ಬುಧವಾರ, ಏಪ್ರಿಲ್ 14, 2021
32 °C
ಮಹಿಳೆಯರು ಸ್ವಾಭಿಮಾನದಿಂದ ಬದುಕಿ:

ಗ್ರಾಮಸಭೆಯಲ್ಲಿ ಮಹಿಳೆಯರ ನೋವಿಗೆ ಸ್ಪಂದಿಸಿ: ವಕ್ಕಲೇರಿ ಗ್ರಾ.ಪಂ ಅಧ್ಯಕ್ಷ ಮುರಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಗ್ರಾ.ಪಂ ಮಟ್ಟದಲ್ಲಿ ನಡೆಯುವ ಮಹಿಳಾ ಗ್ರಾಮಸಭೆಗಳಲ್ಲಿ ಮಹಿಳೆಯರ ನೋವು, ನಲಿವಿಗೆ ಸ್ಪಂದಿಸಬೇಕು. ಮಹಿಳೆಯರು ಗ್ರಾಮಸಭೆಗಳಲ್ಲಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು’ ಎಂದು ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್‌.ಮುರಳಿ ಸಲಹೆ ನೀಡಿದರು.

ವಕ್ಕಲೇರಿ ಗ್ರಾ.ಪಂನಲ್ಲಿ ಶನಿವಾರ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ರೂಪಿಸಿವೆ. ಆದರೆ, ಅರಿವಿನ ಕೊರತೆಯಿಂದ ಈ ಯೋಜನೆಗಳ ಸವಲತ್ತು ಮಹಿಳೆಯರಿಗೆ ತಲುಪುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿರುವ ಮಹಿಳೆಯರು ಅಬಲೆಯರಲ್ಲ. ಮಹಿಳೆಯರು ಮನೆಗೆ ಸೀಮಿತವೆಂಬ ಪರಿಸ್ಥಿತಿ ಬದಲಾಗಿದೆ. ಮಹಿಳೆಯು ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ಮಹಿಳೆಯರು ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು’ ಎಂದು ಆಶಿಸಿದರು.

‘ಮಹಿಳೆಯರು ಸುಶಿಕ್ಷಿತರಾಗಿ ಕಾನೂನು ತಿಳಿಯಬೇಕು. ಗ್ರಾಮಗಳಲ್ಲಿ ಸ್ವಸಹಾಯ ಸಂಘ ರಚಿಸಿಕೊಂಡು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು’ ಎಂದು ಕಿವಿಮಾತು ಹೇಳಿದರು.

ವಿಶೇಷ ಗ್ರಾಮಸಭೆ: ‘ಮಹಿಳೆಯರು ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ ಎಂದಿಗೂ ವ್ಯರ್ಥವಾಗುವುದಿಲ್ಲ. ಸಮಾಜದಲ್ಲಿ ಪುರುಷರು ಮಹಿಳೆಯರು ಸಮಾನರು. ರಾಜ್ಯದ ಎಲ್ಲಾ ಗ್ರಾ.ಪಂಗಳಲ್ಲಿ ಸಾಮಾನ್ಯ ಸಭೆಗಳ ಮಾದರಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ವಿಶೇಷ ಗ್ರಾಮಸಭೆ ನಡೆಸಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ಪ್ರಾತಿನಿಧ್ಯ: ‘ಸಮಾಜ ಸುಧಾರಕರು, ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ಮಹಿಳೆಯರಿಗೆ ಸಮಾಜದಲ್ಲಿ ಪುರುಷರಷ್ಟೇ ಸಮಾನ ಅವಕಾಶ ದೊರೆತಿವೆ. ಮಹಿಳೆಯರು ಎಲ್ಲಾ ಅಡೆತಡೆ ಮೀರಿ ಎಲ್ಲಾ ರಂಗದಲ್ಲೂ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು’ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಸೋಮಶೇಖರ್ ಹೇಳಿದರು.

‘ಜೀವನದಲ್ಲಿ ಮಹಿಳೆ ಮತ್ತು ಪುರುಷ ಸಮಾಜದ ಅವಿಭಾಜ್ಯ ಅಂಗ. ಹಲವು ಮಹಿಳೆಯರು ಕುಟುಂಬದಲ್ಲಿನ ಪುರುಷರ ಬೆಂಬಲದಿಂದ ಸಾಧನೆ ಮಾಡಿರುವುದನ್ನು ಮರೆಯಬಾರದು. ಮನೆಯಿಂದಲೇ ಆರಂಭವಾಗುವ ಲಿಂಗ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸಮಾನತೆ ಬೆಳೆಸಬೇಕು. ಮಹಿಳೆಯರು ರಬ್ಬರ್‌ ಸ್ಟಾಂಪ್‌ ಆಗಬಾರದು. ಸ್ವಂತ ನಿರ್ಧಾರ ತೆಗೆದುಕೊಂಡು ಸಮಾಜದ ಒಳಿತಿಗೆ ಶ್ರಮಿಸಬೇಕು’ ಎಂದರು.

ಮಹಿಳೆಯರು ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಂಡರು. ವಕ್ಕಲೇರಿ ಗ್ರಾ.ಪಂ ಉಪಾಧ್ಯಕ್ಷೆ ಟಿ.ಎಂ.ಚಿನ್ನಮ್ಮ, ಸದಸ್ಯರಾದ ಜ್ಯೋತಿ, ಅನಿತಾ, ಚಿನ್ನಮ್ಮ, ಜಯಲಕ್ಷ್ಮಿ, ಕಾರ್ಯದರ್ಶಿ ಸೀತಾರಾಮಪ್ಪ ಪಾಲ್ಗೊಂಡರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.