ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರದಲ್ಲಿ ರಂಜಾನ್‌ ಮಾಸದ ರಂಗು: ಮಸೀದಿ ಮಿನಾರುಗಳಲ್ಲಿ ನಮಾಜ್‌ ನಿನಾದ

ಮಸೀದಿ ಮಿನಾರುಗಳಲ್ಲಿ ನಮಾಜ್‌ ನಿನಾದ: ಬಡಾವಣೆಯಲ್ಲಿ ಸಮೋಸ ಘಮಲು
Last Updated 19 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ರಂಜಾನ್‌ ಮಾಸದ ರಂಗು ಕಳೆಗಟ್ಟಿದ್ದು, ಉಪವಾಸ, ಪ್ರಾರ್ಥನೆ, ದುಡಿಮೆಯಲ್ಲಿ ಅಲ್ಲಾಹುನನ್ನು ಕಾಣುತ್ತಿರುವ ಮುಸ್ಲಿಂ ಬಾಂಧವರು ಕೆಲವೇ ದಿನಗಳಲ್ಲಿ ಮತ್ತೆ ಮೂಡುವ ಚಂದ್ರನಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ 80ಕ್ಕೂ ಹೆಚ್ಚು ಮಸೀದಿಗಳಿವೆ. ಮೊಹಲ್ಲಾ, ಬಡಾವಣೆಗಳಲ್ಲಿ ಎಣಿಸುತ್ತಾ ಹೋದಂತೆ ಮಸೀದಿಗಳ ದೊಡ್ಡ ಲೋಕವೇ ತೆರೆದುಕೊಳ್ಳುತ್ತದೆ. ಮಸೀದಿ ಮಿನಾರುಗಳಲ್ಲಿ ನಮಾಜ್‌ ನಿನಾದ ಮೊಳಗುತ್ತಿದ್ದು, ಬಡಾವಣೆಗಳಲ್ಲಿ ಸಮೋಸ ಘಮಲು ಜೋರಾಗಿದೆ.

ರಂಜಾನ್ ಮಾಸದಲ್ಲಿ ದಿನಕ್ಕೆ 5 ಬಾರಿ ಪ್ರಾರ್ಥನೆ (ನಮಾಜ್) ಮಾಡುವುದು ಕಡ್ಡಾಯ. ಮುಸ್ಲಿಮರ ಮನ ಮತ್ತು ಮನೆಗಳು ಪ್ರಾರ್ಥನೆಯ ಮೌನದಲ್ಲಿ ಅಲ್ಲಾಹುವನ್ನು ನೆನೆಯುತ್ತಿವೆ. ದೊಡ್ಡವರಿಗೆ ಪ್ರಾರ್ಥನೆಯು ನಿಷ್ಠೆಯ ವಿಷಯ. ದೊಡ್ಡವರ ಮೌನ ಪ್ರಾರ್ಥನೆ ನಡುವೆ ಮಕ್ಕಳ ಬೆರಗುಗಂಗಳ ಚಂಚಲ ನೋಟದ ಬೆಳಕು ಮನೆಯಂಗಳದಲ್ಲಿ ಹಾಸಿಕೊಂಡಿರುತ್ತದೆ.

ರಂಜಾನ್‌ ಮಾಸ ಆರಂಭವಾಗಿ ಈಗಾಗಲೇ 18 ದಿನ ಕಳೆದಿದೆ. ರಂಜಾನ್‌ ತಿಂಗಳಲ್ಲಿ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಬೆಳಗಿನ ಜಾವದಲ್ಲೇ ನಿದ್ದೆಯಿಂದ ಎದ್ದು ಇಡೀ ಬಡಾವಣೆಯಲ್ಲಿ ಕೂಗುತ್ತಾ ಉಪವಾಸ ಇರುವವರನ್ನು ಎಚ್ಚರಗೊಳಿಸುತ್ತಾರೆ.

ರಂಜಾನ್ ಮಾಸವೆಂದರೆ ಮುಸ್ಲಿಂ ಮಹಿಳೆಯರಿಗೆ ಉಪವಾಸ, ಪ್ರಾರ್ಥನೆ ಅಷ್ಟೇ ಅಲ್ಲ. ನಿತ್ಯ ವಿಶ್ರಾಂತಿ ಇಲ್ಲದ ದುಡಿಮೆ. ಅವರ ದಿನಚರಿ ಆರಂಭವಾಗುವುದು ಬೆಳಗಿನ ಜಾವ. ಮುಗಿಯುವುದು ಮಧ್ಯ ರಾತ್ರಿ ಅಥವಾ ಬೆಳಗಿನ ಮೊದಲ ಜಾವದ ಹೊತ್ತಿಗೆ. ಪತಿ, ಮನೆಯ ಹಿರಿಯರು, ಮಕ್ಕಳಿಗಾಗಿ ಇಡೀ ದಿನ ಮೀಸಲು. ಉಪವಾಸದ ಜತೆಗೆ ಸತತ ಕೆಲಸ. ಆದರೂ ಮಹಿಳೆಯರ ಭಕ್ತಿ ಕುಂದಿಲ್ಲ.

ಭಾವೈಕ್ಯದ ಪ್ರಭಾವಳಿ: ಪ್ರೀತಿ ಸಹೋದರತ್ವದ ಪ್ರತೀಕವಾದ ರಂಜಾನ್‌ ಹಬ್ಬವನ್ನು ಕುತುಬ್‌-ಎ–ರಂಜಾನ್‌, ಈದ್‌–ಉಲ್‌–ಫಿತರ್‌ ಹೀಗೆ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತದೆ.

ರಂಜಾನ್‌ಗೆ ಭಾವೈಕ್ಯದ ಪ್ರಭಾವಳಿ ಉಂಟು. ಸಮಬಾಳು ಸಮಪಾಲಿನ ಅರ್ಥ ತಿಳಿಸುವ ಅಪೂರ್ವ ಹಬ್ಬವಾಗಿದೆ. ವೈಷಮ್ಯ, ವೈರತ್ವ ತೊಡೆದು ಹಾಕಿ ಸ್ನೇಹ ಮತ್ತು ಪ್ರೀತಿಯಿಂದ ಒಂದಾಗುವುದು ರಂಜಾನ್ ಮಾಸಾಚರಣೆ ಮುಖ್ಯ ಉದ್ದೇಶ. ಸಾಮೂಹಿಕ ನಮಾಜ್, ಉಪವಾಸದಷ್ಟೇ ನಿಷ್ಠೆಯಿಂದ ಸ್ನೇಹಿತರನ್ನು ಮತ್ತು ಬಂಧುಗಳನ್ನು ಸತ್ಕರಿಸಬೇಕು ಎಂಬುದು ಆ ಆಚರಣೆಯ ಮುಖ್ಯ ನಿಯಮ.

ಪಂಚ ತತ್ವ: ಕಲ್ಮಾ (ಮನಸ್ಸಿನಲ್ಲಿ ದೇವರ ಸ್ಮರಣೆ), ನಮಾಜ್‌ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್‌ (ದಾನ) ಹಾಗೂ ಹಜ್‌ (ಮೆಕ್ಕಾ ಯಾತ್ರೆ) ಇವು ಇಸ್ಲಾಂ ಧರ್ಮದ ಪಂಚ ತತ್ವಗಳು. ಪ್ರತಿಯೊಬ್ಬರು ನಿತ್ಯ ಕಲ್ಮಾ ಆಚರಿಸಬೇಕು. ನಿತ್ಯವೂ 5 ಬಾರಿ ಮಸೀದಿಗೆ ತೆರಳಿ ಪಾರ್ಥನೆ ಸಲ್ಲಿಸಬೇಕು. ರಂಜಾನ್‌ ಮಾಸದಲ್ಲಿ ಉಪವಾಸ ಆಚರಿಸಬೇಕು, ತಮ್ಮ ಆದಾಯದಲ್ಲಿ ಶೇಕಡಾ 2.5ರಷ್ಟು ಭಾಗವನ್ನು ಬಡವರಿಗೆ ದಾನ ಮಾಡಬೇಕು, ಪವಿತ್ರ ಮೆಕ್ಕಾಗೆ ಯಾತ್ರೆ ಹೋಗಬೇಕು ಎಂಬುದೇ ಈ ತತ್ವಗಳ ಸಾರಾಂಶ.

ಉಪವಾಸವು ರಂಜಾನ್‌ ಆಚರಣೆಯ ಅತ್ಯಂತ ಕಠಿಣ ಭಾಗ. ಸೂರ್ಯಾಸ್ತಕ್ಕೆ ಮುಂಚೆಯೇ ಊಟ ಮಾಡಿದ ಬಳಿಕ ಸೂರ್ಯ ಮುಳುಗುವವರೆಗೂ ಏನನ್ನೂ ಸೇವಿಸುವಂತಿಲ್ಲ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರಿಗೆ ಮಾತ್ರ ವಿನಾಯಿತಿ ಇದೆ. ಬಾಯಿ ಒಣಗಿ, ಹೊಟ್ಟೆ ಚುರುಗುಡುತ್ತಿದ್ದರೂ ನೀರು ಸಹ ಕುಡಿಯುವಂತಿಲ್ಲ.

ಸಮೋಸಕ್ಕೆ ಅಗ್ರಸ್ಥಾನ: ಮಸೀದಿಗಳ ಬಳಿ ಹಣ್ಣಿನ ಅಂಗಡಿ, ಸಿಹಿ ಖಾದ್ಯ ಮತ್ತು ಮಾಂಸಾಹಾರದ ಮಳಿಗೆಗಳು ತಲೆಯೆತ್ತಿವೆ. ಹಲೀಮ್‌, ಕಬಾಬ್‌, ತೀತರ್‌ ಘೋಷ್‌, ಫಿಶ್‌ ಫ್ರೈ, ಚಿಕನ್‌ ಕಬಾಬ್‌, ಫಾಲ್‌ ಗರಮಾ ಗರಂ ಮಾಂಸಾಹಾರ ಭಕ್ಷ್ಯಗಳ ಅಂಗಡಿಗಳು ಸಾಲುಸಾಲಾಗಿವೆ.

ಸಿಹಿ ತಿನಿಸು ಮತ್ತು ಹರೀರಾಗಳು ಹಬ್ಬದ ಕಳೆ ಹೆಚ್ಚಿಸಿವೆ. ಉಪವಾಸ ವ್ರತನಿರತರು ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಹಣ್ಣು, ಸಮೋಸ, ಕಚೋರಿ, ಬಟಾಟೆ ವಡಾ, ಪಾವ್‌ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಖರೀದಿಗೆ ಜನ ಅಂಗಡಿಗಳ ಮುಂದೆ ಸಂತೆಯಂತೆ ಸೇರಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT