ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಟಾಚಾರ: ಸಾಕ್ಷಿ ನೀಡಿದರೂ ಕ್ರಮವಿಲ್ಲ –ಆರೋಪ

Published 9 ಮಾರ್ಚ್ 2024, 14:21 IST
Last Updated 9 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ಬಂಗಾರಪೇಟೆ: ಸರ್ಕಾರಿ ಅಧಿಕಾರಿಗಳು ಅಕ್ರಮವೆಸಗಿ ಆದಾಯಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಸಾ‌ಕ್ಷಿ ಸಮೇತ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಕೆಆರ್‌ಎಸ್‌ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಚಿಕ್ಕನಾರಾಯಣ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಭ್ರಷ್ಠಾಚಾರ, ಅಕ್ರಮ ಸಂಪಾದನೆಗೆ ಸಂಬಂಧಿಸಿದಂತೆ ಸಾಕ್ಷಿ ಆಧಾರಗಳ ಸಮೇತ ಜಿಲ್ಲಾ ಪಂಚಾಯಿತಿ ಸಿಇಓ ಪದ್ಮಾ ಬಸವಂತಪ್ಪ ಮತ್ತು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರಿಗೆ ಹಲವು ಬಾರಿ ದೂರು ನೀಡಲಾಗಿದೆ. ಜತೆಗೆ ಪ್ರತಿಭಟನೆ ನಡೆಸಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿರಿಯ ಅಧಿಕಾರಿಗಳ ನಡೆ ನೋಡಿದರೆ ಅವರು ಭ್ರಷ್ಟ ಅಧಿಕಾರಿಗಳ ಬೆನ್ನಿಗೆ ನಿಂತಿದ್ದಾರೆ ಎಂಬ ಸಂಶಯ ಬರುತ್ತಿದೆ ಎಂದು ದೂರಿದರು.

ಪಶುವೈದ್ಯ ಇಲಾಖೆಯ ಹಗರಣಗಳು ಊಹೆಗೂ ನಿಲುಕದಷ್ಟಿದೆ. ಅಧಿಕಾರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಫಲಾನುಭವಿ ಚೆಕ್‌ಗಳಿಗೆ ನಕಲಿ ಸಹಿ ಮಾಡಿ ಹಣ ಲಪಟಾಯಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದೂರು ನೀಡದಂತೆ ನನಗೆ ಲಂಚ ನೀಡಲು ಮುಂದೆ ಬಂದರು. ಇಂತಹ ಅಧಿಕಾರಿಗಳಿಂದ ಸಮಾಜಕ್ಕೆ ಯಾವ ನ್ಯಾಯ ಸಿಗುತ್ತದೆ ಎಂದು ಪ್ರಶ್ನಿಸಿದರು.

ಬಡವರ ಪಾಲಿಗೆ ಆಸರೆಯಾಗಬೇಕಾಗಿದ್ದ ಡಿಸಿಸಿ ಬ್ಯಾಂಕ್‌ನಲ್ಲಿ ಭ್ರಷ್ಟ ಅಧಿಕಾರಿಗಳು ಸೇರ್ಪಡೆಯಾಗಿ ಅರ್ಹ ಫಲಾನುಭವಿಗಳಿಗೆ ಸಾಲ ನೀಡದೆ ಶ್ರೀಮಂತ ವರ್ಗಕ್ಕೆ ಮನಸೋ ಇಚ್ಛೆ ಸಾಲ ನೀಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ನಿಕಟಪೂರ್ವ ಅಧ್ಯಕ್ಷರ ಕೈವಾಡವಿದೆ ಎಂದು ಆರೋಪಿಸಿದರು.

ತನಿಖಾಧಿಕಾರಿಗಳು ಅಕ್ರಮ ನಡೆದಿಲ್ಲವೆಂದು ಕ್ಲೀನ್‌ಚಿಟ್‌ ನೀಡಲು ಹೊರಟಿದ್ದಾರೆ ಎಂದು ಚಿಕ್ಕನಾರಾಯಣ ದೂರಿದರು.

ರಾಜ್ಯ ಯುವ ಘಟಕ ಅಧ್ಯಕ್ಷ ಚಿಂಟು ರಾಮಚಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಅಮರೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿ.ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT