ಸೋಮವಾರ, ಮೇ 23, 2022
30 °C

ಸಂಗೀತವು ಸಾಧಕರಿಗೆ ಒಲಿಯುವ ವಿದ್ಯೆ: ಕೆ.ಎಸ್.ಗಣೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಸಂಗೀತವು ಕಠಿಣ ಅಭ್ಯಾಸ ಮಾಡುವ ಸಾಧಕರಿಗೆ ಮಾತ್ರ ಒಲಿಯುವ ವಿದ್ಯೆ’ ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್.ಗಣೇಶ್ ಅಭಿಪ್ರಾಯಪಟ್ಟರು.

ಗಾಯತ್ರಿ ಸಂಗೀತ ಕಲಾನಿಕೇತನ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಗರವು ಹೆಸರಾಂತ ಸಂಗೀತ ವಿದ್ವಾಂಸರ ನೆಲೆ ಬೀಡಾಗಿದೆ. ಸಂಗೀತದ ವಿದ್ಯಾರ್ಥಿಗಳು ಸಂಗೀತ ಪರಂಪರೆ ಮುಂದುವರಿಸುವ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು’ ಎಂದು ಆಶಿಸಿದರು.

‘ಗಾಯತ್ರಿ ಸಂಗೀತ ಕಲಾನಿಕೇತನ ಮತ್ತು ಸಪ್ತಸ್ವರ ನಾಟ್ಯ ಕಲಾ ಕೇಂದ್ರವು ನಗರದ ಯುವಕ ಯುವತಿಯರಿಗೆ ಶಾಸ್ತ್ರೀಯ ಸಂಗೀತ, ಮೃದಂಗ, ಭರತನಾಟ್ಯ ಕಲೆ ಕಲಿಸಲು ಉತ್ತಮ ವೇದಿಕೆ ಕಲ್ಪಿಸಿವೆ. ನಗರದ ಯುವ ಜನತೆ ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೂ ನೃತ್ಯ ಪರಂಪರೆ ತಲುಪಿಸಬೇಕು’ ಎಂದರು.

‘ಸಂಗೀತವು ಮನಸ್ಸಿಗೆ ಮುದ ಮತ್ತು ನೆಮ್ಮದಿ ನೀಡುವ ಕಲೆಯಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಕಲಿಯಲು ಬರುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ವಕೀಲ ಬದರಿನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊರೊನಾ ಕಾರಣಕ್ಕೆ ಮಕ್ಕಳಿಗೆ ಸಂಗೀತ ಕಲಿಕೆಯಲ್ಲಿ ಅಡೆತಡೆ ಆಯಿತು. ಆದರೂ ಸತತ ಸಾಧನೆ ಮೂಲಕ ಸಂಗೀತದ ಸೀನಿಯರ್ ಹಾಗೂ ಜೂನಿಯರ್ ಪರೀಕ್ಷೆ ತೆಗೆದುಕೊಳ್ಳಲು ಮಕ್ಕಳು ಸಿದ್ಧತೆ ನಡೆಸಿದ್ದಾರೆ’ ಎಂದು ಸಂಗೀತ ವಿದ್ವಾಂಸ ಎನ್.ಶ್ರೀನಿವಾಸಲು ಹೇಳಿದರು.

ಕಲಾವಿದ ಎನ್.ಶ್ರೀನಿವಾಸಲು ತಂಡದವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟರು. ವಿದ್ವಾನ್ ಕೆ.ಕೆ.ಭಾನುಪ್ರಕಾಶ್‌, ಸಪ್ತಸ್ವರ ನಾಟ್ಯಕಲಾ ಕೇಂದ್ರದ ಕಾರ್ಯದರ್ಶಿ ಅರುಣಾ ಜ್ಯೋತಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು