ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಹಿಂದ’ಕ್ಕೆ ಪುನರ್‌ ಜನ್ಮ ನೀಡಲು ಸಿದ್ಧತೆ

ಸಿದ್ದರಾಮಯ್ಯ ಅನುಮತಿಯೊಂದಿಗೆ ಸಂಘಟನೆಗೆ ಮುಂದಾಗಿರುವ ಬೆಂಬಲಿಗರು, ಮುಖಂಡರು
Published : 12 ಆಗಸ್ಟ್ 2024, 4:57 IST
Last Updated : 12 ಆಗಸ್ಟ್ 2024, 4:57 IST
ಫಾಲೋ ಮಾಡಿ
Comments

ಕೋಲಾರ: ಹಿಂದೆ ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಶಕ್ತಿ ತುಂಬಿದ್ದ ‘ಅಹಿಂದ’ಕ್ಕೆ ಈಗ ಪುನರ್‌ ಜನ್ಮ ನೀಡಲು ಅವರ ಬೆಂಬಲಿಗರು, ವಿವಿಧ ಸಮುದಾಯಗಳ ಮುಖಂಡರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಅವರತ್ತ ತೂರಿ ಬರುತ್ತಿರುವ ಪ್ರತಿಪಕ್ಷಗಳ ಬಿಲ್ಲು ಬಾಣಗಳಿಗೆ ಪ್ರತ್ಯುತ್ತರವಾಗಿ ‘ಅಹಿಂದಾಸ್ತ್ರ’ ಪ್ರಯೋಗಿಸಲು ಸಿದ್ಧತೆಗಳು ನಡೆಸುತ್ತಿದ್ದಾರೆ.

ನಗರದಲ್ಲಿ ಭಾನುವಾರ ಅಹಿಂದ ಚಳವಳಿ ಮತ್ತು ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಸಂಘ ಏರ್ಪಟ್ಟಿಸಿದ್ದ ಸಭೆಯಲ್ಲಿ ಅಹಿಂದ ಸಮುದಾಯಗಳ ಪ್ರಮುಖರ ಮತ್ತು ಸಂಘಟನೆಯ ಕಾರ್ಯಕರ್ತರು ದನಿ ಎತ್ತಿದ್ದಾರೆ. ಜೊತೆಗೆ ಅಹಿಂದಕ್ಕೆ ರಾಜಕೀಯ ಹಾಗೂ ಆರ್ಥಿಕ ಬಲ ತುಂಬಲೂ ಮುಂದಾಗಿದ್ದಾರೆ.

ವಿಶೇಷವೆಂದರೆ ಹಿಂದೆ ಎಲ್ಲಿ ಅಹಿಂದ ಜನ್ಮ ಪಡೆದಿತ್ತೋ ಅಲ್ಲಿಂದಲೇ ಸಂಘಟನೆ ಆರಂಭಿಸಲು ಹೊರಟಿದ್ದಾರೆ. ಹಿಂದುಳಿದ ವರ್ಗಗಳಿಗೆ ಶಕ್ತಿ ತುಂಬಿದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಜನ್ಮ ದಿನದ ತಿಂಗಳಿನಲ್ಲೇ (ಆ.20) ಈ ಚರ್ಚೆ ಆರಂಭಿಸಿದ್ದಾರೆ. ಬಹು ಸಂಖ್ಯಾತರಾಗಿದ್ದರೂ ಏಕೆ ಶಾಸನ ಸಭೆಯಲ್ಲಿ ದನಿ ಇಲ್ಲದಂತಾಗಿದೆ ಎಂಬ ಪ್ರಶ್ನೆ ಎತ್ತಿದ್ದಾರೆ.

ಈ ಸಭೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೆಲೆಸಿರುವ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದ ಪ್ರಮುಖರು, ಆಸಕ್ತರು ಮತ್ತು ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದದ್ದು ವಿಶೇಷ.

‘ಹಿಂದೆ ರಾಜಕೀಯವಾಗಿ ಅಹಿಂದ ಹುಟ್ಟು ಪಡೆದಿತ್ತು. ಏಕೆ ಸ್ಥಗಿತಗೊಂಡಿತು ಎಂಬುದು ಗೊತ್ತಿಲ್ಲ. ಈಗ ಸಂಘಟನಾತ್ಮಕವಾಗಿ ಕಟ್ಟಬೇಕಿದೆ. ಅಹಿಂದ ಎಂಬುದು ಕುಟುಂಬವೆಂದುಕೊಂಡು ಕೆಲಸ ಮಾಡಬೇಕಿದೆ. ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಪ್ರತ್ಯುತ್ತರ ನೀಡಬೇಕಿದೆ’ ಎಂದು ಮುಖಂಡರು ಕರೆ ನೀಡಿದ್ದಾರೆ.

ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಚಳವಳಿ ಸಂಘಟಿಸಲೂ ಯೋಜನೆ ರೂಪಿಸುತ್ತಿದ್ದಾರೆ.

'ಸಿದ್ದರಾಮಯ್ಯ ಅನುಮತಿಯೊಂದಿಗೆ ಅಹಿಂದಕ್ಕೆ ಪುನರ್ ಜನ್ಮ ಕೊಡಲು ‌ಮುಂದಾಗಿದ್ದೇವೆ' ಎಂದು ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ ಹಾಗೂ ವಿಧಾನಸಭೆ ಮಾಜಿ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದರು.

ಅಹಿಂದ ಚಳವಳಿಯ ಸಂಘಟಕರಾದ ಮೂರ್ತಿ, ವೆಂಕಟೇಶ್‌ ಗೌಡ, ಅಶೋಕ್‌ ಕುಮಾರ್‌, ದಾಸ್‌ ಪ್ರಕಾಶ್‌ ಸೇರಿದಂತೆ ಹಲವು ಮುಖಂಡರು ಈಗಾಗಲೇ ಸಿದ್ದರಾಮಯ್ಯ, ಅಹಿಂದ ಮುಖಂಡ ಮುಕುಡಪ್ಪ ಜೊತೆ ಮಾತುಕತೆ ನಡೆಸಿದ್ದಾರೆ.

‘ಅಹಿಂದ ತವರೂರು ಕೋಲಾರ‌. ಹೋರಾಟದ ತವರೂರು ಕೂಡ. ಸಿದ್ದರಾಮಯ್ಯ, ಆರ್‌.ಎಲ್‌.ಜಾಲಪ್ಪ,‌ ದ್ವಾರಕನಾಥ್ ಅವರ‌ ಕನಸಿನ ಕೂಸು ಅಹಿಂದ. ಹಿಂದೆ ಸಣ್ಣ ಸಣ್ಣ ಸಮುದಾಯಗಳಿಗೆ ಶಕ್ತಿ ತುಂಬಿದ್ದ ಅಹಿಂದ ಈಗ ಸ್ವಲ್ಪ ಸೊರಗಿದೆ. ಅದಕ್ಕೆ ಮರು ಜೀವ ನೀಡಬೇಕಿದೆ' ಎಂದು ತಿಗಳ ಸಮುದಾಯದ ಮುಖಂಡರೂ ಆಗಿರುವ ಕಾಂಗ್ರೆಸ್‌ನ ಎಲ್‌.ಎ.ಮಂಜುನಾಥ್ ಹೇಳಿದರು.

ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ 2005ರಲ್ಲಿ ಅಹಿಂದ ಸಂಘಟನೆ ಮೂಲಕ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರು. ಅದಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಿರೋಧ ವ್ಯಕ್ತಪಡಿಸಿದ್ದರು. ನಂತರ ಆ ಪಕ್ಷದಿಂದ ಹೊರಬಿದ್ದು ರಾಜಕೀಯವಾಗಿ ಪರ್ಯಾಯ ಮಾರ್ಗ ಕಂಡುಕೊಂಡಿದ್ದು ಇತಿಹಾಸ. 

ಎಸ್‌.ಮೂರ್ತಿ
ಎಸ್‌.ಮೂರ್ತಿ

ಶೀಘ್ರದಲ್ಲೇ ಅಹಿಂದ ಸಮಾವೇಶ ನಡೆಸಲು ಮುಖಂಡರು ಚರ್ಚೆ ಎಸ್‌.ಮೂರ್ತಿ ನೇತೃತ್ವದಲ್ಲಿ ಅಹಿಂದ ಚಳವಳಿ ಸಂಘಟನೆ ಸಿದ್ದರಾಮಯ್ಯ ರಕ್ಷಣೆಗೆ ಅಹಿಂದ ದಾಳ?

ಅಹಿಂದ ಸ್ಥಾಪನೆ ಆಗಿದ್ದೇ ಕೋಲಾರದಲ್ಲಿ. ಹೀಗಾಗಿ ಈ ಬಾರಿಯೂ ಸಂಘಟನೆಗೆ ಕೋಲಾರವನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ನಿಷ್ಕ್ರಿಯವಾಗಿರುವ ಅಹಿಂದ ಇಲ್ಲಿಯೇ ಮರು ಹುಟ್ಟು ಪಡೆಯಲಿದೆ
ಎಸ್‌.ಮೂರ್ತಿ ಅಹಿಂದ ಚಳವಳಿ ರಾಜ್ಯ ಮುಖ್ಯ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT