ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ ಎಸ್ಪಿ ಹುದ್ದೆ–ಕಚೇರಿ ಸ್ಥಳಾಂತರ ಬೇಡ: ಶಾಸಕಿ ರೂಪಕಲಾ

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಶಾಸಕಿ ರೂಪಕಲಾ ಮನವಿ ಸಲ್ಲಿಕೆ
Last Updated 6 ಆಗಸ್ಟ್ 2021, 15:30 IST
ಅಕ್ಷರ ಗಾತ್ರ

ಕೋಲಾರ: ‘ಕೆಜಿಎಫ್‌ನಲ್ಲಿ ಶಾಂತಿ, ಸುವ್ಯವಸ್ಥೆ ದೃಷ್ಟಿಯಿಂದ 150 ವರ್ಷಗಳ ಹಿಂದೆ ಆರಂಭಿಸಿದ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕಚೇರಿಯನ್ನು ರದ್ದುಪಡಿಸಬಾರದು ಅಥವಾ ಸ್ಥಳಾಂತರ ಮಾಡಬಾರದು’ ಎಂದು ಒತ್ತಾಯಿಸಿ ಶಾಸಕಿ ಎಂ.ರೂಪಕಲಾ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ರವಿಕುಮಾರ್‌ರನ್ನು ಭೇಟಿಯಾದ ಶಾಸಕಿ, ‘ನನ್ನ ಕ್ಷೇತ್ರ ಕೆಜಿಎಫ್‌ನಲ್ಲಿ ಹಿಂದೆ ಬ್ರಿಟೀಷರು ಚಿನ್ನದ ಗಣಿ ಆರಂಭಿಸಿದಾಗ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಮತ್ತು ಕಚೇರಿ ಮಂಜೂರಾಯಿತು. ಅಕ್ಕಪಕ್ಕದ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕಾರ್ಮಿಕರು ಗಣಿ ಕೆಲಸ ನಿರ್ವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕೆಜಿಎಫ್‌ಗೆ ಬಂದು ನೆಲೆಸಿದ್ದರಿಂದ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಸೃಜಿಸಲಾಗಿತ್ತು’ ಎಂದರು.

‘ಗಣಿ ಮುಚ್ಚಿದರೂ ಕಾರ್ಮಿಕರು ಕೆಜಿಎಫ್‌ನಲ್ಲೇ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಹಿಂದಿನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಪೊಲೀಸ್ ವ್ಯವಸ್ಥೆ ಬಲಪಡಿಸುತ್ತಾ ಬಂದಿವೆ’ ಎಂದು ವಿವರಿಸಿದರು.

‘ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕಾರ್ಯ ವ್ಯಾಪ್ತಿಗೆ ಕೆಜಿಎಫ್, ಬಂಗಾರಪೇಟೆ ತಾಲ್ಲೂಕು ಒಳಪಟ್ಟಿವೆ. ರಾಜ್ಯದ ಗಡಿ ಭಾಗದಲ್ಲಿರುವ ಕೆಜಿಎಫ್ ಅತಿ ಸೂಕ್ಷ್ಮ ಪ್ರದೇಶವಾಗಿದೆ. ಚಿನ್ನದ ಗಣಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಅಹಿತಕರ ಘಟನೆ ನಡೆದಿರುವ ಇತಿಹಾಸವಿದೆ. ಆದ್ದರಿಂದ ಕೆಜಿಎಫ್‌ನ ಸುರಕ್ಷತೆ ದೃಷ್ಟಿಯಿಂದ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂದುವರಿಸಬೇಕು’ ಎಂದು ಕೋರಿದರು.

‘ಬಿಜಿಎಂಎಲ್‌ನ 7 ಸಾವಿರ ಎಕರೆ ಜಾಗವಿದೆ. ಜತೆಗೆ ಬಿಇಎಂಎಲ್ ಕೈಗಾರಿಕೆ ಇದ್ದು, ಸರ್ಕಾರ 900 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಆರಂಭಿಸಲು ಚಿಂತಿಸಿದೆ. ಈಗಾಗಲೇ ಹಲವು ಪ್ರತಿಷ್ಠಿತ ಕಂಪನಿಗಳು ಸ್ಥಳ ಪರಿಶೀಲನೆ ಹಾಗೂ ಸುರಕ್ಷತಾ ವ್ಯವಸ್ಥೆಯ ಅವಲೋಕನ ನಡೆಸಿವೆ. ಕೆಜಿಎಫ್‌ನಿಂದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸ್ಥಳಾಂತರಿಸಿದರೆ ಕೈಗಾರಿಕಾ ವಲಯ ಸ್ಥಾಪನೆಗೆ ಹಿನ್ನಡೆಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆತಂಕ ಸೃಷ್ಟಿಯಾಗಿದೆ: ‘ಕೆಜಿಎಫ್ ನಗರದಿಂದ ಪ್ರತಿನಿತ್ಯ ಸುಮಾರು 15 ಸಾವಿರ ಕಾರ್ಮಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಾರೆ. ಕೆಜಿಎಫ್ ನಗರದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳನ್ನು ಸ್ಥಳಾಂತರ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಎಲ್ಲಾ ಅಂಶಗಳನ್ನು ಅವಲೋಕಿಸಿ ಕೆಜಿಎಫ್ ಪೊಲೀಸ್ ಜಿಲ್ಲೆ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿ, ‘ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ರದ್ದುಪಡಿಸುವ ಪ್ರಸ್ತಾವ ಸದ್ಯ ಸರ್ಕಾರದ ಮುಂದಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಎಸ್ಪಿ ಹುದ್ದೆ ಮತ್ತು ಕಚೇರಿ ಉಳಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT