಯು ಬಹುತೇಕ ಹೂಳು ಹಾಗೂ ಕಸ–ಕಡ್ಡಿಗಳಿಂದ ಮುಚ್ಚಿ ಹೋಗಿದೆ. ಕೇವಲ ಎರಡು ಸುತ್ತಿನ ಕಲ್ಲಿನ ಕಟ್ಟಡ ಮಾತ್ರ ಕಾಣುತ್ತಿದೆ. ಕೆಲವೇ ದಿನಗಳಲ್ಲಿ ಕಲ್ಯಾಣಿಯೇ ಮುಚ್ಚಿ ಹೋಗುವ ಅಪಾಯದಲ್ಲಿದೆ ಎಂದು ಪದ್ಮಘಟ್ಟ ಗ್ರಾಮದ ಸೋಮು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.