ಶನಿವಾರ, ಜುಲೈ 31, 2021
21 °C
ಲ್ಯಾಪ್‌ಟಾಪ್‌– ಮೊಬೈಲ್‌ ಖರೀದಿ ಪಜೀತಿ

ಹೊರೆಯಾದ ಆನ್‌ಲೈನ್‌ ಶಿಕ್ಷಣ: ಶೂನ್ಯ ಬಡ್ಡಿ ಸಾಲಕ್ಕೆ ಪೋಷಕರ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೋವಿಡ್‌–19 ಭೀತಿ ಕಾರಣಕ್ಕೆ ಸರ್ಕಾರ ಆನ್‌ಲೈನ್‌ ಶಿಕ್ಷಣಕ್ಕೆ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ಮಕ್ಕಳು ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಖರೀದಿಸುವುದು ಅನಿವಾರ್ಯವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರು ಜಿಲ್ಲೆಯಲ್ಲಿ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸದ್ಯಕ್ಕೆ ಶಾಲಾ ಕಾಲೇಜು ಆರಂಭಿಸುವುದು ಕಷ್ಟವಾಗಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಶಿಕ್ಷಣದ ಮೊರೆ ಹೋಗಿದ್ದು, ಮಕ್ಕಳು ಹಾಗೂ ಪೋಷಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಆನ್‌ಲೈನ್‌ ತರಗತಿಗೆ ಅನುಮತಿ ನೀಡಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್‌ ಸಹ ಅಸ್ತು ಎಂದಿದ್ದು, ಖಾಸಗಿ ಶಾಲಾ -ಕಾಲೇಜುಗಳು ಈಗಾಗಲೇ ಆನ್‌ಲೈನ್‌ ತರಗತಿ ಆರಂಭಿಸಿವೆ. ಈ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಅತ್ಯಗತ್ಯವಾಗಿದೆ. ಶಾಲಾ ಕಾಲೇಜು ಆಡಳಿತ ಮಂಡಳಿಗಳು ಆನ್‌ಲೈನ್‌ ಶಿಕ್ಷಣಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಿವೆ.

ಹೀಗಾಗಿ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌, ಮೊಬೈಲ್‌ ಮತ್ತು ಇಂಟರ್‌ನೆಟ್‌ ಸೌಲಭ್ಯಕ್ಕಾಗಿ ಪೋಷಕರ ಬೆನ್ನು ಬಿದ್ದಿದ್ದಾರೆ. ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಪೋಷಕರಿಗೆ ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಖರೀದಿಗೆ ಹಣ ಹೊಂದಿಸುವುದು ಕಷ್ಟವಾಗಿದೆ.

ಆರ್ಥಿಕ ಹಿನ್ನಡೆ: ಕೃಷಿ ಪ್ರಧಾನ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿನ ಕೃಷಿ ಉತ್ಪನ್ನಗಳ ಬೆಲೆ ಕುಸಿತ, ಬೆಳೆ ನಷ್ಟದಿಂದ ರೈತರಿಗೆ ಆರ್ಥಿಕವಾಗಿ ತೀವ್ರ ಹಿನ್ನಡೆಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಜಾರಿಗೆ ಅವಕಾಶ ನೀಡಿದೆ.

ಆರ್ಥಿಕವಾಗಿ ಬರಿಗೈಯಾಗಿರುವ ರೈತರು ಇದೀಗ ಮಕ್ಕಳಿಗೆ ಲ್ಯಾಪ್‌ಟಾಪ್‌, ಮೊಬೈಲ್‌ ಕೊಡಿಸಲು ಹಣವಿಲ್ಲದೆ ಸಾಲಕ್ಕಾಗಿ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಅಲೆಯುತ್ತಿದ್ದಾರೆ. ಲ್ಯಾಪ್‌ಟಾಪ್‌ ಅಥವಾ ಮೊಬೈಲ್‌ ಖರೀದಿಗೆ ಬ್ಯಾಂಕ್‌ಗಳು ವೈಯಕ್ತಿಕ ಸಾಲ ನೀಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ ಶೇ 12 ಹಾಗೂ ಸಹಕಾರಿ ವಲಯದ ಬ್ಯಾಂಕ್‌ಗಳಲ್ಲಿ ಶೇ 10 ಇದೆ. ಸಹಕಾರಿ ಬ್ಯಾಂಕ್‌ಗಳ ಬಡ್ಡಿ ದರ ಕಡಿಮೆ ಇರುವ ಕಾರಣಕ್ಕೆ ಪೋಷಕರು ಈ ಬ್ಯಾಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ.

ಶೂನ್ಯ ಬಡ್ಡಿಗೆ ಮನವಿ: ಡಿಸಿಸಿ ಬ್ಯಾಂಕ್‌ನಿಂದ ಈಗಾಗಲೇ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ರೈತರಿಗೆ ಕೋಟ್ಯಂತರ ರೂಪಾಯಿ ಶೂನ್ಯ ಬಡ್ಡಿ ಸಾಲ ನೀಡಲಾಗಿದೆ. ಹೀಗಾಗಿ ಜಿಲ್ಲೆಯ ರೈತರು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಲ್ಯಾಪ್‌ಟಾಪ್‌ ಖರೀದಿಗೆ ಶೂನ್ಯ ಬಡ್ಡಿ ಸಾಲ ಕೊಡುವಂತೆ ಡಿಸಿಸಿ ಬ್ಯಾಂಕ್‌ಗೆ ಮನವಿ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು