ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಸ್ಪತ್ರೆಗೆ ಗುಣಮಟ್ಟ ಖಾತ್ರಿ ಮಾನ್ಯತೆ

ಎನ್‌ಆರ್‌ಸಿ ಮೌಲ್ಯಮಾಪನ: ಜಿಲ್ಲಾಧಿಕಾರಿ ಮಂಜುನಾಥ್‌ ಸಂತಸ
Last Updated 6 ಆಗಸ್ಟ್ 2019, 14:28 IST
ಅಕ್ಷರ ಗಾತ್ರ

ಕೋಲಾರ: ‘ರಾಷ್ಟ್ರೀಯ ಸಂಪನ್ಮೂಲ ಕೇಂದ್ರದ (ಎನ್‌ಆರ್‌ಸಿ) ವತಿಯಿಂದ ನಗರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆಯ ಮಾನ್ಯತೆ ಸಿಕ್ಕಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎನ್‌ಆರ್‌ಸಿ ಅಧಿಕಾರಿಗಳ ತಂಡವು 7 ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿ ಶೇ 89ರಷ್ಟು ಫಲಿತಾಂಶ ನೀಡಿದ್ದು, ಆಸ್ಪತ್ರೆಯು ಈ ಮಾನ್ಯತೆ ಪಡೆದುಕೊಂಡಿದೆ’ ಎಂದು ತಿಳಿಸಿದರು.

‘ಕೇಂದ್ರದಿಂದ ಬಂದಿದ್ದ ಪರಿಶೀಲನಾ ತಂಡವು ಆಸ್ಪತ್ರೆಯ ಹೆರಿಗೆ ವಿಭಾಗ, ಪ್ರಧಾನ ಶಸ್ತ್ರಚಿಕಿತ್ಸಾ ವಿಭಾಗ, ಪ್ರಸವ ನಂತರದ ವಿಭಾಗ, ನವಜಾತ ಶಿಶು ಘಟಕ, ಮಕ್ಕಳ ವಿಭಾಗ ಹಾಗೂ ರಕ್ತನಿಧಿ ಕೇಂದ್ರಗಳಲ್ಲಿ ಪರಿಶೀಲನೆ ಮಾಡಿ ಗುಣಮಟ್ಟ ಪ್ರಮಾಣಪತ್ರ ನೀಡಿದ್ದಾರೆ’ ಎಂದು ವಿವರಿಸಿದರು.

‘ರಾಜ್ಯದ ಹಾಸನ, ಧಾರವಾಡ, ತುಮಕೂರು ಮತ್ತು ಕೋಲಾರ ಜಿಲ್ಲಾ ಆಸ್ಪತ್ರೆಗೆ ಈ ಮಾನ್ಯತೆ ದೊರೆತಿದೆ. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಲಭ್ಯ ಸಂಪನ್ಮೂಲ ಬಳಸಿಕೊಂಡು ಈ ಸಾಧನೆ ಮಾಡಿರುವುದು ಶ್ಲಾಘನೀಯ. ಆಸ್ಪತ್ರೆಯಲ್ಲಿ ಈಗ 460 ಹಾಸಿಗೆ ಸಾಮರ್ಥ್ಯವಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಿಸುತ್ತಿದ್ದು, ಹಾಸಿಗೆ ಸಾಮರ್ಥ್ಯ ಸದ್ಯದಲ್ಲೇ 100ಕ್ಕೆ ಹೆಚ್ಚಲಿದೆ’ ಎಂದು ಮಾಹಿತಿ ನೀಡಿದರು.

‘ಆಸ್ಪತ್ರೆಗೆ ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆಯ ಮಾನ್ಯತೆ ದೊರೆತಿರುವುದರಿಂದ ಪ್ರತಿ ಹಾಸಿಗೆ ಸಾಮರ್ಥ್ಯಕ್ಕೆ ವರ್ಷಕ್ಕೆ ₹ 10 ಸಾವಿರದಂತೆ 3 ವರ್ಷಗಳವರೆಗೆ ಹೆಚ್ಚಿನ ಅನುದಾನ ದೊರೆಯಲಿದೆ’ ಎಂದರು.

ಸಿಬ್ಬಂದಿ ಸಹಕಾರ: ‘2015-16ನೇ ಸಾಲಿನಲ್ಲಿ ರಾಷ್ಟ್ರೀಯ ಗುಣಮಟ್ಟ ಖಾತರಿ ಯೋಜನೆ ಜಾರಿಗೆ ಬಂದಿತು. 18 ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿ ಈ ಮಾನ್ಯತೆ ನೀಡಲಾಗುತ್ತದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ ಹೇಳಿದರು.

‘ಜಿಲ್ಲಾಧಿಕಾರಿಯವರ ಮಾರ್ಗದರ್ಶನ ಹಾಗೂ ಸಿಬ್ಬಂದಿ ಸಹಕಾರದಿಂದ ಈ ಮಾನ್ಯತೆ ಪಡೆಯಲು ಸಾಧ್ಯವಾಯಿತು. ಭವಿಷ್ಯದಲ್ಲಿ ಉಳಿದ 11 ವಿಭಾಗಗಳಲ್ಲೂ ಉತ್ತಮವಾಗಿ ಕೆಲಸ ಮಾಡಿ ಮಾನ್ಯತೆ ದೊರೆಯುವಂತೆ ಮಾಡಲಾಗುವುದು’ ಎಂದು ತಿಳಿಸಿದರು.

‘ಆಸ್ಪತ್ರೆಯಲ್ಲಿ ತಿಂಗಳಿಗೆ 400 ಶಸ್ತ್ರಚಿಕಿತ್ಸೆಗಳು ಹಾಗೂ 450 ಹೆರಿಗೆ ಆಗುತ್ತಿವೆ. ಪ್ರತಿನಿತ್ಯ ಸುಮಾರು 1,500 ಹೊರ ರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ವರ್ಷದ ಹಿಂದೆ ಆಸ್ಪತ್ರೆಯಲ್ಲಿ 18 ವೈದ್ಯರಿದ್ದರು. ಈಗ 48 ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ಕೊರತೆ ನಡುವೆಯೂ ಗುಣಮಟ್ಟದ ಸೇವೆ ನೀಡಲಾಗುತ್ತದೆ’ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಭಾರತಿ, ವೈದ್ಯ ಡಾ.ನಂದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT