ಮೀಸಲಾತಿ ನಿಗದಿ: ಜಿಲ್ಲಾಧಿಕಾರಿಗೆ ಸೂಚನೆ
ಕೋಲಾರ: ಗ್ರಾಮ ಪಂಚಾಯಿತಿಗಳಲ್ಲಿ 30 ತಿಂಗಳ ಮೊದಲ ಅವಧಿಗೆ ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ನಿಗದಿಪಡಿಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ಜಿಲ್ಲಾಧಿಕಾರಿಗೆ ಮಾರ್ಗಸೂಚಿ ಹಾಗೂ ನಿರ್ದೇಶನ ನೀಡಿ ಶನಿವಾರ ಆದೇಶ ಹೊರಡಿಸಿದೆ.
ಜಿಲ್ಲೆಯಲ್ಲಿನ ತಾಲ್ಲೂಕುಗಳ ಜನಸಂಖ್ಯೆ ಹಾಗೂ ಲಭ್ಯ ಸ್ಥಾನ ಆಧರಿಸಿ ಮೀಸಲಾತಿ ನಿಗದಿಪಡಿಸಬೇಕು. ಮೊದಲಿಗೆ ಪರಿಶಿಷ್ಟ ಜಾತಿ, ನಂತರ ಪರಿಶಿಷ್ಟ ಪಂಗಡದ ಮೀಸಲಾತಿ ನಿಗದಿಯಾಗಲಿದೆ. ನಂತರ ಹಿಂದುಳಿದ ‘ಅ’ ಮತ್ತು ‘ಬ’ ವರ್ಗ ಹಾಗೂ ಕೊನೆಯಲ್ಲಿ ಸಾಮಾನ್ಯ ವರ್ಗದ ಮೀಸಲಾತಿ ನಿಗದಿಪಡಿಸಬೇಕು ಎಂದು ಆಯೋಗ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಜಿಲ್ಲೆಯ 6 ತಾಲ್ಲೂಕುಗಳ ಪೈಕಿ ಕೆಜಿಎಫ್ ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನಿಗದಿಪಡಿಸಿಲ್ಲ. ಉಳಿದ ತಾಲ್ಲೂಕುಗಳಲ್ಲಿ ನಿಯಮದಂತೆ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಆದ್ಯತೆ ನೀಡಲಾಗಿದೆ.
‘ಒಂದೇ ಗ್ರಾಮ ಪಂಚಾಯಿತಿಯಲ್ಲಿ ಏಕಕಾಲಕ್ಕೆ ಪರಿಶಿಷ್ಟ ಜಾತಿ ಅಥವಾ ಪಂಗಡದವರನ್ನೇ ಅಧ್ಯಕ್ಷ–ಉಪಾಧ್ಯಕ್ಷರಾಗಿ ಆಯ್ಕೆ ಮಾಡುವಂತಿಲ್ಲ. ಎರಡೂ ಹುದ್ದೆಗಳಲ್ಲಿ ಒಂದಕ್ಕೆ ಪರಿಶಿಷ್ಟ ಜಾತಿ ಮತ್ತು ಮತ್ತೊಂದಕ್ಕೆ ಪರಿಶಿಷ್ಟ ಪಂಗಡದವರನ್ನು ಆಯ್ಕೆ ಮಾಡುವಂತಿಲ್ಲ. ಎರಡೂ ಹುದ್ದೆಗಳಿಗೆ ಏಕಕಾಲಕ್ಕೆ ಮಹಿಳೆಯರನ್ನು, ಹಿಂದುಳಿದ ಅ ವರ್ಗ ಅಥವಾ ಬ ವರ್ಗದವರನ್ನು ಆಯ್ಕೆ ಮಾಡುವಂತಿಲ್ಲ’ ಎಂದು ಆಯೋಗ ಸ್ಪಷ್ಟಪಡಿಸಿದೆ.
‘ತಾಲ್ಲೂಕುವಾರು ಮೊದಲು ಅಧ್ಯಕ್ಷ ಹುದ್ದೆಗಳನ್ನು, ನಂತರ ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ನಿಗದಿಪಡಿಸಬೇಕು’ ಎಂದು ಆಯೋಗ ಸೂಚಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.