ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂಗಳ ಹಬ್ಬಕ್ಕೆ ಮುಸ್ಲಿಮರ ದುಡಿಮೆ: ಶಿವರಾತ್ರಿ ಹಬ್ಬದಿಂದ ಬೆಸೆದ ಶ್ರಮದ ಕೊಂಡಿ

Last Updated 4 ಮಾರ್ಚ್ 2019, 6:07 IST
ಅಕ್ಷರ ಗಾತ್ರ

ಕೋಲಾರ: ಮಹಾ ಶಿವರಾತ್ರಿ ಬಂತೆಂದರೆ ಜಿಲ್ಲಾ ಕೇಂದ್ರದ ಮುಸ್ಲಿಂ ಸಮುದಾಯದ ಮನೆಗಳಲ್ಲಿ ದುಡಿಮೆಯ ಸಂಭ್ರಮ. ಅರೆ, ಶಿವರಾತ್ರಿಗೂ ಮುಸ್ಲಿಂ ಸಮುದಾಯಕ್ಕೂ ಎತ್ತಣಿಂದೆತ್ತ ಸಂಬಂಧವೆಂದು ಯೋಚಿಸುತ್ತಿದ್ದೀರಾ? ಅದೇ ಇಲ್ಲಿನ ವಿಶೇಷ.

ಹಿಂದೂಗಳ ಹಬ್ಬವಾದ ಶಿವರಾತ್ರಿಯೊಂದಿಗೆ ಮುಸ್ಲಿಂ ಬಾಂಧವರ ಶ್ರಮದ ಕೊಂಡಿ ಬೆಸೆದಿದೆ. ಹಬ್ಬದ ದಿನ ಹಿಂದೂಗಳ ಮನೆಯಲ್ಲಿ ಶಿವನಿಗೆ ಸಾಮೆ, ರಾಗಿ, ಜೋಳ, ಭತ್ತದಿಂದ ತಯಾರಿಸಿದ ಅರಳಿಟ್ಟು ನೈವೇದ್ಯ ಮಾಡಲಾಗುತ್ತದೆ. ಹಬ್ಬಕ್ಕೆ ಬೇಕಾದ ಸಾಮೆ, ಜೋಳ ಹಾಗೂ ಭತ್ತದ ಪುರಿಯನ್ನು ಮುಸ್ಲಿಂ ಸಮುದಾಯದವರು ಹುರಿದು ಕೊಡುತ್ತಾರೆ.

ಸುಲ್ತಾನ್‌ ತಿಪ್ಪಸಂದ್ರ, ಜಮಾಲ್‌ ನಗರ, ರಹಮತ್‌ನಗರ. ಖಾದ್ರಿಪುರದಲ್ಲಿನ ಮುಸ್ಲಿಂ ಕುಟುಂಬಗಳು ಈ ಕಾಯಕದಲ್ಲೇ ಬದುಕು ಕಟ್ಟಿಕೊಂಡಿವೆ. ವಂಶಪಾರಂಪರ್ಯವಾಗಿ ಬಂದಿರುವ ಕಸುಬನ್ನು ಮುಂದುವರಿಸಿವೆ. ಹಿಂದೆ ಸಾರ್ವಜನಿಕರು ಈ ಕುಟುಂಬಗಳಿಗೆ ಸಾಮೆ, ಜೋಳ, ರಾಗಿ ಕೊಟ್ಟು ಪುರಿ ಹುರಿಸಿಕೊಳ್ಳುತ್ತಿದ್ದರು.

ಈಗ ಮುಸ್ಲಿಂ ಕುಟುಂಬಗಳೇ ತಮಿಳುನಾಡು, ವಿಜಾಪುರ, ದಾವಣಗೆರೆ ಕಡೆಯಿಂದ ಸಾಮೆ, ಭತ್ತ, ಜೋಳ ಖರೀದಿಸಿ ತಂದು ಹುರಿದು ಪೊಟ್ಟಣ ಕಟ್ಟಿ ಮಾರಾಟ ಮಾಡುತ್ತಿವೆ. ಶಿವರಾತ್ರಿಗೂ ಮುನ್ನ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಹಗಲಿರುಳು ಇದೇ ಕೆಲಸ. ಹಬ್ಬ ಮುಗಿದ ನಂತರ ಕಾರದ ಶೇಂಗಾ ಬೀಜ, ಹೆಸರು ಕಾಳು ತಯಾರಿಕೆ ಕಾಯಕ.

ಹುರಿಯುವ ಪರಿ: ಶುದ್ಧ ಮರಳನ್ನು ಪುರಿ ಹುರಿಯುವುದಕ್ಕೆ ಬಳಸಲಾಗುತ್ತದೆ. ಒಲೆಯ ಮೇಲಿನ ಕಬ್ಬಿಣದ ಬಾಣಲೆಗೆ ಮರಳು ಹಾಕಿ ಬಿಸಿ ಮಾಡಲಾಗುತ್ತದೆ. ಬಿಸಿಯಾದ ಮರಳಿಗೆ ಸಾಮೆ, ಜೋಳ ಹಾಗೂ ಭತ್ತ ಹಾಕುತ್ತಿದ್ದಂತೆ ಪುರಿ ಹುರಿಯುತ್ತದೆ. ನಂತರ ಮರಳು ಮತ್ತು ಪುರಿ ಕಾಳು ಪ್ರತ್ಯೇಕಿಸಲಾಗುತ್ತದೆ. ಬಳಿಕ ಪುರಿ ಜರಡಿ ಮಾಡಿ, ಪ್ಲಾಸ್ಟಿಕ್‌ ಪೊಟ್ಟಣ ಕಟ್ಟಲಾಗುತ್ತದೆ. ಈ ಕೆಲಸಕ್ಕೆ ಕುಟುಂಬದ ಹೆಂಗಸರು ಕೈ ಜೋಡಿಸುತ್ತಾರೆ.

ಹಗಲಿರುಳು ಕೆಲಸ: ‘ಪೂರ್ವಜರ ಕಾಲದಿಂದಲೂ ಸಾಮೆ ಪುರಿ ಹುರಿಯವ ಕೆಲಸ ಮಾಡುತ್ತಿದ್ದೇವೆ. ಮಹಾ ಶಿವರಾತ್ರಿ ಹಬ್ಬ ಬಂತೆಂದರೆ ಹಗಲಿರುಳು ಕೆಲಸ. ಖರ್ಚು ಕಳೆದು ಸಿಗುವ ಲಾಭ ತುಂಬಾ ಕಡಿಮೆ’ ಎಂದು ಸಾಮೆ ಪುರಿ ಬಟ್ಟಿ ಮಾಲೀಕ ಫೈರೋಜ್‌ ಬೇಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹುರಿದ ಸಾಮೆ, ಜೋಳ, ಭತ್ತದ ಕಾಳುಗಳು ಹಾಲಿನಂತೆ ಬೆಳ್ಳಗೆ, ಹೂವಿನಂತೆ ಹಗುರವಾಗಿರುತ್ತವೆ. ಈ ಕಾಳುಗಳನ್ನು ಸಕ್ಕರೆ ಅಥವಾ ಬೆಲ್ಲದ ಪಾಕದಲ್ಲಿ ಹಾಕಿ ಉಂಡೆ ಕಟ್ಟಿ ದೇವರಿಗೆ ನೈವೇದ್ಯ ಮಾಡಿ ನಂತರ ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ.

ಪುರಿ ನೈವೇದ್ಯೆ
ಮನೆಯಲ್ಲಿ ಶಿವರಾತ್ರಿ ದಿನ ದೇವರಿಗೆ ಸಾಮೆ ಪುರಿ, ರಾಗಿಯ ಅರಳಿಟ್ಟು ನೈವೇದ್ಯೆ ಮಾಡುವುದು ವಾಡಿಕೆ. ಹಿಂದೆ ಮನೆಯಲ್ಲೇ ಬೆಳೆದ ರಾಗಿ, ಸಾಮೆ ಕೊಟ್ಟು ಪುರಿ ಹುರಿಸಿಕೊಳ್ಳುತ್ತಿದ್ದೆವು. ಆದರೆ, ಈಗ ಸಾಮೆ ಬೆಳೆಯುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಪುರಿ ಖರೀದಿಸುತ್ತೇವೆ ಎಂದು ಗ್ರಾಹಕ ಜಯಣ್ಣ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT