ಶುಕ್ರವಾರ, ಮೇ 29, 2020
27 °C
ಬಂಗಾರಪೇಟೆಯಲ್ಲಿ ಅಜ್ಜಿ–ಮೊಮ್ಮಗನಿಗೆ ಕೋವಿಡ್‌–19: ಜಿಲ್ಲೆಯಲ್ಲಿ 14ಕ್ಕೇರಿದ ಸೋಂಕಿತರು

ಪ್ರಾಥಮಿಕ ಸಂಪರ್ಕದ ನಂಜು: 3 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಪತ್ತೆಯಾಗಿದ್ದ ಕೊರೊನಾ ಸೋಂಕಿತ ವ್ಯಕ್ತಿಯಿಂದ ಕುಟುಂಬ ಸದಸ್ಯರು ಸೇರಿದಂತೆ 3 ಮಂದಿಗೆ ಸೋಂಕು ಹರಡಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೇರಿದೆ.

ಬಂಗಾರಪೇಟೆಯ ವಿಜಯನಗರದಲ್ಲಿನ ಸೋಂಕುಪೀಡಿತ ವ್ಯಕ್ತಿಯ (ಸೋಂಕಿತ ಸಂಖ್ಯೆ 1587) ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಅವರ 13 ವರ್ಷದ ಮಗ, 60 ವರ್ಷದ ಅತ್ತೆ ಹಾಗೂ 31 ವರ್ಷದ ಸ್ನೇಹಿತರೊಬ್ಬರಿಗೆ ಕೊರೊನಾ ಸೋಂಕು ಹರಡಿರುವುದು ಶನಿವಾರ ಖಚಿತವಾಗಿದೆ.

ವಿಜಯನಗರದ ಸೋಂಕುಪೀಡಿತ ವ್ಯಕ್ತಿಯು ಲಾರಿ ಚಾಲಕರಾಗಿದ್ದು, ಮೇ 15ರಂದು ಲಾರಿಯಲ್ಲಿ ತರಕಾರಿ ತುಂಬಿಸಿಕೊಂಡು ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ಹೋಗಿ ಬಂದಿದ್ದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿಯು ಅವರನ್ನು ಮೇ 18ರಂದು ಬಂಗಾರಪೇಟೆ ತಾಲ್ಲೂಕಿನ ಎಳೇಸಂದ್ರ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಕರೆದೊಯ್ದು ಕ್ವಾರಂಟೈನ್‌ ಮಾಡಿದ್ದರು. ಬಳಿಕ ಮೇ 21ರಂದು ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.

ಆದರೆ, ಆ ವೇಳೆಗಾಗಲೇ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಅವರ ಸಂಪರ್ಕಕ್ಕೆ ಬಂದಿದ್ದರು. ನಂತರ ಆರೋಗ್ಯ ಇಲಾಖೆ ಸಿಬ್ಬಂದಿಯು ಅವರೆಲ್ಲರನ್ನೂ ಎಳೇಸಂದ್ರದ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಿದ್ದರು. ಅಲ್ಲದೇ, ಅವರೆಲ್ಲರ ಕಫಾ ಮತ್ತು ರಕ್ತ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.

ಶನಿವಾರ ಪ್ರಯೋಗಾಲಯದ ವರದಿ ಬಂದಿದ್ದು, ಸೋಂಕಿತರ ಸ್ನೇಹಿತ, ಹಿರಿಯ ಮಗ ಮತ್ತು ವಯೋವೃದ್ಧ ಅತ್ತೆಗೆ ಸೋಂಕು ಹರಡಿರುವುದು ಗೊತ್ತಾಗಿದೆ. ಇವರೆಲ್ಲರನ್ನೂ ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಹಿತನಿಗೆ ಸೋಂಕು: ವಿಜಯನಗರದ ಸೋಂಕುಪೀಡಿತ ವ್ಯಕ್ತಿಯ ಸ್ನೇಹಿತ ಲಾರಿ ಚಾಲಕರಾಗಿದ್ದಾರೆ. ಕುಟುಂಬ ಸದಸ್ಯರೊಂದಿಗೆ ಬಂಗಾರಪೇಟೆಯ ಇಂದಿರಾ ಆಶ್ರಯ ಬಡಾವಣೆಯಲ್ಲಿ ವಾಸವಿರುವ ಅವರು ಇತ್ತೀಚೆಗೆ ತರಕಾರಿ ಸರಕು ಸಾಗಿಸಿಕೊಂಡು ಚೆನ್ನೈ ಮಾರುಕಟ್ಟೆಗೆ ಹೋಗಿ ಬಂದಿದ್ದರು. ಹೀಗಾಗಿ ಅವರನ್ನು 3 ದಿನಗಳ ಹಿಂದೆಯೇ ಎಳೇಸಂದ್ರ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ಅವರು ಚೆನ್ನೈನಿಂದ ಹಿಂದಿರುಗಿದ ನಂತರ ಬಂಗಾರಪೇಟೆ ಪಟ್ಟಣ ಮತ್ತು ಎಪಿಎಂಸಿ ಸೇರಿದಂತೆ ಹಲವೆಡೆ ಸುತ್ತಾಡಿದ್ದರು. ಅವರೊಂದಿಗೆ 4 ಮಂದಿ ಕುಟುಂಬ ಸದಸ್ಯರು ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವುದು ಗೊತ್ತಾಗಿದೆ. ಅಲ್ಲದೇ, ಎಪಿಎಂಸಿಯಲ್ಲಿನ ಲಾರಿ ಚಾಲಕರು, ದಲ್ಲಾಳಿಗಳು ಸೇರಿದಂತೆ 13 ಮಂದಿ ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದಾರೆ.

ಸೋಂಕಿತ ವ್ಯಕ್ತಿಯ ಇಬ್ಬರು ಮಕ್ಕಳು ಚಿಕ್ಕವರಾದ ಕಾರಣ ಅವರನ್ನು ತಾಯಿಯ ಜತೆ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ. ಉಳಿದವರನ್ನು ಎಳೇಸಂದ್ರ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ.

ಕಂಟೈನ್‌ಮೆಂಟ್‌: ಇಂದಿರಾ ಆಶ್ರಯ ಬಡಾವಣೆಯಲ್ಲಿನ ಸೋಂಕಿತ ವ್ಯಕ್ತಿಯ ಮನೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿರ್ಬಂಧಿತ ಪ್ರದೇಶವಾಗಿ (ಕಂಟೈನ್‌ಮೆಂಟ್‌) ಘೋಷಿಸಿ ಪುರಸಭೆಯಿಂದ ಸೀಲ್‌ಡೌನ್‌ ಮಾಡಲಾಗಿದೆ. ಬಡಾವಣೆ ಜನರು ಹೊರಗೆ ಹೋಗಬಾರದು ಮತ್ತು ಹೊರಗಿನ ಜನರು ಬಡಾವಣೆಯೊಳಗೆ ಬರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಡಾವಣೆ ನಿವಾಸಿಗಳ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು