ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಸಾಗಣೆಗೆ ಪಾಸ್‌ ವಿತರಣೆ

ಎಪಿಎಂಸಿ ಮಂಡಿ ಮಾಲೀಕರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ
Last Updated 26 ಮಾರ್ಚ್ 2020, 13:41 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (ಎಪಿಎಂಸಿ) ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ತರಕಾರಿ ಸಾಗಿಸಲು ಪಾಸ್‌ ವಿತರಣೆ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿ ಗುರುವಾರ ನಡೆದ ಎಪಿಎಂಸಿ ಆಡಳಿತ ಮಂಡಳಿ ಪದಾಧಿಕಾರಿಗಳು, ಮಂಡಿ ಮಾಲೀಕರು, ವರ್ತಕರು ಹಾಗೂ ಹಮಾಲಿಗಳ ಸಭೆಯಲ್ಲಿ ಮಾತನಾಡಿ, ‘ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೋಲಾರ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗುತ್ತಿದೆ. ಆದರೆ, ಸರ್ಕಾರ ಬಂದ್ ಘೋಷಣೆ ಮಾಡಿದ ನಂತರ ತರಕಾರಿ ಪೂರೈಕೆ ಸ್ಥಗಿತಗೊಂಡಿದೆ’ ಎಂದರು.

‘ಜಿಲ್ಲೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ತರಕಾರಿ ಪೂರೈಕೆಯಾಗದ ಕಾರಣ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ತರಕಾರಿ ಸಾಗಣೆ ಸ್ಥಗಿತಗೊಳ್ಳಲು ಕಾರಣವೇನು?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್‌, ‘ತರಕಾರಿ ಸಾಗಣೆ ವಾಹನಗಳನ್ನು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ತಡೆಯಲಾಗುತ್ತಿದೆ. ಆಂಧ್ರಪ್ರದೇಶ, ತಮಿಳುನಾಡಿಗೆ ಹೋಗುವ ತರಕಾರಿ ಲಾರಿಗಳನ್ನು ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತಡೆದು ನಿಲ್ಲಿಸಲಾಗುತ್ತಿದೆ. ಹೀಗಾಗಿ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ತರಕಾರಿ ಪೂರೈಕೆ ಸ್ಥಗಿತಗೊಂಡಿದೆ’ ಎಂದು ಹೇಳಿದರು.

ಆಗ ಜಿಲ್ಲಾಧಿಕಾರಿ, ‘ಎಪಿಎಂಸಿಯಿಂದ ಪ್ರತಿನಿತ್ಯ ತರಕಾರಿ ಸಾಗಿಸುವ ವಾಹನಗಳ ನೋಂದಣಿ ಸಂಖ್ಯೆ, ಚಾಲಕರ ವಿವರವನ್ನು ಜಿಲ್ಲಾಡಳಿತಕ್ಕೆ ಕೊಡಿ. ಈ ವಿವರ ಆಧರಿಸಿ ತರಕಾರಿ ಸಾಗಣೆ ವಾಹನಗಳಿಗೆ ಪಾಸ್‌ ವಿತರಿಸುತ್ತೇವೆ. ಜತೆಗೆ ತರಕಾರಿ ಸಾಗಣೆ ವಾಹನಗಳಿಗೆ ಅಡ್ಡಿಪಡಿಸದಂತೆ ಅಕ್ಕಪಕ್ಕದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ತಿಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಕೃತಕ ಅಭಾವ: ‘ಜಿಲ್ಲೆಯ ಎಪಿಎಂಸಿಯಲ್ಲಿ ಕೆ.ಜಿಗೆ ₹ 10ರ ದರದಲ್ಲಿ ಟೊಮೆಟೊ ಖರೀದಿಸಲಾಗುತ್ತಿದೆ. ಆದರೆ, ಬೆಂಗಳೂರಿನಲ್ಲಿ ಕೆ.ಜಿ ಟೊಮೆಟೊ ಬೆಲೆ ₹ 150 ಇದೆ. ಮಂಡಿ ಮಾಲೀಕರು ಹಾಗೂ ವರ್ತಕರು ಇಲ್ಲಿ ಕಡಿಮೆ ಬೆಲೆಗೆ ಟೊಮೆಟೊ ಮತ್ತು ತರಕಾರಿ ಖರೀದಿಸಿ ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ತರಕಾರಿಯ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳವಾಗುವಂತೆ ಮಾಡುತ್ತಿದ್ದಾರೆ’ ಎಂದು ನಾಗರಾಜ್‌ ದೂರಿದರು.

‘ಎಪಿಎಂಸಿಯಲ್ಲಿ ಪ್ರತಿನಿತ್ಯ ನಿಗದಿಯಾಗುವ ತರಕಾರಿ ದರದ ವಿವರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಈ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಮಂಡಿ ಮಾಲೀಕರು ಮತ್ತು ವರ್ತಕರು ದರ ಹೆಚ್ಚಳ ಮಾಡದಂತೆ ಕ್ರಮ ಕೈಗೊಳ್ಳುತ್ತೇವೆ. ತರಕಾರಿ ಸಾಗಾಟಕ್ಕೆ ನೀಡಿದ ಪಾಸ್‌ ದುರ್ಬಳಕೆ ಮಾಡಿಕೊಂಡರೆ ಕ್ರಿಮಿನಲ್‌ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಮುಖಗವಸು ಧರಿಸಿ: ‘ತರಕಾರಿ ಸಾಗಿಸುವ ವಾಹನಗಳ ಚಾಲಕರ ಆರೋಗ್ಯ ತಪಾಸಣೆ ಮಾಡಿ ಕೊರೊನಾ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಮಾರುಕಟ್ಟೆಯಲ್ಲಿ ಜನರು ಗುಂಪುಗೂಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.

‘ಎಪಿಎಂಸಿಯ ಪ್ರವೇಶದ್ವಾರಗಳಲ್ಲಿ ಪೊಲೀಸರನ್ನು ನಿಯೋಜಿಸಿ ಹೆಚ್ಚಿನ ಜನರು ಮಾರುಕಟ್ಟೆ ಪ್ರವೇಶಿಸದಂತೆ ತಡೆಯಬೇಕು. ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವಹಿವಾಟಿನ ಸ್ಥಳದಲ್ಲಿ ಮತ್ತು ಮಂಡಿಗಳ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ತಲಾ 1 ಮೀಟರ್‌ ಅಂತರದಲ್ಲಿ ವೃತ್ತ ಹಾಗೂ ಚೌಕಾಕೃತಿಯಲ್ಲಿ ಗೆರೆ ಹಾಕಬೇಕು’ ಎಂದು ಸಲಹೆ ನೀಡಿದರು.

ಪೊಲೀಸರ ದೌರ್ಜನ್ಯ: ‘ಹಮಾಲಿಗಳ ಮೇಲೆ ಪೊಲೀಸರು ಶೋಷಣೆ ನಡೆಸುತ್ತಿದ್ದಾರೆ. ಮಾರ್ಗ ಮಧ್ಯೆ ಹಮಾಲಿಗಳನ್ನು ತಡೆದು ವಾಪಸ್‌ ಕಳುಹಿಸುತ್ತಿದ್ದಾರೆ. ಹೀಗಾಗಿ ಹಮಾಲಿಗಳು ಕೆಲಸಕ್ಕೆ ಬರಲು ಹೆದರುತ್ತಿದ್ದಾರೆ. ಕೊರೊನಾ ಸೋಂಕಿನ ಕಾರಣಕ್ಕೆ ಎಪಿಎಂಸಿಯಲ್ಲಿ ಹೋಟೆಲ್‌ಗಳು ಬಂದ್‌ ಆಗಿರುವುದರಿಂದ ಹಮಾಲಿಗಳಿಗೆ ಊಟ ಸಿಗುತ್ತಿಲ್ಲ’ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಕೆ.ಎ.ನಾರಾಯಣಸ್ವಾಮಿ ಹೇಳಿದರು.

‘ಹಮಾಲಿಗಳಿಗೆ ಎಪಿಎಂಸಿ ಆಡಳಿತ ಮಂಡಳಿಯು ಗುರುತಿನ ಚೀಟಿ ನೀಡಬೇಕು ಮತ್ತು ಅವರಿಗೆ ಆಹಾರದ ವ್ಯವಸ್ಥೆ ಮಾಡಬೇಕು. ಹಮಾಲಿಗಳು ಕೆಲಸಕ್ಕೆ ಹೋಗಲು ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡುತ್ತೇವೆ. ರೈತರು ತರಕಾರಿ ಸರಕಿನ ಜತೆ ಎಪಿಎಂಸಿಗೆ ಬರದಂತೆ ಕ್ರಮ ಕೈಗೊಳ್ಳಬೇಕು. ತರಕಾರಿ ಹಣವನ್ನು ರೈತರ ಖಾತೆಗೆ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜೀವ ಮುಖ್ಯ: ‘ಎಪಿಎಂಸಿಯ ವಹಿವಾಟಿಗಿಂತ ಜನರ ಜೀವ ಮುಖ್ಯ. ಅಗತ್ಯ ವಸ್ತುಗಳ ನೆಪ ಮಾಡಿಕೊಂಡು ಗುಂಪು ಸೇರಿದರೆ ಮತ್ತು ಸುರಕ್ಷತಾ ಕ್ರಮ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ. ಎಪಿಎಂಸಿಯಲ್ಲಿ ಸಾಮಾಜಿಕ ಅಂತರದ ಕ್ರಮ ಕಡ್ಡಾಯವಾಗಿ ಪಾಲನೆ ಆಗಬೇಕು. ಇಲ್ಲದಿದ್ದರೆ ಎಪಿಎಂಸಿ ಬಂದ್‌ ಮಾಡಿಸುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ತಹಶೀಲ್ದಾರ್ ಶೋಭಿತಾ, ಎಪಿಎಂಸಿ ವರ್ತಕರ ಸಂಘದ ಉಪಾಧ್ಯಕ್ಷ ಕೆ.ಆರ್‌.ಬೈಚೇಗೌಡ, ಕಾರ್ಯದರ್ಶಿ ಪ್ರಕಾಶ್‌, ಹಮಾಲಿಗಳ ಸಂಘದ ಅಧ್ಯಕ್ಷ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ನಗರಸಭೆ ಆಯುಕ್ತ ಶ್ರೀಕಾಂತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT