ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತೆ ತಡೆಗೆ ಸಾಂಘಿಕ ಹೋರಾಟ ನಡೆಸಬೇಕು: ಡಿ.ಆರ್. ರಾಜಪ್ಪ

Last Updated 19 ಫೆಬ್ರುವರಿ 2021, 4:14 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಅಸ್ಪೃಶ್ಯತೆ ಅಮಾನವೀಯ ಆಚರಣೆಯಾಗಿದ್ದು, ಅದರ ನಿರ್ಮೂಲನಗೆ ಸಮಾಜದ ಎಲ್ಲ ವರ್ಗದ ಜನರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಿ.ಆರ್. ರಾಜಪ್ಪ ಹೇಳಿದರು.

ತಾಲ್ಲೂಕಿನ ಹೊಗಳಗೆರೆ ಕ್ರಾಸ್‌ನಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ಹೊದಲಿ ಗ್ರಾಮದ ಸಾಂಸ್ಕೃತಿಕ ಹಾಗೂ ಕ್ರೀಡಾ ಗ್ರಾಮಾಭಿವೃದ್ಧಿ ಸಂಘದಿಂದ ಬುಧವಾರ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಅಸ್ಪೃಶ್ಯತೆ ಮನುಷ್ಯ ಮನುಷ್ಯನಿಗೆ ಮಾಡುವ ಅವಮಾನ ಹಾಗೂ ಮಾನಸಿಕ ಕಿರುಕುಳವಾಗಿದೆ ಎಂದು ಹೇಳಿದರು.

ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ. ಅಸ್ಪೃಶ್ಯತೆ ಆಚರಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದರೆ, ಕಾನೂನಿಗಿಂತ ಮನಸ್ಸು ಪ್ರಬಲವಾದುದು. ಅಂಥ ಆಚರಣೆಯನ್ನು ಮನಸ್ಸಿನಿಂದ ಕಿತ್ತೆಸೆಯಬೇಕು. ವ್ಯಕ್ತಿ ಗೌರವ ಹಾಗೂ ವ್ಯಕ್ತಿತ್ವಕ್ಕೆ ಮಾನ್ಯತೆ ನೀಡಬೇಕು. ಅಸ್ಪೃಶ್ಯತೆ ಸಮಾಜದಿಂದ ದೂರವಾಗುತ್ತಿದೆ. ಆದರೆ, ಅದು ಸಂಪೂರ್ಣ ತೊಲಗಬೇಕಾಗಿದೆ ಎಂದು ಹೇಳಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮೇಗೌಡ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆ ನಿವಾರಣೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.

ಕಲಾ ತಂಡದ ಸದಸ್ಯರಿಂದ ಅಸ್ಪೃಶ್ಯತೆ ನಿವಾರಣೆ ಕುರಿತು ಬೀದಿನಾಟಕ ಪ್ರದರ್ಶಿಸಲಾಯಿತು.ಕಲಾವಿದರಾದ ಎಚ್.ಎನ್. ನವೀನ್ ಕುಮಾರ್, ವೈ.ವಿ. ಗೋವಿಂದಪ್ಪ, ಹೊದಲಿ ನಾರಾಯಣಸ್ವಾಮಿ, ಭಾಗ್ಯಮ್ಮ, ಎಸ್. ನಾಗಮಣಿ, ಜಿ. ಆಂಜಲಪ್ಪ, ರಾಧಮ್ಮ, ಚಂದ್ರಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT