ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಜಿಲ್ಲೆಯಲ್ಲಿ ಪಿಯುಸಿ ಪರೀಕ್ಷೆ ಸುಸೂತ್ರ

ಮೊದಲ ದಿನ 411 ವಿದ್ಯಾರ್ಥಿಗಳು ಗೈರು: ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಭದ್ರತೆ
Last Updated 4 ಮಾರ್ಚ್ 2020, 14:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ 26 ಕೇಂದ್ರಗಳಲ್ಲಿ ಬುಧವಾರ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆಯಿತು. ಮೊದಲ ದಿನ ಇತಿಹಾಸ, ಭೌತಶಾಸ್ತ್ರ ಹಾಗೂ ಬೇಸಿಕ್ ಗಣಿತ ವಿಷಯಗಳ ಪರೀಕ್ಷೆಗೆ ಒಟ್ಟಾರೆ 411 ವಿದ್ಯಾರ್ಥಿಗಳು ಗೈರಾದರು.

ಇತಿಹಾಸ ವಿಷಯದ ಪರೀಕ್ಷೆಗೆ 4,888 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದರು. ಅಂತಿಮವಾಗಿ 4,556 ಮಂದಿ ಪರೀಕ್ಷೆಗೆ ಹಾಜರಾದರು. ಉಳಿದ 332 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಭೌತಶಾಸ್ತ್ರ ವಿಷಯದ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 2,491 ವಿದ್ಯಾರ್ಥಿಗಳ ಪೈಕಿ 2,414 ಮಂದಿ ಹಾಜರಾದರು. 77 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾದರು. ಬೇಸಿಕ್ ಗಣಿತ ವಿಷಯಕ್ಕೆ 67 ವಿದ್ಯಾರ್ಥಿಗಳು ಮಾತ್ರ ಹೆಸರು ನೊಂದಾಯಿಸಿದ್ದು, 65 ಮಂದಿ ಹಾಜರಾದರು. ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಬರಲಿಲ್ಲ.

ಪರೀಕ್ಷೆ ಆರಂಭಕ್ಕೂ ಮುನ್ನ ಮಕ್ಕಳೊಂದಿಗೆ ನೂರಾರು ಪೋಷಕರು ಪರೀಕ್ಷಾ ಕೇಂದ್ರದ ಬಳಿ ಜಮಾಯಿಸಿದ್ದ ದೃಶ್ಯ ಕಂಡುಬಂತು. ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬ ಬಗ್ಗೆ ವಿದ್ಯಾರ್ಥಿಗಳು ಕೇಂದ್ರದ ಸೂಚನಾ ಫಲಕ ಪರಿಶೀಲಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

ಪರೀಕ್ಷಾ ಕೇಂದ್ರಗಳ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ, ಕೇಂದ್ರದ ಸುತ್ತಮುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜತೆಗೆ ಸುತ್ತಮುತ್ತಲಿನ ಜೆರಾಕ್ಸ್‌ ಮಳಿಗೆಗಳನ್ನು ಬಂದ್‌ ಮಾಡಿಸಲಾಗಿತ್ತು.

ಆನ್‌ಲೈನ್‌ ಪೋರ್ಟಲ್‌: ಪ್ರತಿ ಕೇಂದ್ರಕ್ಕೂ ಜಿಲ್ಲಾಡಳಿತದಿಂದ ಓರ್ವ ವೀಕ್ಷಕರನ್ನು ನೇಮಿಸಲಾಗಿತ್ತು. ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅಧಿಕಾರಿಗಳ ವಿವರ ಸೇರಿದಂತೆ ಪರೀಕ್ಷೆಗೆ ಹಾಜರಾದ ಮತ್ತು ಗೈರಾದ ವಿದ್ಯಾರ್ಥಿಗಳ ವಿವರವನ್ನು ಆನ್‌ಲೈನ್ ಪೋರ್ಟಲ್‌ನಲ್ಲಿ ದಾಖಲಿಸಲಾಯಿತು.

ಜಿಲ್ಲಾಧಿಕಾರಿಯು ಪ್ರತಿ ಪರೀಕ್ಷಾ ಕೇಂದ್ರಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಿದ್ದರು. ಪರೀಕ್ಷಾ ನಕಲು, ಅಕ್ರಮ ತಡೆಯಲು ಕೇಂದ್ರ ಕಚೇರಿಯ ಜಾಗೃತ ದಳ, ಜಿಲ್ಲಾಧಿಕಾರಿ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯಿಂದ, ಉಪ ನಿರ್ದೇಶಕರ ನೇತೃತ್ವದಲ್ಲಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಜಾಗೃತ ದಳಗಳನ್ನು ರಚಿಸಲಾಗಿತ್ತು. ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಹೊರ ಜಿಲ್ಲೆಗಳ ತಲಾ ಇಬ್ಬರು ಸ್ಥಾನಿಕ ಜಾಗೃತ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಜಿಪಿಎಸ್‌ ವ್ಯವಸ್ಥೆ: ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಯ ಬಂಡಲ್‌ ತಲುಪಿಸಲು 9 ಮಾರ್ಗಗಳಿಗೆ 9 ವಾಹನ ನಿಯೋಜಿಸಲಾಗಿತ್ತು. ಈ ವಾಹನಗಳು ಪೊಲೀಸ್‌ ಬೆಂಗಾವಲಿನಲ್ಲಿ ಸಂಚರಿಸಿದವು. ಮಾರ್ಗಾಧಿಕಾರಿಗಳ ವಾಹನಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲಾಗಿತ್ತು.

ಕೋಲಾರದಲ್ಲಿ 3, ಮುಳಬಾಗಿಲು 2, ಬಂಗಾರಪೇಟೆ, ಕೆಜಿಎಫ್, ಶ್ರೀನಿವಾಸಪುರ ಮತ್ತು ಮಾಲೂರಿನಲ್ಲಿ ತಲಾ ಒಂದೊಂದು ಮಾರ್ಗಾಧಿಕಾರಿಗಳ ವಾಹನಗಳು ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು ಕೇಂದ್ರಕ್ಕೆ ತಲುಪಿಸಿದವು. ಯಾವುದೇ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಆಗದಂತೆ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಪರೀಕ್ಷೆ ಮುಗಿದ ನಂತರ ಸಿಬ್ಬಂದಿಯು ಪೊಲೀಸ್‌ ಭದ್ರತೆಯಲ್ಲಿ ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಅಂಚೆ ಕಚೇರಿಗೆ ಕೊಂಡೊಯ್ದರು.

ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ಕ್ಯಾಮೆರಾ, ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್ ಉಪಕರಣ ತರುವುದನ್ನು ನಿಷೇಧಿಸಲಾಗಿತ್ತು. ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕರಿಗೂ ಮೊಬೈಲ್ ಬಳಕೆಗೆ ಅವಕಾಶ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT