ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ತಗ್ಗಿದ ಎಚ್‌ಐವಿ ಸೋಂಕು

ಏಡ್ಸ್‌ ಮುಕ್ತ ಜಿಲ್ಲೆಗೆ ಪಣ: ಮಹಾಮಾರಿ ಬಗ್ಗೆ ಜನರಲ್ಲಿ ಜಾಗೃತಿ
Last Updated 1 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಕೋಲಾರ: ಎಚ್‌ಐವಿ/ಏಡ್ಸ್‌ ಮಹಾಮಾರಿ ಬಗ್ಗೆ ಜಿಲ್ಲೆಯ ಜನ ಜಾಗೃತರಾಗಿದ್ದು, ವರ್ಷದಿಂದ ವರ್ಷಕ್ಕೆ ಎಚ್‌ಐವಿ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದೆ.

ಮಾರಣಾಂತಿಕ ಕಾಯಿಲೆ ಏಡ್ಸ್‌ನ ನಿಯಂತ್ರಣಕ್ಕೆ ಪಣ ತೊಟ್ಟಿರುವ ಏಡ್ಸ್‌ ನಿಯಂತ್ರಣ ಘಟಕವು ಜಿಲ್ಲೆಯಲ್ಲಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ದೇಶದಲ್ಲಿ ಎಚ್‌ಐವಿ ಸೋಂಕಿನ ಸರಾಸರಿ ಪ್ರಮಾಣ ಶೇ 0.28 ಹಾಗೂ ಕರ್ನಾಟಕ ರಾಜ್ಯದಲ್ಲಿ ಶೇ 0.38ರಷ್ಟಿದೆ. ರಾಜ್ಯ ಹಾಗೂ ದೇಶದ ಸರಾಸರಿಗಿಂತಲೂ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ಕಡಿಮೆಯಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಚ್‌ಎಫ್‌ಎಸ್‌) ಪ್ರಕಾರ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಶೇ 1.25ರಷ್ಟು ಎಚ್‌ಐವಿ ಸೋಂಕಿತರಿದ್ದಾರೆ. ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿನ ಪ್ರಮಾಣ ರಾಜ್ಯದ ಸರಾಸರಿಗಿಂತಲೂ ಕಡಿಮೆಯಿದೆ.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 37,721 ಮಂದಿ ಸಾಮಾನ್ಯ ಜನರಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 238 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದೇ ರೀತಿ 16,951 ಗರ್ಭಿಣಿಯರಿಗೆ ಎಚ್‌ಐವಿ ಪರೀಕ್ಷೆ ನಡೆಸಲಾಗಿದ್ದು, 9 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಜಿಲ್ಲೆಯಲ್ಲಿ 2015ರಲ್ಲಿ 498 ಮಂದಿ, 2016ರಲ್ಲಿ 451, 2017ರಲ್ಲಿ 531 ಹಾಗೂ 2018ರಲ್ಲಿ 556 ಮಂದಿ ಎಚ್‌ಐವಿ ಪೀಡಿತರು ಪತ್ತೆಯಾಗಿದ್ದರು. ಹಿಂದಿನ 4 ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ನವೆಂಬರ್‌ ಅಂತ್ಯದವರೆಗೆ 247 ಮಂದಿ ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದಾರೆ.

ಜಿಲ್ಲೆಯ 6 ತಾಲ್ಲೂಕುಗಳಿಂದ ಒಟ್ಟಾರೆ 8,801 ಮಂದಿ ಎಚ್‌ಐವಿ ಸೋಂಕಿತರಿದ್ದಾರೆ ಎಂದು ಏಡ್ಸ್ ನಿಯಂತ್ರಣ ಘಟಕ ಅಂದಾಜಿಸಿದೆ. 1,682 ಮಂದಿ ಎಚ್‌ಐವಿ ಪೀಡಿತರು ಮೃತಪಟ್ಟಿದ್ದು, 5,301 ಮಂದಿ ಎಚ್‌ಐವಿ ಪೀಡಿತರ ಆರೋಗ್ಯದ ಮೇಲೆ ಏಡ್ಸ್‌ ನಿಯಂತ್ರಣ ಘಟಕ ನಿರಂತರ ಕಣ್ಗಾವಲು ಇಟ್ಟಿದೆ. 1,056 ಮಂದಿ ಏಡ್ಸ್‌ ಪೀಡಿತರು ಹೊರ ರಾಜ್ಯ ಹಾಗೂ ಜಿಲ್ಲೆಗಳಿಗೆ ವಲಸೆ ಹೋಗಿದ್ದು, ಅವರ ಬಗ್ಗೆ ಮಾಹಿತಿ ಇಲ್ಲವಾಗಿದೆ.

ಪುರುಷರು ಹೆಚ್ಚು: ಮಹಿಳೆಯರಿಗೆ ಹೋಲಿಸಿದರೆ ಎಚ್‌ಐವಿ ಪೀಡಿತ ಪುರುಷರ ಸಂಖ್ಯೆ ಹೆಚ್ಚಿದೆ. 4,483 ಮಂದಿ ಪುರುಷರು, 3,966 ಮಹಿಳೆಯರು, 163 ಗಂಡು ಮಕ್ಕಳು, 165 ಹೆಣ್ಣು ಮಕ್ಕಳು ಹಾಗೂ 24 ಮಂದಿ ಲೈಂಗಿಕ ಅಲ್ಪಸಂಖ್ಯಾತರು ಎಚ್‌ಐವಿ ಸೋಂಕಿತರಾಗಿದ್ದಾರೆ. ಎಚ್‌ಐವಿ ಪೀಡಿತ 1,086 ಪುರುಷರು, 579 ಮಹಿಳೆಯರು, 13 ಗಂಡು ಮಕ್ಕಳು, 4 ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.

ಮಕ್ಕಳಲ್ಲಿ ಶೂನ್ಯ: ಎಚ್‌ಐವಿ ಪೀಡಿತ ಗರ್ಭಿಣಿಯರು ಜನನ ನೀಡುವ ಮಕ್ಕಳಲ್ಲಿ ಏಡ್ಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಏಡ್ಸ್‌ ನಿಯಂತ್ರಣ ಘಟಕವು ಗರ್ಭಿಣಿಯರಿಗೆ ಆರಂಭದಲ್ಲೇ ಎಚ್ಐವಿ ಪರೀಕ್ಷೆ ಮಾಡಿ ಸೋಂಕು ದೃಢಪಟ್ಟರೆ ತಕ್ಷಣದಿಂದಲೇ ಚಿಕಿತ್ಸೆ ಕೊಡಲಾರಂಭಿಸಿದೆ. ಹೀಗಾಗಿ ಎಚ್‌ಐವಿ ಪೀಡಿತ ಮಕ್ಕಳ ಸಂಖ್ಯೆ ಶೂನ್ಯಕ್ಕೆ ಬಂದು ತಲುಪಿದೆ.

2016ರಲ್ಲಿ 32 ಮಕ್ಕಳಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, 2 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. 2017ರಲ್ಲಿ 31 ಮಕ್ಕಳಿಗೆ ಪರೀಕ್ಷೆ ಮಾಡಿದ್ದು, ಯಾವುದೇ ಮಕ್ಕಳಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. 2018ರಲ್ಲಿ 32 ಮಕ್ಕಳನ್ನು ಪರೀಕ್ಷೆ ಮಾಡಲಾಗಿದ್ದು, 3 ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿರುವುದು ಗೊತ್ತಾಗಿತ್ತು. ಈ ವರ್ಷ 18 ಮಕ್ಕಳಿಗೆ ಎಚ್‌ಐವಿ ಪರೀಕ್ಷೆ ಮಾಡಲಾಗಿದ್ದು, ಯಾವುದೇ ಸೋಂಕು ದೃಢಪಟ್ಟಿಲ್ಲ.

ನಿಯಂತ್ರಣಕ್ಕೆ ಜಾಗೃತಿ: ಏಡ್ಸ್‌ ನಿಯಂತ್ರಣ ಘಟಕವು ಜಿಲ್ಲೆಯಲ್ಲಿ ಜನಪದ ಕಲಾ ತಂಡಗಳ ಮೂಲಕ ಜನ ಜಾಗೃತಿ, ಗೋಡೆ ಬರಹ, ಬೀದಿ ನಾಟಕ, ತೊಗಲು ಗೊಂಬೆಯಾಟ, ವಯಸ್ಕರ ಶಿಕ್ಷಣ ಯೋಜನೆ, ಕಾಲೇಜುಗಳಲ್ಲಿ ಮಾಹಿತಿ ಕಾರ್ಯಾಗಾರ, ರಕ್ತದಾನ ಜಾಗೃತಿ ಜಾಥಾ ನಡೆಸಿದೆ.

ಅಲ್ಲದೇ, ಆರೋಗ್ಯ ಇಲಾಖೆ, ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಎಚ್‌ಐವಿ ಸೋಂಕಿತರಿಗೆ ಐಸಿಟಿಸಿ, ಎಆರ್‌ಟಿ, ಲಿಂಕ್‌ ಎಆರ್‌ಟಿ ಕೇಂದ್ರಗಳ ಮೂಲಕ ಚಿಕಿತ್ಸೆ ನೀಡಿ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದೆ.

ಅಂಕಿ ಸಂಖ್ಯೆ
* 8,801 ಮಂದಿ ಎಚ್‌ಐವಿ ಸೋಂಕಿತರು
* 4,483 ಪುರುಷರಿಗೆ ಏಡ್ಸ್‌
* 3,966 ಮಹಿಳೆಯರಿಗೆ ಸೋಂಕು
* 328 ಮಕ್ಕಳು ಎಚ್‌ಐವಿ ಪೀಡಿತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT