ಮಂಗಳವಾರ, ಜೂನ್ 15, 2021
21 °C
ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಮನವಿ

ಕೋವಿಡ್ ಸಂಕಷ್ಟ: ಜನಪ್ರತಿನಿಧಿಗಳು ಅನ್ನದಾತರ ನೆರವಿಗೆ ಧಾವಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಟೊಮೆಟೊ, ಕೋಸು, ಮಾವು ಸುಗ್ಗಿ ಕಾಲದಲ್ಲೇ ಕೋವಿಡ್ ಅಟ್ಟಹಾಸ ಮೆರೆದಿದ್ದು, ಲಾಕ್‌ಡೌನ್‌ನಿಂದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿರುವ ಅನ್ನದಾತರ ನೆರವಿಗೆ ಚುನಾಯಿತ ಜನಪ್ರತಿನಿಧಿಗಳು, ಆರ್ಥಿಕ ಸ್ಥಿತಿವಂತರು ಮುಂದೆ ಬರಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮನವಿ ಮಾಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಳ್ಳಿಗಳಲ್ಲಿ ಇಂದು ಜನರು ಕೋವಿಡ್‌ನಿಂದ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಈ ಸಂಕಷ್ಟದ ನಡುವೆ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗದೆ ಮನನೊಂದು ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಹಿಂದಿನ ವರ್ಷ ಸಹ ತರಕಾರಿ, ಮಾವಿನ ಸುಗ್ಗಿಯ ಸಂದರ್ಭದಲ್ಲಿ ಕೋವಿಡ್ ಮಹಾಮಾರಿ ವಕ್ಕರಿಸಿ ರೈತರ ಬದುಕನ್ನು ನಾಶಪಡಿಸಿತ್ತು. ಈ ಬಾರಿ ಸಹ ಸುಗ್ಗಿ ಕಾಲದಲ್ಲೇ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿದಿವೆ’ ಎಂದು ಅಭಿಪ್ರಾಯಪಟ್ಟರು.

‘ರೈತರು ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಅಡವಿಟ್ಟು ಬಡ್ಡಿ ಸಾಲ ಪಡೆದು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಉತ್ತಮ ಫಸಲು ಬಂದು ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಕ್ಕಿದರೆ ಸಾಲದಿಂದ ಮುಕ್ತರಾಗಬಹುದೆಂದು ರೈತರು ನಿರೀಕ್ಷಿಸಿದ್ದರು. ಆದರೆ, ಕೋವಿಡ್‌ನಿಂದ ಅನ್ನದಾತರ ನಿರೀಕ್ಷೆ ಹುಸಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತರಕಾರಿ ಕೇಳುವವರಿಲ್ಲ: ‘ಕಳೆದ ವರ್ಷದ ಸಾಲದಿಂದ ಮುಕ್ತಿ ಕಾಣುವ ಕನಸಿನೊಂದಿಗೆ ಬೆಳೆ ಮಾಡಿದ ರೈತರಿಗೆ ಈ ಬಾರಿಯೂ ಕೋವಿಡ್‌ ಸಮಸ್ಯೆ ತಂದೊಡ್ಡಿದೆ. ಶುಭ ಸಮಾರಂಭಗಳು ನಡೆಯದ ಕಾರಣ ಮತ್ತು ಹೋಟೆಲ್‌ಗಳು ಬಂದು ಆಗಿರುವುದರಿಂದ ಮಾರುಕಟ್ಟೆಗಳಲ್ಲಿ ತರಕಾರಿ ಕೇಳುವವರಿಲ್ಲ. ಇದರಿಂದ ಕಂಗೆಟ್ಟಿರುವ ರೈತರು ರಸ್ತೆಗೆ ತರಕಾರಿ ಸುರಿಯುತ್ತಿದ್ದಾರೆ. ಸಾಕಷ್ಟು ರೈತರು ತರಕಾರಿ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದಾರೆ’ ಎಂದರು.

‘ನೋವಿನಿಂದ ಹತಾಶರಾಗಿರುವ ರೈತರಿಗೆ ಆತ್ಮಸ್ಥೈರ್ಯ ತುಂಬಲು ಸರ್ಕಾರವಿದೆ ಎಂದು ಕೈಕಟ್ಟಿ ಕೂರುವುದು ಸರಿಯಲ್ಲ. ಆರ್ಥಿಕ ಸ್ಥಿತಿವಂತರು, ದಾನಿಗಳು, ಜನಪ್ರತಿನಿಧಿಗಳು ರೈತರಿಗೆ ನೆರವಾಗುವ ಸಂಕಲ್ಪ ಮಾಡಬೇಕು. ಜಮೀನುಗಳಿಗೆ ಹೋಗಿ ರೈತರಿಗೆ ಅನ್ಯಾಯವಾಗದಂತೆ ಕೈಲಾದಷ್ಟು ಹಣ ಕೊಟ್ಟು ತರಕಾರಿ ಖರೀದಿಸಿ ತಂದು ಬಡವರಿಗೆ ದಾನ ಮಾಡಬೇಕು’ ಎಂದು ಕೋರಿದರು.

ಮಾವಿಗೆ ಮಾರುಕಟ್ಟೆ: ‘ಜಿಲ್ಲೆಯು ರಾಜ್ಯದಲ್ಲೇ ಮಾವು ಬೆಳೆಗೆ ಹೆಸರುವಾಸಿಯಾಗಿದೆ. ಹಿಂದಿನ ವರ್ಷದಂತೆ ಈ ಬಾರಿಯೂ ಮಾವು ಸುಗ್ಗಿಗೆ ಕೋವಿಡ್‌ನ ಬಿಸಿ ತಟ್ಟಿದೆ, ವರ್ಷವಿಡೀ ಮಾಡಿದ ಸಾಲದ ಶೂಲದಿಂದ ಚೇತರಿಸಿಕೊಳ್ಳಲು ಮಾವು ಬೆಳೆಯನ್ನು ನಂಬಿರುವ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಆದ ಕಾರಣ ಸರ್ಕಾರ ಮಾವು ಮಾರುಕಟ್ಟೆಗೆ ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.