ಕೋಲಾರ: ನಗರದ ಸ್ವಚ್ಛತೆ ಉದ್ದೇಶಕ್ಕೆಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕೋಲಾರ ನಗರಸಭೆ ಖರೀದಿಸಿರುವ ಸ್ವಚ್ಛತಾ ಯಂತ್ರಗಳು ವರ್ಷಗಳಿಂದ ಬಳಕೆ ಆಗದೇ ಹಾಳಾಗುವ ಹಂತ ತಲುಪಿವೆ.
ನಗರಸಭೆ ಆವರಣದ ಶೆಡ್‌ನಲ್ಲಿ ತಂದಿಟ್ಟಿರುವ ಈ ಯಂತ್ರಗಳ ವಿವಿಧ ಭಾಗಕ್ಕೆ ಸುತ್ತಿರುವ ಪ್ಲಾಸ್ಟಿಕ್ ಕವರ್ ಹಾಗೆಯೇ ಇದೆ. ಕೆಲವೆಡೆ ಇಲಿ, ಹೆಗ್ಗಣ ಕಚ್ಚಿ ಹಾಕಿವೆ. ಯಂತ್ರಗಳು ಈಗಾಗಲೇ ದೂಳು ಹಿಡಿದು, ಬಣ್ಣ ಮಾಸಿದ್ದು ಸ್ವಲ್ಪ ದಿನಗಳಲ್ಲಿ ತುಕ್ಕು ಹಿಡಿಯುವ ಆತಂಕವೂ ಎದುರಾಗಿದೆ.
ವರ್ಷದ ಹಿಂದೆ ನಾಲ್ಕು ರೋಡ್ ಸ್ವೀಪಿಂಗ್ ಯಂತ್ರ, ಚೇಂಬರ್ ಸ್ವಚ್ಛಗೊಳಿಸುವ ಎರಡು ಬೇಲಿಂಗ್ ಮಷಿನ್ ಹಾಗೂ ಇನ್ನಿತರ ಯಂತ್ರಗಳನ್ನು ತಂದಿಡಲಾಗಿದೆ. ಒಂದು ರೋಡ್ ಸ್ವೀಪಿಂಗ್ ಯಂತ್ರದ ಮೌಲ್ಯ ಸುಮಾರು ₹ 2 ಲಕ್ಷ. ನಾಲ್ಕು ಯಂತ್ರಗಳಿಂದ ಸುಮಾರು ₹ 8 ಲಕ್ಷ ವೆಚ್ಚವಾಗಿದೆ. ಸಿಮ್ರಾನ್ ಬುಸಿನೆಸ್ ಸಲ್ಯೂಷನ್ ಲಿಮಿಟೆಡ್ ಸಂಸ್ಥೆಯಿಂದ ಖರೀದಿಸಿರುವ ಬಗ್ಗೆ ಯಂತ್ರಗಳ ಮೇಲೆ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆ ಇದೆ.
ಇನ್ನು ಚೇಂಬರ್ ಸ್ವಚ್ಛಗೊಳಿಸುವ ಒಂದು ಬೇಲಿಂಗ್ ಮಷಿನ್ ಮೌಲ್ಯವೇ ಸುಮಾರು ₹ 4 ಲಕ್ಷ ಎಂದು ಗೊತ್ತಾಗಿದೆ.
ಈ ಯಂತ್ರಗಳನ್ನು ನಗರಸಭೆ ಆಯುಕ್ತ ಶಿವಾನಂದ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರ ಬಳಕೆಗೆ ವಿನಿಯೋಗಿಸದೆ ಶೆಡ್‌ನಲ್ಲೇ ಇಟ್ಟುಕೊಂಡಿದ್ದಾರೆ. ತಂದಿಟ್ಟ ಮೇಲೆ ಅತ್ತ ಗಮನ ಹರಿಸಿದಂತಿಲ್ಲ. ತಾವು ಪಾವತಿಸುವ ತೆರಿಗೆ ಹಣವನ್ನು ಅಧಿಕಾರಿಗಳು ಅನಾಯಾಸವಾಗಿ ವ್ಯರ್ಥ ಮಾಡುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ. ನಗರಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂವರು ಆಯುಕ್ತರು ಬದಲಾಗಿದ್ದಾರೆ. ಈಗಿರುವವರು ನಾಲ್ಕನೆಯವರು!
ನಗರದ ಬಹುತೇಕ ರಸ್ತೆಗಳು ದೂಳಿನಿಂದ ಕೂಡಿವೆ, ಹಲವೆಡೆ ಕಸದ ರಾಶಿಯೇ ಇದೆ. ರಾಜಕಾಲುವೆ ಸ್ವಚ್ಛಗೊಳಿಸಿಲ್ಲ. ಯುಜಿಡಿ ವ್ಯವಸ್ಥೆ ಸರಿ ಇಲ್ಲದೆ ಚೇಂಬರ್‌ಗಳು ಕಟ್ಟಿಕೊಂಡು ಕೊಳಚೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಹೀಗಿದ್ದೂ ಯಂತ್ರಗಳನ್ನು ಬಳಕೆ ಮಾಡಿಲ್ಲ.
‘ಯಂತ್ರಗಳು ಬಳಕೆ ಆಗದಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಯಂತ್ರಗಳು ಸುಸ್ಥಿತಿಯಲ್ಲಿದ್ದು, ಸಿಬ್ಬಂದಿ ಕೊರತೆಯಿಂದಾಗಿ ಬಳಸಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಬಳಕೆ ಮಾಡಲಾಗುವುದು’ ಎಂದು ಕೋಲಾರ ನಗರಸಭೆ ಪರಿಸರ ಎಂಜಿನಿಯರ್ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಕೂಡ ಈಚೆಗೆ ಮಾಹಿತಿ ನೀಡಿದ್ದರು. ಕೇವಲ ಶೇ 30ರಷ್ಟು ಸಿಬ್ಬಂದಿ ಇದ್ದು, ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ಕೆಲಸ ವಿಳಂಬವಾಗುತ್ತಿದೆ. ಈ ಸಂಬಂಧ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದಿದ್ದರು.
ಸುಮಾರು ₹ 8 ಲಕ್ಷ ಮೌಲ್ಯದ ರೋಡ್ ಸ್ವೀಪಿಂಗ್ ಯಂತ್ರಗಳು ಅಂದಾಜು ₹ 4 ಲಕ್ಷ ವೆಚ್ಚದ ಬೇಲಿಂಗ್ ಯಂತ್ರ ತೆರಿಗೆ ಹಣ ವ್ಯರ್ಥವೆಂದು ಸಾರ್ವಜನಿಕರ ಆಕ್ರೋಶ
ನಾನು ಹೊಸದಾಗಿ ನಿಯೋಜನೆಗೊಂಡಿದ್ದೇನೆ. ಸಿಬ್ಬಂದಿ ಕೊರತೆಯಿಂದ ಯಂತ್ರಗಳನ್ನು ಬಳಕೆ ಮಾಡಿಲ್ಲ. ಯಂತ್ರ ಬಳಕೆಗೆ ಚಾಲಕರು ಹಾಗೂ ಪರಿಣತರು ಅಗತ್ಯವಿದೆ
-ಮಹೇಶ್ ಪರಿಸರ ಎಂಜಿನಿಯರ್ ಕೋಲಾರ ನಗರಸಭೆ
ಕಸರಿ ತೊಟ್ಟಿಯಾಗಿರುವ ನಗರಸಭೆ!
ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರಗಳನ್ನು ಮೂಲೆಗುಂಪು ಮಾಡಿರುವುದು ಅಲ್ಲದೇ ಕೋಲಾರ ನಗರಸಭೆ ಆವರಣ ಕಸ ಹಾಗೂ ಗುಜರಿ ತೊಟ್ಟಿಯಾಗಿ ಮಾರ್ಪಟ್ಟಿದೆ. ಮುರಿದಿರುವ ಕಸ ಸಾಗಿರುವ ವಾಹನಗಳು ಕಸದ ಡಬ್ಬಿಗಳು ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಕೇಳಿದರೆ ಗುಜರಿಗೆ ಹರಾಜಿಗೆ ಹಾಕಲು ಕಾಯುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.