ಸೋಮವಾರ, ಆಗಸ್ಟ್ 15, 2022
24 °C
ಸಭೆಯಲ್ಲಿ ಅಧಿಕಾರಿಗಳಿಗೆ ಜಿ.ಪಂ ಸಿಇಒ ಸತ್ಯಭಾಮ ಸೂಚನೆ

ಜಿಲ್ಲೆಯ ಜೀವ ವೈವಿಧ್ಯತೆ ದಾಖಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿನ ವಿಶಿಷ್ಟ ಜೀವ ವೈವಿಧ್ಯತೆಗಳನ್ನು ಸಮರ್ಪಕವಾಗಿ ದಾಖಲಿಸುವ ಕೆಲಸ ಆಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ಸತ್ಯಭಾಮ ಸೂಚಿಸಿದರು.

ಇಲ್ಲಿ ಬುಧವಾರ ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿ, ‘ಪಶ್ಚಿಮ ಘಟ್ಟ ಪ್ರದೇಶವು ಜೀವ ವೈವಿಧ್ಯತೆಯ ಆಗರವಾಗಿದೆ. ಬರವಣಿಗೆಯಲ್ಲಿ ಏನಿದೆಯೋ ಅಷ್ಟು ಮಾತ್ರ ನಮಗೆ ಗೊತ್ತಿದೆ. ಆದರೆ, ನಮಗೆ ಗೊತ್ತಿಲ್ಲದ ಪ್ರಕೃತಿಯ ವಿಷಯಗಳು ಬಹಳಷ್ಟಿವೆ’ ಎಂದು ಅಭಿಪ್ರಾಯಪಟ್ಟರು.

‘ಮನುಷ್ಯನಿಗೆ ಹಗಲು ಸೂಕ್ತವೆನಿಸಿದರೆ ಪ್ರಾಣಿ, ಪಕ್ಷಿ, ಕೀಟಗಳಿಗೆ ರಾತ್ರಿ ಸರಿಯಾದ ಸಮಯ. ಪ್ರಾಣಿ ಮತ್ತು ಪಕ್ಷಿ ಸಂಕುಲದ ಬಗ್ಗೆ ತಿಳಿಯುವ ಕುತೂಹಲ, ಆಸಕ್ತಿ ಇರಬೇಕು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿವಿಜಿ ಸೇರಿದಂತೆ ಹಲವು ಮಹನೀಯರು ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

‘ಜಿಲ್ಲೆಯ ಐತಿಹಾಸಿಕ ಮಾಹಿತಿ ದಾಖಲಿಸುವ ಜತೆಗೆ ವೀರಗಲ್ಲುಗಳು, ಅವುಗಳ ಇತಿಹಾಸ, ಪಾಳೆಗಾರರ ಆಳ್ವಿಕೆ, ಚಿನ್ನದ ಗಣಿ, ಪಶುಪಾಲನೆ, ರೇಷ್ಮೆ ಇಲಾಖೆ, ಕೃಷಿ, ತೋಟಗಾರಿಕೆ, ಮಾವಿನ ವೈಶಿಷ್ಟ್ಯ ಪೂರ್ಣ ತಳಿಗಳು, ಸ್ಥಳೀಯವಾಗಿರುವ ಔಷಧೀಯ ಸಸ್ಯ, ಜೀವ ವೈವಿಧ್ಯತೆ, ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿನ ವಿಶೇಷತೆಗಳನ್ನು ದಾಖಲಿಸಬೇಕು’ ಎಂದು ಸಲಹೆ ನೀಡಿದರು.

‘ಬೂದಿಕೋಟೆ ಬಳಿಯ ಗುಟ್ಟೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಬಾವಲಿಗಳು, ಕೆಜಿಎಫ್‌ನ ಕೃಷ್ಣಾವರಂ ಬಳಿಯ ಕೃಷ್ಣಮೃಗಗಳ ಕುರಿತು ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ವರದಿಯಾಗಿದೆ. ಈ ವಿಚಾರಗಳನ್ನು ದಾಖಲಿಸುವ ಕೆಲಸ ಆಗಬೇಕು’ ಎಂದು ಜಿ.ಪಂ ಸದಸ್ಯ ಬಿ.ವಿ.ಮಹೇಶ್ ಹೇಳಿದರು.

ಇತಿಹಾಸ ಪ್ರಸಿದ್ಧ: ‘ಮುಳಬಾಗಿಲು ತಾಲ್ಲೂಕಿನ ಹರಪನಾಯಕನಹಳ್ಳಿಯ ಬಿಸ್ಸೇಗೌಡರ ಕೋಟೆ ಇತಿಹಾಸ ಪ್ರಸಿದ್ಧವಾಗಿದೆ. ಮುಡಿಯನೂರಿನ ಅರಹಳ್ಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಕ್ಷತ್ರ ಆಮೆಗಳನ್ನು ಸ್ಥಳೀಯರೇ ರಕ್ಷಿಸುತ್ತಿದ್ದಾರೆ’ ಎಂದು ಜಿ.ಪಂ ಅರವಿಂದ್‌ಕುಮಾರ್‌ ಮಾಹಿತಿ ನೀಡಿದರು.

‘ಆವಣಿಯ ವಾಲ್ಮೀಕಿ ಆಶ್ರಮದ ಕುರಿತ ಮಾಹಿತಿ ದಾಖಲಿಸಬಹುದು’ ಎಂದು ಜಿ.ಪಂ ಸದಸ್ಯ ಆರ್.ಕೃಷ್ಣಪ್ಪ ಹೇಳಿದರು. ‘ಕೋಲಾರ ತಾಲ್ಲೂಕಿನ ಧನಮಟ್ನಹಳ್ಳಿಯ ನಾಟಿ ವೈದ್ಯ ವೆಂಕಟೇಶಮೂರ್ತಿ ಅವರ ಬಗ್ಗೆ, ಚಿರತೆ ಮತ್ತು ಜಿಂಕೆಗಳು ಸೇರಿದಂತೆ ಇತರೆ ವನ್ಯಜೀವಿಗಳ ಕುರಿತು ಮಾಹಿತಿ ದಾಖಲಿಸಬೇಕು’ ಎಂದು ಜಿ.ಪಂ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ತಿಳಿಸಿದರು.

ಮಂಡಳಿ ರಚನೆ: ‘ಸುತ್ತಮುತ್ತಲ ಪ್ರದೇಶದಲ್ಲಿ ಅನೇಕ ಔಷಧೀಯ ಸಸ್ಯಗಳಿವೆ. ಸ್ಥಳೀಯವಾಗಿ ಅನೇಕ ವಿಶಿಷ್ಟತೆ ಒಳಗೊಂಡ ಅಂಶಗಳಿರುತ್ತವೆ. ಇವುಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಜೀವ ವೈವಿಧ್ಯತೆ ಕಾಯ್ದೆ ರೂಪಿಸಿ 2004ರಲ್ಲಿ ಜಾರಿಗೊಳಿಸಿತು. ಜೀವ ವೈವಿಧ್ಯತೆಗಳನ್ನು ಜನರೇ ದಾಖಲೀಕರಿಸುವ ದಿಸೆಯಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿ.ಪಂ ಹಾಗೂ ರಾಜ್ಯ ಮಟ್ಟದಲ್ಲಿ ಮಂಡಳಿಗಳು ರಚನೆಯಾಗಿವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ವಿಭಾಗ) ದೇವರಾಜ್ ವಿವರಿಸಿದರು.

‘ಗ್ರಾ.ಪಂನಿಂದ ದಾಖಲೀಕರಣಗೊಂಡ ವಿಷಯಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಶೀಲಿಸಿ ರಾಜ್ಯ ಮಟ್ಟಕ್ಕೆ ಕಳುಹಿಸಿಕೊಟ್ಟರೆ ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಗ್ರಾ.ಪಂನಲ್ಲಿ ಕನ್ನಡದಲ್ಲಿ ಪುಸ್ತಕ ನೀಡಿದರೆ ಉಳಿದ ಹಂತದಲ್ಲಿ ಆಂಗ್ಲ ಭಾಷೆಯಲ್ಲಿ ಪುಸ್ತಕಗಳು ಇರಲಿವೆ’ ಎಂದು ಮಾಹಿತಿ ನೀಡಿದರು.

‘ಮುಳಬಾಗಿಲು ತಾಲ್ಲೂಕಿನಲ್ಲಿ 220ಕ್ಕೂ ಹೆಚ್ಚು ಧಾನ್ಯಗಳ ಬೀಜ ಸಂಗ್ರಹಿಸಿರುವ ಪಾಪಮ್ಮ, ಹನುಮನಹಳ್ಳಿಯಲ್ಲಿನ ಎಲೆಮೂತಿ ಬಾವಲಿ, ಭತ್ತದ ವಿಶಿಷ್ಟ ತಳಿ ಬೈರು ನೆಲ್ಲು, ನಾಟಿ ವೈದ್ಯರು, ಸೂಲಗಿತ್ತಿಯರು ಹೀಗೆ ಅನೇಕ ಅಂಶಗಳನ್ನು ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜನತಾ ಜೀವ ವೈವಿಧ್ಯ ದಾಖಲೀಕರಣ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು. ಜಿ.ಪಂ ಸದಸ್ಯೆ ಭಾಗ್ಯವತಿ, ಉಪ ಕಾರ್ಯದರ್ಶಿ ಕೆ.ಪಿ.ಸಂಜೀವಪ್ಪ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.