ಮಂಗಳವಾರ, ಆಗಸ್ಟ್ 3, 2021
23 °C
ಸಭೆಯಲ್ಲಿ ಅಧಿಕಾರಿಗಳಿಗೆ

ಕೋಲಾರ: ಬಿತ್ತನೆ ಬೀಜ ವಿತರಣೆಯಲ್ಲಿ ಲೋಪ ಬೇಡ: ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪ ಆಗಬಾರದು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಹಿಂದಿನ ವರ್ಷ ರೈತರಿಗೆ ವಿತರಣೆ ಮಾಡಿದ್ದ ರಾಗಿಯ ಗುಣಮಟ್ಟ ಕಳಪೆಯಾಗಿತ್ತು. ಇದರಿಂದ ಉತ್ತಮ ಬೆಳೆಯಾಗದೆ ರೈತರು ನಷ್ಟ ಅನುಭವಿಸಿದ್ದರು. ಈ ಬಾರಿ ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ’ ಎಂದು ತಾಕೀತು ಮಾಡಿದರು.

‘ಬಂಗಾಪೇಟೆಯಲ್ಲಿ ಎಲೆಕೋಸು ಬಿತ್ತನೆಯಾಗಿ 45 ದಿನವಾದರೂ ಗಡ್ಡೆ ಬಂದಿಲ್ಲ. ಆದ್ದರಿಂದ ಎಲ್ಲಾ ರೀತಿಯ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸುವುದಕ್ಕೂ ಮುನ್ನ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಬೇಕು. ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ ಬಗ್ಗೆ ದೂರು ಬಂದರೆ ಅಧಿಕಾರಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿಗೆ ಸಹಾಯಧನ ಪಡೆದು ಅಳವಡಿಸಿದ ಪೈಪ್‌ಗಳು ಮೂರ್ನಾಲ್ಕು ವರ್ಷಗಳಲ್ಲಿ ಹಾಳಾಗಿವೆ. ಸಹಾಯಧನ ಪಡೆದ ರೈತರಿಗೆ 5 ವರ್ಷದ ನಂತರ ಮತ್ತೆ ಪೈಪ್‌ ಖರೀದಿಗೆ ಸಹಾಯಧನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಸೂಚನೆ ನೀಡಿದರು.

‘ಜೇನು ಸಾಕಾಣಿಕೆಗೆ ಪ್ರೋತ್ಸಾಹ ನೀಡಬೇಕು. ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಜೇನು ಸಾಕಾಣಿಕೆ ತರಬೇತುದಾರರನ್ನು ನೇಮಿಸಿ ಮಾಡಿ ಜೇನು ಸಾಕಾಣಿಕೆ ಉತ್ತೇಜಿಸಿ. ಇದರಿಂದ ಪರಾಗಸ್ಪರ್ಶ ಹೆಚ್ಚಿ ತೋಟಗಾರಿಕೆ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

ವರದಿ ವಿಳಂಬ: ‘ಬೆಂಗಳೂರು ಲಾಕ್‌ಡೌನ್‌ ಆಗಿರುವುದರಿಂದ ಅಲ್ಲಿಂದ ಹೆಚ್ಚಿನ ಜನ ಜಿಲ್ಲೆಗೆ ಬರುತ್ತಿದ್ದಾರೆ. ಇವರನ್ನು ಗುರುತಿಸಿ ಮನೆಯಲ್ಲೇ ಕ್ವಾರಂಟೈನ್‌ನಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಶಂಕಿತ ಕೊರೊನಾ ಸೋಂಕಿತರ ವೈದ್ಯಕೀಯ ವರದಿ ವಿಳಂಬವಾಗುತ್ತಿದ್ದು, ಇದರಿಂದ ಹೆಚ್ಚಿನ ಜನರಿಗೆ ಸೋಂಕು ಹರಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದೆರಡು ದಿನದಲ್ಲಿ ವೈದ್ಯಕೀಯ ವರದಿ ನೀಡಬೇಕು. ಜತೆಗೆ ಪರೀಕ್ಷೆ ಮಾಡಿಸಿದವರು ವರದಿ ಬರುವವರೆಗೂ ಕ್ವಾರಂಟೈನ್‌ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಕೊರೊನಾ ಸೋಂಕಿನ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಕಾಮಗಾರಿಗಳು ವಿಳಂಬವಾಗುತ್ತಿವೆ. ಆಗಸ್ಟ್‌ ಅಂತ್ಯದೊಳಗೆ ಜಿ.ಪಂ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದರೂ ಕೆಲಸ ಕುಂಟುತ್ತಾ ಸಾಗಿದೆ. 2015–16ನೇ ಸಾಲಿನಲ್ಲಿ ಗ್ರಾಮ ವಿಕಾಸ ಯೋಜನೆಯಡಿ ನಿಗಮಕ್ಕೆ ನೀಡಿದ್ದ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಗೆ ಕಾರ್ಯಾಗಾರ: ‘ಜಿಲ್ಲೆಯ ಕೊಳವೆ ಬಾವಿಗಳಲ್ಲಿ ಹೆಚ್ಚು ಆಳದಿಂದ ನೀರು ತೆಗೆಯುವುದರಿಂದ ಹನಿ ನೀರಾವರಿ ಪದ್ಧತಿಯಲ್ಲಿ ಪೈಪ್‌ಗಳು ಬೇಗ ಹಾಳಾಗುತ್ತವೆ. ಪೈಪ್‌ಗಳು ಹೆಚ್ಚು ಕಾಲ ಬಾಳಿಕೆ ಬರುವಂತೆ ಮಾಡಲು ಏರ್‌ಬ್ಲಾಸ್ಟ್‌ ತಂತ್ರಜ್ಞಾನ ಬಳಸಿಕೊಳ್ಳಬಹುದು. ಈ ಬಗ್ಗೆ ರೈತರಿಗೆ ಕಾರ್ಯಾಗಾರ ನಡೆಸಿ ಅರಿವು ಮೂಡಿಸುತ್ತೇವೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ವಿವರಿಸಿದರು.

‘ನರೇಗಾ ಯೋಜನೆಯಡಿ ಜಿಲ್ಲೆಯ 156 ಗ್ರಾ.ಪಂಗಳಲ್ಲಿ ತಲಾ ಒಂದರಂತೆ ಕೋಳಿ ಶೆಡ್‌ ನಿರ್ಮಿಸುತ್ತೇವೆ. ಸ್ವಸಹಾಯ ಗುಂಪುಗಳಿಂದ ಈ ಕೋಳಿ ಶೆಡ್ ನಿರ್ವಹಣೆ ಮಾಡಲಾಗುತ್ತದೆ. ಪಶು ಸಂಗೋಪನಾ ಇಲಾಖೆಯಿಂದ ಶೆಡ್‌ಗಳಿಗೆ ಕೋಳಿ ಮರಿ ನೀಡಬೇಕು. ಇಲ್ಲಿ ಉತ್ಪತ್ತಿಯಾದ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳಿಗೆ ಕೊಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಪ್ರಸಾದ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನಿರ್ಮಲಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ, ಉಪ ಕಾರ್ಯದರ್ಶಿ ಸಂಜೀವಪ್ಪ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು