ಕೋಲಾರ: ತಾಲ್ಲೂಕಿನ ತೊಟ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ನಿಯಮಬಾಹಿರವಾಗಿ ಯಂತ್ರೋಪಕರಣ ಬಳಸಿ ಯೋಜನೆಯ ಕೋಟ್ಯಂತರ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಕೇಂದ್ರ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ನೀಡುವ ಉದ್ದೇಶಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಜಾರಿಗೊಳಿಸಿದೆ. ಆದರೆ, ತೊಟ್ಲಿ ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಯೋಜನೆಯ ಮೂಲ ಉದ್ದೇಶಕ್ಕೆ ತಿಲಾಂಜಲಿ ಹಾಡಿ ರಾಜಾರೋಷವಾಗಿ ಯಂತ್ರೋಪಕರಣಗಳಿಂದ ನರೇಗಾ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.

ಗ್ರಾ.ಪಂ ವ್ಯಾಪ್ತಿಯ ಜನರಿಗೆ ಉದ್ಯೋಗ ನೀಡುವ ಉದ್ದೇಶಕ್ಕಾಗಿ ನರೇಗಾ ಅಡಿ ಕೋಟ್ಯಂತರ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ನಿಯಮದ ಪ್ರಕಾರ ನರೇಗಾ ಕಾಮಗಾರಿಗಳನ್ನು ಕೂಲಿ ಕಾರ್ಮಿಕರಿಂದಲೇ ಮಾಡಿಸಬೇಕು. ಆದರೆ, ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳು ಶಾಮೀಲಾಗಿ ಯಂತ್ರೋಪಕರಣಗಳಿಂದ ಕಾಮಗಾರಿ ಮಾಡಿ ಕೂಲಿ ಕಾರ್ಮಿಕರನ್ನು ವಂಚಿಸಿದ್ದಾರೆ.

ಈ ಅಕ್ರಮದಿಂದ ಯೋಜನೆಯ ಕೋಟ್ಯಂತರ ರೂಪಾಯಿ ಹಣ ಕೂಲಿ ಕಾರ್ಮಿಕರ ಕೈಸೇರುವ ಬದಲು ಸದಸ್ಯರು ಹಾಗೂ ಅಧಿಕಾರಿಗಳ ಜೇಬು ಸೇರಿದೆ. ಗ್ರಾ.ಪಂ ಸದಸ್ಯರು ಬೇನಾಮಿಯಾಗಿ ತಮ್ಮ ಆಪ್ತರು, ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿ ನರೇಗಾ ಕಾಮಗಾರಿಗಳನ್ನು ಮಾಡಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕದ್ದುಮುಚ್ಚಿ ಬಿಲ್ ಮಂಜೂರು ಮಾಡಿಸಿಕೊಂಡಿದ್ದಾರೆ.

ಚಿನ್ನದ ಕೋಳಿ: ನರೇಗಾ ಯೋಜನೆಯಲ್ಲಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಮಾಡಬಹುದಾಗಿದ್ದು, ಜಾಬ್ ಕಾರ್ಡ್ ಹೊಂದಿರುವವರು 100 ದಿನಗಳ ಉದ್ಯೋಗ ಪಡೆಯಲು ಅವಕಾಶವಿದೆ. ತೊಟ್ಲಿ ಗ್ರಾ.ಪಂ ಸದಸ್ಯರು ಮತ್ತು ಅಧಿಕಾರಿಗಳ ಪಾಲಿಗೆ ಈ ಯೋಜನೆಯು ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ.

ಗ್ರಾ,ಪಂ ವ್ಯಾಪ್ತಿಯ ಕೆರೆಗಳಲ್ಲಿ ಹೂಳು ತೆಗೆಯುವುದು, ರಾಜಕಾಲುವೆಗಳ ಸ್ವಚ್ಛತೆ ಮತ್ತು ತಡೆಗೋಡೆ ನಿರ್ಮಾಣ, ಕಲ್ಯಾಣಿಗಳ ಪುನಶ್ಚೇತನ, ಕೆರೆಯಂಗಳದಲ್ಲಿ ಸಸಿ ನೆಡುವುದು, ಕೆರೆಯಂಗಳ ಹಾಗೂ ಗೋಮಾಳಗಳಲ್ಲಿ ಗೋಕುಂಟೆ ನಿರ್ಮಾಣ, ಹೊಲಗಳಲ್ಲಿ ಬದು ನಿರ್ಮಾಣ, ಚರಂಡಿ ಮತ್ತು ಸಿ.ಸಿ ರಸ್ತೆ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿ ಅಕ್ರಮ ಎಸಗಲಾಗಿದೆ.

ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿದ್ದರೂ ಜನರಿಂದ ಕೆಲಸ ಮಾಡಿಸಿ ಕೂಲಿ ಹಣ ಪಾವತಿಸಿರುವುದಾಗಿ ದಾಖಲೆಪತ್ರ ಸೃಷ್ಟಿಸಲಾಗಿದೆ. ನಾಮಕಾವಸ್ಥೆಗೆ ಕಾಮಗಾರಿ ಸ್ಥಳದಲ್ಲಿ ಕೆಲ ಕೂಲಿ ಕಾರ್ಮಿಕರನ್ನು ನಿಲ್ಲಿಸಿ ಕೈಗೆ ಕೃಷಿ ಉಪಕರಣ ಕೊಟ್ಟು ಫೋಟೊ ತೆಗೆಸಿ ದಾಖಲೆಪತ್ರಗಳ ಜತೆ ಸೇರಿಸಲಾಗಿದೆ.ಅಲ್ಲದೇ, ಕಾಮಗಾರಿಗಳ ಸ್ಥಳದಲ್ಲಿ ಫಲಕ ಅಳವಡಿಸಿ ಜಿಪಿಎಸ್ ಮಾಡಿಸಲಾಗಿದೆ. ನಂತರ ಜೆಸಿಬಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ಯಂತ್ರೋಪಕರಣಗಳಿಂದ ಕಾಮಗಾರಿ ನಡೆಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ಕಾಮಗಾರಿಯ ಫಲಕಗಳನ್ನೇ ನಾಶಪಡಿಸಿ, ಕಾಮಗಾರಿಯ ಬಿಲ್ ಪಾವತಿಸಿಲ್ಲ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲಾಗಿದೆ.

ಜನರಿಂದ ಯಾವುದೇ ಆಕ್ಷೇಪ ವ್ಯಕ್ತವಾಗದ ಕಾಮಗಾರಿಗಳನ್ನು ರಾತ್ರೋರಾತ್ರಿ ಪೂರ್ಣಗೊಳಿಸಲಾಗಿದೆ. ನಂತರ ಕಾಮಗಾರಿಗಳಿಗೆ ಕೂಲಿ ಕಾರ್ಮಿಕರ ಜಾರ್ಬ್ ಕಾರ್ಡ್ ನೋಂದಣಿ ಮಾಡಿಸಿ ಕೆಲಸಕ್ಕೆ ಹಾಜರಾಗಿರುವುದಾಗಿ ದಾಖಲೆಪತ್ರ ಸೃಷ್ಟಿಸಿ ಒಳಗೊಳಗೆ ಬಿಲ್ ಮಂಜೂರು ಮಾಡಲಾಗಿದೆ.

ಕಾಯಕ ಮಿತ್ರರಿಲ್ಲ: ಗ್ರಾ.ಪಂ ವ್ಯಾಪ್ತಿಯಲ್ಲಿ ಕೈಗೊಳ್ಳುವ ಸಮುದಾಯ ಕಾಮಗಾರಿಗಳು ಅಥವಾ ಗ್ರಾ.ಪಂ ಸಭೆಗಳಲ್ಲಿ ಅನುಮೋದನೆಗೊಂಡ ಕಾಮಗಾರಿಗಳಿಗೆ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರನ್ನು ನಿಯೋಜಿಸಬೇಕು. ಆ ಪ್ರಕಾರ ಕಾಮಗಾರಿ ನಿರ್ವಹಣೆ ಮತ್ತು ಉಸ್ತುವಾರಿಗೆ ಕಾಯಕ ಮಿತ್ರರನ್ನು ನೇಮಿಸಿಕೊಳ್ಳಬಹುದು.

ಆದರೆ, ತೊಟ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಯಕ ಮಿತ್ರರನ್ನು ನೇಮಿಸಿಕೊಳ್ಳದೆ ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿಯೇ ನರೇಗಾ ಕಾಮಗಾರಿ ಉಸ್ತುವಾರಿ ವಹಿಸಿಕೊಂಡು ಯಂತ್ರೋಪಕರಣಗಳಿಂದ ಕೆಲಸ ಮಾಡಿಸಿದ ಬಳಿಕ ಜಾಬ್ ಕಾರ್ಡ್ದಾರರಿಂದ ಕೂಲಿ ಹಣ ಸಂಗ್ರಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.