ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗೀಕರಣ ಆತಂಕಕಾರಿ ಬೆಳವಣಿಗೆ

ಅಂಚೆ ನೌಕರರ ಪ.ಜಾ–ಪ.ಪಂ ಸಂಘದ ಖಜಾಂಚಿ ಶ್ರೀನಿವಾಸ್ ಕಳವಳ
Last Updated 21 ಮಾರ್ಚ್ 2021, 14:13 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಸರ್ಕಾರವು ಜಾಗತೀಕರಣ ಹಾಗೂ ಔದ್ಯೋಗೀಕರಣದ ಸೋಗಿನಲ್ಲಿ ಅಂಚೆ ಇಲಾಖೆ, ಬ್ಯಾಂಕ್‌, ವಿಮಾ ಸಂಸ್ಥೆ ಸೇರಿದಂತೆ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಅಂಚೆ ನೌಕರರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘದ ಖಜಾಂಚಿ ಆರ್.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಭಾನುವಾರ ನಡೆದ ಅಖಿಲ ಭಾರತ ಅಂಚೆ ನೌಕರರ ಸಂಘದ (ಗ್ರೂಪ್‌ ಸಿ) ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಮಾತನಾಡಿ, ‘ನೂತನ ಪಿಂಚಣಿ ಯೋಜನೆಯು (ಎನ್‌ಪಿಎಸ್‌) ನೌಕರರನ್ನು ಪೆಡಂಭೂತವಾಗಿ ಕಾಡುತ್ತಿದೆ. ಎನ್‌ಪಿಎಸ್‌ ವ್ಯವಸ್ಥೆಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

‘ರಿಲಯನ್ಸ್‌ ಕಂಪನಿಯ ಕಾರಣಕ್ಕೆ ಭಾರತ ಸಂಚಾರ ನಿಗಮ ನಿಯಮಿತವು (ಬಿಎಸ್ಎನ್ಎಲ್) ಮುಚ್ಚುವ ಹಂತಕ್ಕೆ ತಲುಪಿದೆ. ಅಂಚೆ ಇಲಾಖೆ ಸಂಘಟನೆಗಳ ಮೂಲಕ ಹೋರಾಟ ನಡೆಸುತ್ತಿರುವುದರಿಂದ ಇಂದಿಗೂ ಜೀವಂತವಾಗಿದೆ. ಇಲಾಖೆಯು 20 ವರ್ಷಗಳ ಹಿಂದೆ ₹ 7.7 ಲಕ್ಷ ಕೋಟಿ ಆಸ್ತಿ ಹೊಂದಿತ್ತು. ಆಗ ₹ 10 ಲಕ್ಷ ಕೋಟಿ ಲಾಭದಲ್ಲಿದ್ದ ಉದ್ಯಮ ಈಗ 9,700 ಕೋಟಿ ನಷ್ಟದಲ್ಲಿದೆ. ಇದಕ್ಕೆ ನೌಕರರು ಕಾರಣರಲ್ಲ’ ಎಂದರು.

‘ಸರ್ಕಾರ ಪ್ರತಿ ಅಂಚೆ ನೌಕರನ ವೇತನದಲ್ಲಿ ನಿವೃತ್ತಿವರೆಗೂ ಪಿಂಚಣಿಗಾಗಿ ಸುಮಾರು ₹ 70 ಲಕ್ಷ ಕಡಿತಗೊಳಿಸುತ್ತಿದೆ. ನೌಕರರ ಈ ಹಣವನ್ನು ಬಂಡವಾಳಶಾಹಿಗಳಿಗೆ ಸಾಲವಾಗಿ ನೀಡಿದೆ. ಅದೇ ರೀತಿ ವಿಮಾ ಕಂಪನಿ ಮತ್ತು ಬ್ಯಾಂಕ್ ನೌಕರರ ವೇತನದಲ್ಲೂ ಕಡಿತಗೊಳಿಸಿ ಬಂಡವಾಳಶಾಹಿಗಳಿಗೆ ಸಾಲ ನೀಡಲಾಗುತ್ತಿದೆ’ ಎಂದು ದೂರಿದರು.

ಕಾರ್ಯ ಒತ್ತಡ: ‘ಅಂಚೆ ಇಲಾಖೆಯಲ್ಲಿ 1 ಲಕ್ಷ ಹುದ್ದೆ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 7 ಲಕ್ಷ ಹುದ್ದೆ ಖಾಲಿಯಿವೆ. ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಹಾಲಿ ನೌಕರರ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ’ ಎಂದು ಹೇಳಿದರು.

‘ಅಂಚೆ ಇಲಾಖೆ ನೌಕರರು ಕೋವಿಡ್‌ ಸಂದರ್ಭದಲ್ಲಿ ಸೇನಾನಿಗಳಂತೆ ಕೆಲಸ ಮಾಡಿದ್ದಾರೆ. ದೇಶ ಸೇರಿದಂತೆ ಜಗತ್ತಿನೆಲ್ಲೆಡೆ ಕೋವಿಡ್‌ 2ನೇ ಅಲೆಯ ಆತಂಕ ಎದುರಾಗಿದ್ದು, ನೌಕರರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಕರ್ತವ್ಯ ನಿರ್ವಹಣೆಯ ಸ್ಥಳದಲ್ಲಿ ಕೋವಿಡ್‌ ಸುರಕ್ಷತಾ ಮಾರ್ಗಸೂಚಿ ಕಟ್ಟಿನಿಟ್ಟಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಉತ್ತಮ ಸೇವೆ: ‘ಅಂಚೆ ಇಲಾಖೆಯು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸೇವೆ ನೀಡುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯ ಬಳಸಿಕೊಂಡು ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಬೇಕು’ ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್‌.ವಿ.ಆರ್‌.ಮೂರ್ತಿ ಕಿವಿಮಾತು ಹೇಳಿದರು.

‘1756ರಲ್ಲಿ ಅಂಚೆ ಇಲಾಖೆ ಕಾರ್ಯಕ್ರಮ ರೂಪುಗೊಂಡಿತು. 1908ರಲ್ಲಿ ಅಂಚೆ ಮತ್ತು ಟೆಲಿಫೋನ್‌, ಟಿಲಿಗ್ರಾಮ್ ಇಲಾಖೆ ಸ್ಥಾಪಿತಗೊಂಡಿತು. 1926ರಲ್ಲಿ ನೌಕರರು ಸಂಘ ರಚನೆಯಾಯಿತು. 1957ರಿಂದ ನೌಕರರ ಸಂಘಟನೆ ಬೇಡಿಕೆ ಈಡೇರಿಕೆಗೆ ಹೋರಾಟ ಆರಂಭಿಸಿತು’ ಎಂದು ಅಖಿಲ ಭಾರತ ಅಂಚೆ ನೌಕರರ ಸಂಘದ ಕಾರ್ಯಾಧ್ಯಕ್ಷ ಜಿ.ಜಾನಕಿರಾಮ್ ವಿವರಿಸಿದರು.

ಅಖಿಲ ಭಾರತ ಅಂಚೆ ನೌಕರರ ಸಂಘದ (ಗ್ರೂಪ್‌ ಸಿ) ಕರ್ನಾಟಕ ವಲಯದ ಅಧ್ಯಕ್ಷ ಜವರಾಯಿಗೌಡ, ಕಾರ್ಯಾಧ್ಯಕ್ಷ ಪ್ರಕಾಶ್‌ರಾವ್, ಮುಖ್ಯ ಪ್ರಧಾನ ಕಾರ್ಯದರ್ಶಿ ಆರ್‌.ಎನ್‌.ಪರಾಶರ್‌, ಕರ್ನಾಟಕ ವಲಯದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT