ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಸೈನಿಕರ ಬಲಿದಾನಕ್ಕೆ ಬೆಲೆ ಕಟ್ಟಲಾಗದು: ಶಾಸಕ ಶ್ರೀನಿವಾಸಗೌಡ

ಕಾರ್ಗಿಲ್‌ ವಿಜಯೋತ್ಸವದಲ್ಲಿ ಅಭಿಪ್ರಾಯ
Last Updated 27 ಜುಲೈ 2020, 15:14 IST
ಅಕ್ಷರ ಗಾತ್ರ

ಕೋಲಾರ: ‘ಸೈನಿಕರು ವರ್ಷದ 365 ದಿನವೂ ದೇಶದ ಗಡಿ ಕಾಯುತ್ತಿರುವುದರಿಂದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಾರ್ಗಿಲ್ ಯುದ್ಧದಲ್ಲಿ ದೇಶದ 527 ಯೋಧರು ಹುತಾತ್ಮರಾದರು. ಈ ಪೈಕಿ ರಾಜ್ಯದ 150 ಯೋಧರು ಸೇರಿದ್ದಾರೆ. ಹುತಾತ್ಮ ಯೋಧರ ಬಲಿದಾನ ಸ್ಮರಿಸಬೇಕು’ ಎಂದರು.

‘ಭಾರತದಿಂದ ಪಾಕಿಸ್ತಾನ ಪ್ರತ್ಯೇಕಗೊಂಡ ನಂತರದ ಆಗಾಗ್ಗೆ ಯುದ್ಧ ನಡೆಯುತ್ತಿವೆ. ಭಾರತ ಮತ್ತು ಪಾಕಿಸ್ತಾನ ವಿಭಜನೆ ಆಗದಿದ್ದರೆ ಯುದ್ಧದ ಸಮಸ್ಯೆ ಬರುತ್ತಿರಲಿಲ್ಲ. ದೇಶದಲ್ಲಿ ಮುಸ್ಲಿಂ ಸಮುದಾಯದವರು ಇದ್ದು, ಎಲ್ಲಾ ಧರ್ಮದವರು ಸಹೋದರರಂತೆ ಬದುಕುತ್ತಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ಹಿಂದೂಗಳನ್ನು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸೈನಿಕರ ಶೌರ್ಯ ಸಾಧನೆಗೆ ಹಾಗೂ ಅವರ ಪ್ರಾಣ ತ್ಯಾಗಕ್ಕೆ ಪುರಸ್ಕಾರ ಬೇಕಿಲ್ಲ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮೆಲ್ಲರ ಬದುಕಿಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗುವ ಸೈನಿಕರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಸೈನಿಕರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

‘ದೇಶ ಶಾಂತಿಯುತವಾಗಿ ಇರಬೇಕಾದರೆ ಸೈನಿಕರ ಪರಿಶ್ರಮ ಕಾರಣ ಎಂಬ ಸಂಗತಿಯನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಹುತಾತ್ಮ ಯೋಧರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಜತೆಗೆ ಯೋಧರಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಬೇಕು. ಜನರಲ್ಲಿ ದೇಶಭಕ್ತಿ ಬೆಳೆಯಬೇಕು’ ಎಂದು ಸಲಹೆ ನೀಡಿದರು.

ಯೋಧರನ್ನು ಗೌರವಿಸಿ: ‘ತಂದೆ ತಾಯಿ, ಹೆಂಡತಿ ಮಕ್ಕಳನ್ನು ತೊರೆದು ದೇಶ ರಕ್ಷಣೆ ಮಾಡುವ ಯೋಧರನ್ನು ಗೌರವಿಸಬೇಕು. ಸ್ವಾರ್ಥ ಜೀವನ ತೊರೆಯಬೇಕು. ಕಾರ್ಗಿಲ್ ವಿಜಯೋತ್ಸವ ನೆನಪಿನಿಂದ ಭಾರತ ಮಾತೆಗೆ ನಮ್ಮನ್ನು ನಾವು ಅರ್ಪಿಸಿಕೊಂಡಂತೆ ಆಗುತ್ತದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್‌.ಎ.ಮಂಜುನಾಥ್‌ ಹೇಳಿದರು.

‘ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರು ಜಾತಿ, ಧರ್ಮದ ಭೇದವಿಲ್ಲದೆ ದೇಶ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವುದರ ಹಿಂದೆ ಸೈನಿಕರ ಶ್ರಮವಿದೆ. ಪಟ್ಟಭದ್ರ ಹಿತಾಸಕ್ತಿಗಳನ್ನು ಮಟ್ಟಹಾಕಲು ಸಾರ್ವಜನಿಕರು ಯೋಧರಂತೆ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ನಗರಸಭೆ ಸದಸ್ಯರಾದ ಎಸ್.ಆರ್.ಮುರಳಿಗೌಡ, ರಾಕೇಶ್, ಮಾಜಿ ಸದಸ್ಯೆ ರತ್ನಮ್ಮ,ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಶೋಕ್,ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಅಧ್ಯಕ್ಷ ಜಗನ್ನಾಥ್‌, ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್, ಮಾಜಿ ಯೋಧ ನಾಗರಾಜ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT