ಗುರುವಾರ , ಅಕ್ಟೋಬರ್ 29, 2020
20 °C
ಹಾಥರಸ್‌ ಘಟನೆಗೆ ವ್ಯಾಪಕ ಆಕ್ರೋಶ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಿಡಿ

ಅತ್ಯಾಚಾರ ಪ್ರಕರಣ: ವಿವಿಧೆಡೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಉತ್ತರಪ್ರದೇಶದ ದಲಿತ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ನಗರದ ಹಲವೆಡೆ ಬುಧವಾರ ಪ್ರತಿಭಟನೆ ಮಾಡಿದರು.

ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಿದ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದ ಸದಸ್ಯರು, ‘ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧ ಕೃತ್ಯಗಳು ಹೆಚ್ಚಿದ್ದು, ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಆಡಳಿತಾತ್ಮಕ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ಇದೆ. ಉತ್ತರಪ್ರದೇಶ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರ ಸಂಪೂರ್ಣ ವಿಫಲವಾಗಿವೆ’ ಎಂದು ಒಕ್ಕೂಟದ ಸದಸ್ಯೆ ಶಾಂತಮ್ಮ ಕಿಡಿಕಾರಿದರು.

‘ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರ ಹೋಗಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಪೊಲೀಸ್‌ ಇಲಾಖೆಯು ಮಹಿಳೆಯರ ಸುರಕ್ಷತೆ ನಿರ್ಲಕ್ಷಿಸಿವೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾರೆ’ ಎಂದು ಹೇಳಿದರು.

ವ್ಯವಸ್ಥಿತ ಪಿತೂರಿ: ‘ಸ್ಥಳೀಯ ಪೊಲೀಸರು ಪ್ರಕರಣ ಮರೆಮಾಚಲು ರಾತ್ರೋರಾತ್ರಿ ಸಂತ್ರಸ್ತ ಯುವತಿಯ ಅಂತ್ಯಕ್ರಿಯೆ ನಡೆಸಿದ್ದಾರೆ. ಕುಟುಂಬ ಸದಸ್ಯರಿಗೆ ಯುವತಿಯ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಿಲ್ಲ. ಸರ್ಕಾರದ ಕೈಗೊಂಬೆಯಾಗಿರುವ ಪೊಲೀಸರು ಸರ್ವಾಧಿಕಾರಿಗಳಂತೆ ನಡೆದುಕೊಂಡಿದ್ದಾರೆ’ ಎಂದು ಒಕ್ಕೂಟದ ಸದಸ್ಯೆ ಪುಷ್ಪಲತಾ ದೂರಿದರು.

‘ಉತ್ತರಪ್ರದೇಶ ಸರ್ಕಾರದ ಆಡಳಿತ ಯಂತ್ರವು ಪ್ರಕರಣದ ದಿಕ್ಕು ತಪ್ಪಿಸಲು ವ್ಯವಸ್ಥಿತ ಪಿತೂರಿ ನಡೆಸಿದೆ. ಜಿಲ್ಲಾಧಿಕಾರಿಯು ಹೇಳಿಕೆ ಬದಲಿಸುವಂತೆ ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರನ್ನು ಬೆದರಿಸಿದ್ದಾರೆ. ಪೊಲೀಸರು ಮಾಧ್ಯಮಗಳಿಗೆ ಮತ್ತು ವಿಪಕ್ಷ ಮುಖಂಡರಿಗೆ ಹಾಥರಸ್‌ ಗ್ರಾಮ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಸತ್ಯ ಮರೆಮಾಚುವ ಸಂಚು ಮಾಡಿದ್ದಾರೆ’ ಎಂದು ಆರೋಪಿಸಿದರು.

ಕೋರ್ಟ್‌ ಕಳವಳ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು, ‘ಹಾಥರಸ್‌ನ ಸಾಮೂಹಿಕ ಅತ್ಯಾಚಾರ ಪ್ರಕರಣವು ಭಯಾನಕ ಮತ್ತು ಆತಂಕಕಾರಿ ಘಟನೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಆದರೆ, ಉತ್ತರಪ್ರದೇಶ ಸರ್ಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂತ್ರಸ್ತ ಯುವತಿಯ ಕುಟುಂಬಕ್ಕೆ ಪರಿಹಾರ ನೀಡಬೇಕು. ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಶಾಲಾ ಕಾಲೇಜುಗಳಲ್ಲಿ ಮತ್ತು ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ ರಚಿಸಬೇಕು. ಜಸ್ಟಿಸ್ ವರ್ಮಾ ಸಮಿತಿ ಶಿಫಾರಸು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.