ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ತಾಲ್ಲೂಕು ಕಚೇರಿಯಲ್ಲೇ ನೀರಿನ ಅಭಾವ

Published : 8 ಆಗಸ್ಟ್ 2024, 6:16 IST
Last Updated : 8 ಆಗಸ್ಟ್ 2024, 6:16 IST
ಫಾಲೋ ಮಾಡಿ
Comments

ಮುಳಬಾಗಿಲು: ತಾಲ್ಲೂಕಿನ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಈಡೇರಿಸುವ ತಾಲ್ಲೂಕು ಕಚೇರಿ ಅಥವಾ ಮಿನಿ ವಿಧಾನಸೌಧಕ್ಕೆ ನೀರಿನ ಅಭಾವ ಸೇರಿದಂತೆ ವಿವಿಧ ಸಮಸ್ಯೆಗಳು ಕಾಡುತ್ತಿವೆ. ಜನರ ಸಮಸ್ಯೆಗಳನ್ನು ಆಲಿಸಬೇಕಾದ ತಾಲ್ಲೂಕು ಆಡಳಿತ ಕಚೇರಿಗೇ ಸಮಸ್ಯೆಗಳು ಕಾಡುತ್ತಿರುವುದು ವಿಪರ್ಯಾಸದ ಸಂಗತಿಯೇ ಸರಿ. 

ಮುಳಬಾಗಿಲು ನಗರದ ತಾಲ್ಲೂಕು ಕಚೇರಿಯ ಕಟ್ಟಡವು ಅತ್ಯಾಕರ್ಷಕವಾಗಿ ಕಾಣಿಸಿಕೊಂಡರೂ ಅದು ತನ್ನ ಒಡಲಿನಲ್ಲಿ ಹತ್ತಾರು ಸಮಸ್ಯೆಗಳನ್ನು ಅಡಗಿಸಿಟ್ಟುಕೊಂಡಿದೆ. ಇದರಿಂದಾಗಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಹಳೆಯ ಕಟ್ಟಡದಲ್ಲಿದ್ದ ತಾಲ್ಲೂಕು ಕಚೇರಿಯನ್ನು ಸುಮಾರು 11 ವರ್ಷಗಳ ಹಿಂದೆ ಸುಸಜ್ಜಿತ, ಅತ್ಯಾಕರ್ಷಕವಾಗಿ ನಿರ್ಮಿಸಲಾದ ಹೊಸ ಕಟ್ಟಡಕ್ಕೆ ವರ್ಗಾವಣೆ ಮಾಡಲಾಗಿತ್ತು. ಕಟ್ಟಡ ನಿರ್ಮಾಣದ ವೇಳೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕೊಳವೆ ಬಾವಿಯನ್ನೂ ಕೊರೆಸಲಾಗಿತ್ತು. ಆದರೆ, ಭೀಕರ ಬರಗಾಲದಿಂದ ಅಂತರ್ಜಲ ಕುಸಿದ ಪರಿಣಾಮ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿದೆ. ಇರುವ ಕೊಳವೆ ಬಾವಿಯನ್ನು ಮತ್ತಷ್ಟು ಆಳಕ್ಕೆ ಮರು ಕೊರೆತವಾಗಲಿ ಅಥವಾ ಮತ್ತೊಂದು ಕೊಳವೆ ಬಾವಿ ಅಗೆಯಲು ಈವರೆಗೆ ಮುಂದಾಗಿಲ್ಲ. ಇದರಿಂದಾಗಿ ತಾಲ್ಲೂಕು ಕಚೇರಿಯಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು, ಅಧಿಕಾರಿಗಳೇ ನೀರಿಗಾಗಿ ಪರದಾಡುವಂತಾಗಿದೆ. 

ತಾಲ್ಲೂಕು ಕಚೇರಿಯಲ್ಲಿ ಸರ್ವೆ, ಕಂದಾಯ, ಭೂಮಿ, ಆಹಾರ ಮತ್ತಿತರ ಇಲಾಖೆಗಳಲ್ಲಿ ಸುಮಾರು 100 ಮಂದಿ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಕುಡಿಯುವ ಅಥವಾ ಶೌಚಾಲಯದ ನೀರಿಗಾಗಿ ಪರಿತಪಿಸುವಂತಾಗಿದೆ. ತಾತ್ಕಾಲಿಕವಾಗಿ ನಗರಸಭೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಾನಾ ಕೆಲಸಗಳಿಗಾಗಿ ತಾಲ್ಲೂಕು ಕಚೇರಿಗೆ ಬರುವವರು ಸಹ ಪಕ್ಕದ ಅಂಗಡಿ ಅಥವಾ ಪಾಕೆಟ್ ಅಥವಾ ಬಾಟಲಿ ನೀರಿನ ಮೂಲಕ ತಮ್ಮ ಬಾಯಾರಿಕೆ ನಿವಾರಿಸಿಕೊಳ್ಳುವಂತಾಗಿದೆ. 

ತಾಲ್ಲೂಕು ಕಚೇರಿಯ ಮುಂಭಾಗದ ಶೌಚಾಲಯಕ್ಕೆ ಬೀಗ

ತಾಲ್ಲೂಕು ಕಚೇರಿ, ಉಪ ನೋಂದಣಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯಿತಿ, ಡಿವೈಎಸ್‌ಪಿ ಕಚೇರಿ, ತಾಲ್ಲೂಕು ಖಜಾನೆ, ಕಸಬಾ ನಾಡ ಕಚೇರಿ ಹೀಗೆ ನಾನಾ ಇಲಾಖೆಗಳ ಕಚೇರಿಗಳಿಗೆ ಬರುವ ನೂರಾರು ಜನರಿಗಾಗಿ ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಆದರೆ, ನೀರಿನ ಅಭಾವದಿಂದ ಒಂದು ವರ್ಷದಿಂದ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಹೀಗಾಗಿ ಶೌಚಾಲಯ ಕಟ್ಟಡದ ಹಿಂಭಾಗವನ್ನು ಜನ ಬಯಲು ಶೌಚಾಲಯವನ್ನಾಗಿಸಿಕೊಂಡಿದ್ದಾರೆ.

ಕಾಯುವ ಕೊಠಡಿ ಮರೀಚಿಕೆ:

 ತಾಲ್ಲೂಕು ಕಚೇರಿಗೆ ಪ್ರತಿದಿನ ಬರುವ ನೂರಾರು ಮಂದಿ ಕಾಯುವ ಕೊಠಡಿ ಇಲ್ಲದ ಕಾರಣ ಜನರು ಕೂರಲು ಅಂಗಡಿ, ಮುಂಗಟ್ಟು ಮತ್ತು ಮರಗಿಡಗಳ ನೆರಳನ್ನು ಆಶ್ರಯಿಸುವಂತಾಗಿದೆ. ಜನರು ಹಾಗೂ ಅಧಿಕಾರಿಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಕಚೇರಿ ರಸ್ತೆಯಲ್ಲೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಲಾಗುತ್ತಿದೆ. 

ಸೂಕ್ತವಾದ ನೀರಿನ ವ್ಯವಸ್ಥೆ ಇಲ್ಲದೆ ದುರ್ವಾಸನೆ ಬೀರುತ್ತಿರುವ ಶೌಚಾಲಯ ಕಟ್ಟಡ.
ಸೂಕ್ತವಾದ ನೀರಿನ ವ್ಯವಸ್ಥೆ ಇಲ್ಲದೆ ದುರ್ವಾಸನೆ ಬೀರುತ್ತಿರುವ ಶೌಚಾಲಯ ಕಟ್ಟಡ.
ತಾಲ್ಲೂಕು ಕಚೇರಿಯ ಪ್ರವೇಶ ದ್ವಾರದಲ್ಲಿ ಎರಡು ತಿಂಗಳ ಹಿಂದೆ ನಾಮ ಫಲಕದ ದ್ವಾರ ಬಿದ್ದು ನಾಶವಾಗಿದ್ದರೂ ಇನ್ನೂ ದುರಸ್ತಿಗೆ ಒಳಗಾಗದೆ  ನಾಮ ಫಲಕವೂ ಇಲ್ಲದೆ ಇರುವುದು.
ತಾಲ್ಲೂಕು ಕಚೇರಿಯ ಪ್ರವೇಶ ದ್ವಾರದಲ್ಲಿ ಎರಡು ತಿಂಗಳ ಹಿಂದೆ ನಾಮ ಫಲಕದ ದ್ವಾರ ಬಿದ್ದು ನಾಶವಾಗಿದ್ದರೂ ಇನ್ನೂ ದುರಸ್ತಿಗೆ ಒಳಗಾಗದೆ ನಾಮ ಫಲಕವೂ ಇಲ್ಲದೆ ಇರುವುದು.
ತಾಲ್ಲೂಕು ಕಚೇರಿಯ ಕೊಳವೆ ಬಾವಿಯಲ್ಲಿ ನೀರು ಬಾರದ ಕಾರಣ ನಗರಸಭೆಯಿಂದ ನೀರು ತರಿಸಲಾಗುತ್ತಿದೆ. ನೀರಿನ ಸಮಸ್ಯೆ ಪರಿಹಾರಕ್ಕಾಗಿ ರೀ ಬೋರ್ ಅಥವಾ ಕೊಳವೆ ಬಾವಿಯ ನವೀಕರಿಸಲಾಗುವುದು
ಅಕ್ರಂ ಪಾಷ, ಜಿಲ್ಲಾಧಿಕಾರಿ
ತಾಲ್ಲೂಕು ಕಚೇರಿಯ ಕೊಳವೆ ಬಾವಿಯಲ್ಲಿ ನೀರು ಖಾಲಿಯಾಗಿದೆ. ಇದರಿಂದಾಗಿ ನಗರಸಭೆ ವತಿಯಿಂದಲೇ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ.
ಬಿ.ಆರ್. ಮುನಿವೆಂಕಟಪ್ಪ, ಗ್ರೇಡ್ 2 ತಹಶೀಲ್ದಾರ್

ಕಚೇರಿಗೆ ನಾಮ ಫಲಕವೇ ಇಲ್ಲ

ತಾಲ್ಲೂಕು ಕಚೇರಿಯ ಕಟ್ಟಡ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಪ್ರವೇಶ ದ್ವಾರದಲ್ಲಿ ತಾಲ್ಲೂಕು ಕಚೇರಿ ಎಂದು ನಾಮ ಫಲಕ ಬರೆಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ತಾಲ್ಲೂಕು ಕಚೇರಿ ಕಟ್ಟಡಕ್ಕೆ ಜಿಲ್ಲಾದಿಕಾರಿಗಳ ನೆರವಿನಿಂದ ಸುಣ್ಣ–ಬಣ್ಣ ಮಾಡಲಾಗಿತ್ತು. ಆದರೆ ಈವರೆಗೆ ನಾಮಫಲಕ ಮಾತ್ರ ಬರೆಸಿಲ್ಲ ಎಂದು ಸ್ಥಳೀಯರು ದೂರಿದರು.  

‘ಮುಖ್ಯ ರಸ್ತೆಯ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗಿದ್ದ ಮಹಾದ್ವಾರ ಮಾದರಿಯ ನಾಮಫಲಕವು ಬಿದ್ದು ನಾಶವಾಗಿದೆ. ಅದನ್ನು ಸರಿಪಡಿಸುವ ಕಾರ್ಯ ಮಾತ್ರ ಈವರೆಗೆ ನಡೆದಿಲ್ಲ. ಇದರಿಂದಾಗಿ ತಾಲ್ಲೂಕು ಕಚೇರಿಯನ್ನು ಹುಡುಕಿಕೊಂಡು ಬರುವ ಹೊಸಬರಿಗೆ ಕಚೇರಿ ಹುಡುಕುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ದೇವರಾಯ ಸಮುದ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ ಹೇಳಿದರು.

ನೀರಿಲ್ಲದೆ ಶೌಚಾಲಯ ದುರ್ವಾಸನೆ

ಕಚೇರಿಯ ಮುಂಭಾಗದಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯಗಳಿವೆ. ಆದರೆ ನೀರಿನ ಅಭಾವದಿಂದಾಗಿ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಹೀಗಾಗಿ ಮೂತ್ರ ವಿಸರ್ಜನೆಗೆ ಹೋಗುವವರು ಮೂಗು ಮುಚ್ಚಿಕೊಂಡೇ ಶೌಚಾಲಯ ಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದು ಜನಸಾಮಾನ್ಯರು ದೂರುತ್ತಾರೆ.  ಶೌಚಾಲಯದ ದುರ್ನಾತ ತಡೆಯದ ಕೆಲವು ಸಿಬ್ಬಂದಿ ಜನರು ತಾಲ್ಲೂಕು ಕಚೇರಿಯ ಹಿಂಭಾಗದ ತಾಲ್ಲೂಕು ಪಂಚಾಯಿತಿ ಕಚೇರಿಯ ತಡೆಗೋಡೆ ಬಳಿಯೇ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದಾರೆ. ಇದರಿಂದಾಗಿ ಕಚೇರಿಯ ಹಿಂಭಾಗದಲ್ಲಿ ಮೂತ್ರ ವಿಸರ್ಜನೆಯಿಂದ ದುರ್ವಸನೆ ತಡೆಯದಾಗಿದೆ ಎನ್ನುತ್ತಾರೆ ಸಿಬ್ಬಂದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT