ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ನಗರಸಭೆ ಉದಾಸೀನ: ನಿವಾಸಿಗಳು ಹೈರಾಣ

ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನ: ಬದುಕು ನಿತ್ಯನರಕ
Last Updated 10 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಕೋಲಾರ: ನಗರಸಭೆ ಆಡಳಿತ ಯಂತ್ರವು 16ನೇ ವಾರ್ಡ್‌ ವ್ಯಾಪ್ತಿಯ ಬಡಾವಣೆಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ಸ್ಥಳೀಯರ ಮೂಲಸೌಕರ್ಯದ ಕೂಗು ಅರಣ್ಯರೋದನವಾಗಿದೆ.

ನಗರದ ಹಳೆಯ ವಾರ್ಡ್‌ಗಳಲ್ಲಿ ಒಂದಾದ 16ನೇ ವಾರ್ಡ್‌ ವ್ಯಾಪ್ತಿಯಲ್ಲಿ ಮಹಾಲಕ್ಷ್ಮೀ ಲೇಔಟ್‌, ಸುಲ್ತಾನ್‌ ತಿಪ್ಪಸಂದ್ರ ಹಾಗೂ ಅಕ್ಕಪಕ್ಕದ ಬಡಾವಣೆಗಳಿವೆ. ವಾರ್ಡ್‌ ಬೆಳೆದಂತೆ ಜನಸಂಖ್ಯೆ ವೃದ್ಧಿಯಾಗಿ ಸಮಸ್ಯೆಗಳು ಹೆಚ್ಚುತ್ತಿವೆ. ಕುಡಿಯುವ ನೀರು, ಕಸದ ನಿರ್ವಹಣೆ, ಸ್ವಚ್ಛತೆ, ಚರಂಡಿ, ರಸ್ತೆ, ಬೀದಿ ದೀಪ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.

ಬಡಾವಣೆಗಳಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ಜನರ ಬದುಕು ನರಕ ಸದೃಶವಾಗಿದೆ. ಮೂಲಸೌಕರ್ಯ ಸಮಸ್ಯೆ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು. ವಾರ್ಡ್‌ನ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಸಮಸ್ಯೆ ಪರಿಹರಿಸದೆ ಕೈಚೆಲ್ಲಿದ್ದು, ಸ್ಥಳೀಯರ ಅಳಲು ಕೇಳುವವರಿಲ್ಲ.

ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ ಷಾ ನಗರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಬಡಾವಣೆಗಳ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಮನೆಗಳಿಗೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬಡಾವಣೆಗಳ ಮನೆ ಮನೆಗೂ ನಲ್ಲಿ ಸಂಪರ್ಕವಿದೆ. ಆದರೆ, ಮನೆಗಳ ನಲ್ಲಿಯಲ್ಲಿ ನೀರು ಬಂದು ವರ್ಷಗಳೇ ಕಳೆದಿವೆ.

ನಗರಸಭೆಯಿಂದ ಬಡಾವಣೆಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ಹೀಗಾಗಿ ಜನರು ಖಾಸಗಿ ಟ್ಯಾಂಕರ್ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುತ್ತಿದ್ದಾರೆ. ಬಡಾವಣೆಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವ ಪರಿಸ್ಥಿತಿಯಿದೆ. ಆರ್ಥಿಕವಾಗಿ ಸ್ಥಿತಿವಂತರಲ್ಲದವರು ತಳ್ಳು ಗಾಡಿ, ಸೈಕಲ್‌ಗಳಲ್ಲಿ ಮೂರ್ನಾಲ್ಕು ಕಿಲೋ ಮೀಟರ್‌ ದೂರದಿಂದ ನೀರು ತರುತ್ತಿದ್ದಾರೆ.‌

ಚರಂಡಿ ಅವಾಂತರ: ವಾರ್ಡ್‌ ವ್ಯಾಪ್ತಿಯ ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಹೀಗಾಗಿ ಚರಂಡಿಗಳಲ್ಲಿ ಕಸ ತುಂಬಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಹಲವೆಡೆ ಚರಂಡಿ ನೀರು ರಸ್ತೆ ಮೇಲೆ ಹರಿದು ನಿಂತು ಅವಾಂತರ ಸೃಷ್ಟಿಸುತ್ತಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ಗಳು ಕಟ್ಟಿಕೊಂಡು ಮಲಮೂತ್ರ ರಸ್ತೆಗೆ ಹರಿಯುತ್ತಿದೆ.

ಸಾಕಷ್ಟು ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಕೆಲವೆಡೆ ಮ್ಯಾನ್‌ಹೋಲ್‌ಗಳಿಗೆ ಮುಚ್ಚಳಗಳೇ ಇಲ್ಲ. ಮಕ್ಕಳು, ಜಾನುವಾರುಗಳು ಮ್ಯಾನ್‌ಹೋಲ್‌ನಲ್ಲಿ ಬೀಳುವ ಅಪಾಯವಿದೆ. ವಿವಿಧೆಡೆ ಮ್ಯಾನ್‌ಹೋಲ್‌ ಪೈಪ್‌ಗಳು ಒಡೆದಿದ್ದು, ಮನೆಗಳ ನಲ್ಲಿಯಲ್ಲಿ ಚರಂಡಿ ಹಾಗೂ ಮ್ಯಾನ್‌ಹೋಲ್‌ನ ಕೊಳಚೆ ನೀರು ಬರುತ್ತಿದೆ.

ಕತ್ತಲುಮಯ: ಸುಲ್ತಾನ್ ತಿಪ್ಪಸಂದ್ರದಲ್ಲಿ ಬೀದಿ ದೀಪ ನಿರ್ವಹಣೆ ಪ್ರಕ್ರಿಯೆ ಹಳಿ ತಪ್ಪಿದ್ದು, ರಾತ್ರಿಯಾದರೆ ಮಹಿಳೆಯರು ಹಾಗೂ ವಯೋವೃದ್ಧರು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಬೀದಿ ದೀಪಗಳು ಕೆಟ್ಟಿದ್ದು, ನಗರಸಭೆ ಅವುಗಳನ್ನು ರಿಪೇರಿ ಮಾಡಿಸಿಲ್ಲ. ಸಾಕಷ್ಟು ಕಡೆ ಬೀದಿ ದೀಪಗಳೇ ಇಲ್ಲ. ಕೆಟ್ಟಿರುವ ಬಲ್ಬ್‌ಗಳನ್ನು ಬದಲಿಸಿದ ಕಾರಣ ರಾತ್ರಿ ವೇಳೆ ವಯೋವೃದ್ಧರ ಹಾಗೂ ಮಹಿಳೆಯರ ಓಡಾಟಕ್ಕೆ ಸಮಸ್ಯೆಯಾಗಿದೆ.

ಕಳ್ಳರು ಪರಿಸ್ಥಿತಿಯ ಲಾಭ ಪಡೆದು ಬಡಾವಣೆಯಲ್ಲಿ ಕೈಚಳಕ ತೋರುತ್ತಿದ್ದಾರೆ. ಸರಗಳವು, ಕನ್ನಕಳವು ಪ್ರಕರಣಗಳು ಹೆಚ್ಚಿದ್ದು, ಸ್ಥಳೀಯರು ಭಯದಲ್ಲಿ ದಿನ ದೂಡುವಂತಾಗಿದೆ.

ಕೊಳೆಗೇರಿ ಬಡಾವಣೆಗಳು: ವಾರ್ಡ್‌ನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳ್ಳ ಹಿಡಿದಿದೆ. ವಾರ್ಡ್‌ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣಾ ತೊಟ್ಟಿಗಳನ್ನು ನಿರ್ಮಿಸಿಲ್ಲ. ನಗರಸಭೆ ಪೌರ ಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯ ಅಕ್ಕಪಕ್ಕ, ಚರಂಡಿಗಳ ಪಕ್ಕ, ಖಾಲಿ ನಿವೇಶನಗಳಲ್ಲಿ ಕಸ ಎಸೆಯುತ್ತಿದ್ದಾರೆ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ಪ್ರದೇಶ ಕೊಳೆಗೇರಿಯಂತಾಗಿದೆ.

ರಸ್ತೆಗಳಲ್ಲಿ ಕಸ ಹರಡಿಕೊಂಡಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಖಾಲಿ ನಿವೇಶನಗಳಲ್ಲಿ ರಾಶಿಯಾಗಿರುವ ಬಿದ್ದಿರುವ ಕಸವನ್ನು ಪೌರ ಕಾರ್ಮಿಕರು ತೆರವುಗೊಳಿಸಿಲ್ಲ. ಇದರಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ದಾರಿಹೋಕರು ಮೂಗಿ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿ ಕಾಟ ಹೆಚ್ಚಿದೆ. ಕಸದ ರಾಶಿ ಬಳಿ ಬರುವ ಬೀದಿ ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ಬೀದಿ ನಾಯಿಗಳ ದಾಳಿಯಿಂದಾಗಿ ಪೋಷಕರು ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಭಯಪಡುವಂತಾಗಿದೆ. ಮೂಲಸೌಕರ್ಯ ಸಮಸ್ಯೆಯಿಂದ ಹೈರಾಣಾಗಿರುವ ಸ್ಥಳೀಯರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT