ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ ವ್ಯಾಲಿ ಯೋಜನೆ ನೀರಿಗೆ ಗಂಗಾ ಪೂಜೆ: ಮುನಿಯಪ್ಪ ವಿರೋಧಿ ಬಣದ ಶಕ್ತಿಪ್ರದರ್ಶನ

ರಮೇಶ್‌ಕುಮಾರ್ ಪರ ಜೈಕಾರ
Last Updated 3 ಮೇ 2019, 10:48 IST
ಅಕ್ಷರ ಗಾತ್ರ

ಕೋಲಾರ: ಸುಪ್ರೀಂ ಕೋರ್ಟ್ ಕೆ.ಸಿ ವ್ಯಾಲಿ ಯೋಜನೆಯ ತಡೆಯಾಜ್ಞೆ ತೆರವುಗೊಳಿಸಿದ ನಂತರ ಯೋಜನೆಯಿಂದ ಜಿಲ್ಲೆಗೆ ಹರಿದು ಬಂದ ನೀರಿಗೆ ಗಂಗಾ ಪೂಜೆ ಸಲ್ಲಿಸುವ ನೆಪದಲ್ಲಿ ಸಂಸದ ಕೆ.ಎಚ್.ಮುನಿಯಪ್ಪರ ವಿರೋಧಿಗಳು ಶುಕ್ರವಾರ ಶಕ್ತಿಪ್ರದರ್ಶನ ಮಾಡಿದರು.

ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಮುನಿಯಪ್ಪರ ಎದುರಾಳಿ ಬಣದ ಮುಖಂಡರು ಕೆರೆಯ ಬಳಿ ಗಂಗಾ ಪೂಜೆ ಆಯೋಜಿಸಿದ್ದರು. ಪೂಜೆಗಾಗಿ ಸಾವಿರಾರು ಮಂದಿಯನ್ನು ಕರೆತಂದಿದ್ದರು.

ಮಹಿಳೆಯರು ಪೂಜೆ ಸಲ್ಲಿಸುತ್ತಿದ್ದಂತೆ ಮುಖಂಡರು, ‘ಮುನಿಯಪ್ಪ ಹಾಗೂ ಅವರ ಬೆಂಬಲಿಗ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿಯ ಕುತಂತ್ರದಿಂದ ನ್ಯಾಯಾಲಯ ಕೆ.ಸಿ ವ್ಯಾಲಿ ಯೋಜನೆಗೆ ತಡೆಯಾಜ್ಞೆ ನೀಡಿತ್ತು’ ಎಂದು ಆರೋಪಿಸಿ ಧಿಕ್ಕಾರ ಕೂಗಿದರು. ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್‌ ಸ್ಥಳದಲ್ಲಿ ಇಲ್ಲದಿದ್ದರೂ ಮುಖಂಡರು. ‘ಆಧುನಿಕ ಭಗೀರಥ ರಮೇಶ್‌ಕುಮಾರ್‌ಗೆ ಜೈ’ ಎಂದು ಘೋಷಣೆ ಕೂಗಿದರು,

‘ಬರದಿಂದ ಕಂಗೆಟ್ಟಿರುವ ಜಿಲ್ಲೆಗೆ ಕೆ.ಸಿ ವ್ಯಾಲಿ ನೀರು ಬರದಂತೆ ಅಡ್ಡಿಪಡಿಸಿದ್ದ ಸಂಸದ ಮುನಿಯಪ್ಪ ಅವರು ನಮ್ಮೂರಿಗೆ ಬರಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಲಕ್ಷ್ಮೀಸಾಗರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಮುನಿಯಪ್ಪ ತಮ್ಮ ಪರಮಾಪ್ತ ಆಂಜನೇಯರೆಡ್ಡಿ ಮೂಲಕ ಕೆ.ಸಿ ವ್ಯಾಲಿ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಧಾವೆ ಹೂಡಿಸಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಆಂಜನೇಯರೆಡ್ಡಿಗೂ ಕೋಲಾರಕ್ಕೂ ಏನು ಸಂಬಂಧ? ಆತನಿಗೆ ಜಿಲ್ಲೆಯ ಜನರ ಕಷ್ಟದ ಅರಿವಿಲ್ಲ’ ಎಂದು ರೈತರು ಕಿಡಿಕಾರಿದರು.

ಪೂಜೆ ರಾಜಕೀಯ: ಎದುರಾಳಿ ಬಣವು ಕೆ.ಸಿ ವ್ಯಾಲಿ ನೀರಿಗೆ ಗಂಗಾ ಪೂಜೆ ಸಲ್ಲಿಸುವ ಸಂಗತಿ ತಿಳಿದಿದ್ದ ಮುನಿಯಪ್ಪರ ಬೆಂಬಲಿಗರು ಬೆಳಿಗ್ಗೆಯೇ ಲಕ್ಷ್ಮೀಸಾಗರ ಕೆರೆ ಬಳಿ ಬಂದು ಮೊದಲು ಪೂಜೆ ಸಲ್ಲಿಸಲು ಮುಂದಾದರು. ಆದರೆ, ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಅದಕ್ಕೆ ಅವಕಾಶ ಕೊಡಲಿಲ್ಲ. ಬಳಿಕ ಮುಖಂಡರ ಮನವಿ ಮೇರೆಗೆ ಅಧಿಕಾರಿಗಳು ಪೂಜೆಗೆ ಅನುಮತಿ ನೀಡಿದರು.

ಮುನಿಯಪ್ಪ ಬಣದವರು ನಿರ್ಗಮಿಸಿದ ಬೆನ್ನಲ್ಲೇ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರು ಕೆರೆಯತ್ತ ಧಾವಿಸಿದರು. ಮಹಿಳೆಯರು ತಂಬಿಟ್ಟು ದೀಪಗಳೊಂದಿಗೆ ಮೆರವಣಿಗೆಯಲ್ಲಿ ಬಂದು ನೀರಿಗೆ ಪೂಜೆ ಸಲ್ಲಿಸಿದರು. ನೀರಿನ ಕಾಲುವೆಗೆ ಇಳಿದ ರೈತರು, ಸಾರ್ವಜನಿಕರು ನೀರಿನಲ್ಲಿ ಕುಣಿದು ಸಂತಸ ವ್ಯಕ್ತಪಡಿಸಿದರು.

ಪಾಠ ಕಲಿಸುತ್ತೇವೆ: ‘ಯೋಜನೆಗೆ ತಡೆಯಾಜ್ಞೆ ಇಲ್ಲದಿದ್ದರೆ ಈ ವೇಳೆಗೆ ಜಿಲ್ಲೆಯ ಹತ್ತಾರು ಕೆರೆಗಳು ತುಂಬುತ್ತಿದ್ದವು. ಇದಕ್ಕೆ ಅಡ್ಡಗಾಲು ಹಾಕಿದವರಿಗೆ ದೇವರು ಒಳ್ಳೆಯದು ಮಾಡಲ್ಲ, ನಾವು ತಕ್ಕ ಪಾಠ ಕಲಿಸುತ್ತೇವೆ’ ಎಂದು ಮಹಿಳೆಯರು ಹಿಡಿಶಾಪ ಹಾಕಿದರು.

ಮುನಿಯಪ್ಪರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರಾದ ಕೆ.ಶ್ರೀನಿವಾಸಗೌಡ, ಎಚ್‌.ನಾಗೇಶ್, ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್‌, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಪೂಜೆಯಲ್ಲಿ ಪಾಲ್ಗೊಂಡರು. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಮುಖಂಡರಿಗೆ ಭಾಷಣ ಮಾಡಲು ಅನುಮತಿ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT